ಸಿರಿಗೆರೆ, ಸಾಣೇಹಳ್ಳಿ ಶ್ರೀ ಪೀಠ ತ್ಯಾಗಕ್ಕೆ ಭಕ್ತರ ಒತ್ತಾಯ, ಉತ್ತರಾಧಿಕಾರಿ ಘೋಷಿಸುವಂತೆ ಆಗ್ರಹ

By Kannadaprabha News  |  First Published Aug 5, 2024, 11:45 AM IST

ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪೀಠದಿಂದ ನಿವೃತ್ತಿ ಘೋಷಿಸಿ ಮುಂದಿನ ಮರಿ ಅಥವಾ ಉತ್ತರಾಧಿಕಾರಿ ಘೋಷಣೆ ಮಾಡಬೇಕು.


 ದಾವಣಗೆರೆ (ಆ.5): ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಾಗೂ ಸಾಣೇಹಳ್ಳಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪೀಠದಿಂದ ನಿವೃತ್ತಿ ಘೋಷಿಸಿ ಮುಂದಿನ ಮರಿ ಅಥವಾ ಉತ್ತರಾಧಿಕಾರಿ ಘೋಷಣೆ ಮಾಡಬೇಕು. ಶ್ರೀಮಠದ ಏಕವ್ಯಕ್ತಿ ಡೀಡ್ ರದ್ದುಪಡಿಸಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಮೂಲ ಬೈಲಾ ಯಥವತ್ತಾಗಿ ಜಾರಿಗೊಳಿಸಬೇಕು ಎಂದು ಸಾದರ ಲಿಂಗಾಯತ ಸಮಾಜ ಒಕ್ಕೊರಲ ನಿರ್ಣಯ ಕೈಗೊಂಡಿದೆ.

ಭಾನುವಾರ ಅಖಿಲ ಭಾರತ ವೀರ‍ಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಬಿ.ಸಿ.ಪಾಟೀಲ, ಎಂಎಲ್‌ಸಿ ರುದ್ರೇಗೌಡ, ಸಮಾಜದ ಹಿರಿಯ ಮುಖಂಡರಾದ ಆನಗೋಡು ನಂಜುಂಡಪ್ಪ, ಅಣಬೇರು ರಾಜಣ್ಣ ಇತರರ ನೇತೃತ್ವದ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ ಈ ತೀರ್ಮಾನ ಕೈಗೊಳ್ಳಲಾಯಿತು.

Tap to resize

Latest Videos

undefined

ಮಾಲಾಶ್ರೀ ಜತೆ ಯಾರು ನಟಿಸಿದ್ರೂ ಸ್ಟಾರ್‌, ಆದ್ರೆ ಈ ಒಬ್ಬ ನಟ ಮಾತ್ರ ಸ್ಟಾರ್ ಆಗಲೇ ಇಲ್ಲ! ಈಗೆಲ್ಲಿದ್ದಾರೆ ಗೊತ್ತಾ?

ಏಕವ್ಯಕ್ತಿ ಡೀಡ್ ವಿಚಾರ ಬೆಳಕಿಗೆ:  ಅಧ್ಯಕ್ಷತೆ ವಹಿಸಿದ್ದ ಶಾಮನೂರು ಮಾತನಾಡಿ, ದಶಕದ ಹಿಂದೆ ಮಲ್ಲಿಕಾರ್ಜುನ ಖರ್ಗೆ, ನಾನು ಸಿರಿಗೆರೆಯಲ್ಲಿ ಕಾರ್ಯಕ್ರಮ ಮುಗಿಸಿ ಹೊರಟಿದ್ದ ವೇಳೆ ಡಾ.ಶಿವಮೂರ್ತಿ ಸ್ವಾಮೀಜಿ ನಮ್ಮನ್ನು ತಡೆದು ತಾವು ಪೀಠ ತ್ಯಾಗ ಮಾಡುವ ಘೋಷಣೆ ಮಾಡಿದರು. ಆಗ ಮುಗ್ಧಭಕ್ತರು ಸ್ವಾಮೀಜಿ ಕಾಲಿಗೆ ಬಿದ್ದು, ಅಂತಹ ನಿರ್ಧಾರ ಕೈಗೊಳ್ಳದಂತೆ ಒತ್ತಡ ಹೇರಿದ್ದರು. ಅದೆಲ್ಲ ಈಗ ಮುಗಿದ ಕಥೆ. ಈಗ ಸ್ವಾಮೀಜಿ ಪೀಠ ತ್ಯಾಗ ಮಾಡುವುದಾಗಿ ಹೇಳಿಲ್ಲ, ಯಾರಿಗೂ ಕೇಳಿಲ್ಲ. 30 ವರ್ಷದ ಹಿಂದೆ ಮಾಡಿಸಿಕೊಂಡ ಏಕವ್ಯಕ್ತಿ ಡೀಡ್ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಈಗ ಗೊತ್ತಾಗಿ, ವಿಚಾರ ನ್ಯಾಯಾಲಯದ ಮೆಟ್ಟಿಲೇರಿದೆ ಎಂದರು.

