ಸಂಭಾಜಿ ಮಹಾರಾಜರಿಗೆ ಜಾರಕಿಹೊಳಿ ಅಪಮಾನ ಆರೋಪ: ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಫಡ್ನವಿಸ್!

By Gowthami K  |  First Published Nov 11, 2022, 6:00 PM IST

 ಧರ್ಮವೀರ ಸಂಭಾಜಿ ಮಹಾರಾಜರಿಗೆ ಸತೀಶ್ ಜಾರಕಿಹೊಳಿ ಅಪಮಾನ ಆರೋಪ.  ಜಾರಕಿಹೊಳಿ ಭಾಷಣದ ವಿಡಿಯೋ ತುಣುಕು ಅಪ್‌ಲೋಡ್ ಮಾಡಿ ದೇವೇಂದ್ರ ಫಡ್ನವಿಸ್ ಆಕ್ರೋಶ. ಇದು ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯಾ ಎಂದು ರಾಹುಲ್ ಗಾಂಧಿಗೆ ದೇವೇಂದ್ರ ಫಡ್ನವಿಸ್ ಪ್ರಶ್ನೆ.


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಳಗಾವಿ (ನ.11): ಹಿಂದೂ ಪದದ ಬಗ್ಗೆ ವಿವಾದಿತ ಹೇಳಿಕೆ ನೀಡಿ ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದು ವಿಷಾದ ವ್ಯಕ್ತಪಡಿಸಿ ತಮ್ಮ ಹೇಳಿಕೆ ವಾಪಸ್