ಸಮಾಜ ಬಾಂಧವರು 10 ಪೈಸೆಯಿಂದ ಕೋಟ್ಯಂತರ ರು. ಕಾಣಿಕೆ ಕೊಟ್ಟು ಕಟ್ಟಿದ ಮಠ ಇದು. ಸುಮಾರು 300- 400 ಕೋಟಿ ರು. ಹಣ ಭಕ್ತರ ಕಾಣಿಕೆಯಾಗಿದೆ. ಏಕವ್ಯಕ್ತಿ ಡೀಡ್‌ ಯಾರೂ ಒಪ್ಪಲ್ಲ. ಯಾರೋ ಒಬ್ಬರು ಮಾಡಿದ್ದನ್ನು ನೋಡಿ, ಉಳಿದವರು ಅದನ್ನು ಆರಂಭಿಸುತ್ತಾರೆ. ಅಂತಹದ್ದೆಲ್ಲ ಯಾವುದೇ ಸಮಾಜದಲ್ಲೂ ಆಗಬಾರದು. ಈ ವಿಚಾರವನ್ನು ದೊಡ್ಡದು ಮಾಡುವುದೂ ಬೇಡ. ಆ.18ಕ್ಕೆ ಬೆಂಗಳೂರಿನಲ್ಲಿ ಸಮಾಜದ ಪ್ರಮುಖರೆಲ್ಲ ಸೇರಿ ಸ್ವಾಮೀಜಿ ಅವರನ್ನು ಭೇಟಿ ಮಾಡೋಣ, ಪೀಠ ತ್ಯಾಗ ಮಾಡುವಂತೆ ಹಾಗೂ ಏಕವ್ಯಕ್ತಿ ಡೀಡ್ ರದ್ದುಪಡಿಸುವಂತೆ, ಶ್ರೀಮಠಕ್ಕೆ ಮರಿ ಅಥವಾ ಉತ್ತರಾಧಿಕಾರಿ ನೇಮಕ ಮಾಡುವಂತೆ ಮನವಿ ಮಾಡೋಣ ಎಂದು ತಿಳಿಸಿದರು.

ಮಾತ್ರೆ ಸೇವಿಸಿ ಬ್ರಿಟನ್‌ ವ್ಯಕ್ತಿ ಬೆಂಗಳೂರಿನಲ್ಲಿ ಸಾವಿಗೆ ಶರಣು!

ಮೂವರು ಸ್ವಾಮೀಜಿಗಳು ಪೀಠತ್ಯಾಗ ಮಾಡಲಿ: ಶಿಕ್ಷಣ ಸಂಸ್ಥೆ, ಎಂಜಿನಿಯರಿಂಗ್ ಕಾಲೇಜು ಹೀಗೆ ಶಿಕ್ಷಣ ಕ್ಷೇತ್ರಕ್ಕೆ ಶ್ರೀಮಠ ಅಪಾರ ಕೊಡುಗೆ ನೀಡುತ್ತಿತ್ತು. ಆದರೆ, ಇಂದು ಅದೆಲ್ಲ ಮುಚ್ಚುವ ಪರಿಸ್ಥಿತಿ ಬಂದೊದಗಿದೆ. ಇಂತಹ ವೈಭವದ ಸಂಸ್ಥೆಗಳನ್ನು ಮುಚ್ಚುವುದು ನೋವಿನ ಸಂಗತಿ. ಹರಿಹರದ ಪಂಚಮಸಾಲಿ ಮಠದಲ್ಲಿ ಟ್ರಸ್ಟ್ ಮಾಡಿಕೊಂಡು, ಸಮಾಜದ ಮುಖಂಡರೇ ಅದನ್ನು ನಿರ್ವಹಿಸುತ್ತಾರೆ. ಅದೇ ರೀತಿ ಸಿರಿಗೆರೆ ಮಠದಲ್ಲೂ ಆಗಬೇಕು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಡಾ.ಪಂಡಿತಾರಾಧ್ಯ ಸ್ವಾಮೀಜಿ, ಶ್ರೀ ಪ್ರಕಾಶ ಸ್ವಾಮೀಜಿ ಎಲ್ಲರೂ ಪೀಠ ತ್ಯಾಗ ಮಾಡಲಿ. ಅಲ್ಲಿ ಮರಿ ಅಥವಾ ಉತ್ತರಾಧಿಕಾರಿ ನೇಮಿಸುವ ಕೆಲಸ ಆಗಲಿ ಎಂದು ಬೆಂಗಳೂರಿನಲ್ಲಿ ಸ್ವಾಮೀಜಿಗೆ ತಿಳಿಸಿ ಹೇಳೋಣ. ಆ ಸಭೆಯಲ್ಲಿ ಎಲ್ಲ ಸರಿಯಾದರೆ ಸರಿ. ಇಲ್ಲದಿದ್ದರೆ ಮುಂದೆ ಏನು ಮಾಡಬೇಕೆಂಬುದನ್ನು ನಿರ್ಧರಿಸೋಣ ಎಂದು ಶಾಮನೂರು ಸಭೆಗೆ ಹೇಳಿದರು.

ಏಕವ್ಯಕ್ತಿ ಡೀಡ್ ಸರಿಯಲ್ಲ: ಸಿರಿಗೆರೆ ಮಠ ಪರಂಪರೆಯಲ್ಲಿ ಸ್ವಾಮೀಜಿಗೆ 60 ವರ್ಷವಾದರೆ ಪೀಠ ತ್ಯಾಗ ಮಾಡಬೇಕೆಂಬ ನಿಯಮವಿದೆ. ಅದು ಪಾಲನೆಯಾಗಬೇಕು. ಮಠದ ಸ್ಥಿರ-ಚರ ಆಸ್ತಿಯೆಲ್ಲ ಸಮಾಜದ ಭಕ್ತರಿಗೆ ಸೇರಿದ್ದು. ಆದರೆ ಸ್ವಾಮೀಜಿ ಸಮಾಜದ ಯಾರೊಬ್ಬರ ಗಮನಕ್ಕೂ ಬರದಂತೆ 1990ರಲ್ಲಿ ಏಕವ್ಯಕ್ತಿ ಡೀಡ್ ಮಾಡಿಕೊಂಡಿದ್ದು ಸರಿಯಲ್ಲ. ಈ ವಿಚಾರ ಈಚೆಗಷ್ಟೇ ಹೊರಬಂದಿದೆ. ಗುರುಗಳು ಬೇಡಿಕೆಗಳಿಗೆ ಸ್ಪಂದಿಸಿದರೆ ಸಿರಿಗೆರೆ ಮಠದ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಭಕ್ತರು ಮಾಡಲಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್‌ ಹೇಳಿದರು.

ಸ್ವಾಮೀಜಿ ವಿರುದ್ಧ 25 ವರ್ಷ ಹೋರಾಟ: ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಸ್ವಾಮೀಜಿ ವಿರುದ್ಧ 25 ವರ್ಷದಿಂದ ಹೋರಾಟ ನಡೆಸುತ್ತಾ ಬಂದವನು ನಾನು. ನಮ್ಮ ವಿರುದ್ಧ ಕೇಸ್ ದಾಖಲಿಸಿದಾಗ ನನ್ನ ಮಗ ಸಹ ಹೋರಾಟಕ್ಕಿಳಿದ. ತಡವಾದರೂ ಇಂದು ಇಡೀ ಸಮಾಜ ಜಾಗೃತವಾಗಿರುವುದು ಖುಷಿ ತಂದಿದೆ. ಹೋರಾಟ ಈ ಸಭೆಗೆ ಮುಕ್ತಾಯ ಆಗಬಾರದು. ರಾಜ್ಯವ್ಯಾಪಿ ಸಮಾಜದ ಭಕ್ತರು ಸ್ವಾಮೀಜಿ ವಿರುದ್ಧ ಧ್ವನಿ ಎತ್ತಬೇಕು. ಪರಂಪರೆಯ ಮಠವನ್ನು, ಗುರುಪೀಠದ ಗೌರವವನ್ನು ಕಾಪಾಡುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಸಮಾಜದ ಹಿರಿಯ ಮುಖಂಡ ಆನಗೋಡು ನಂಜುಂಡಪ್ಪ ಹೇಳಿದರು.

click me!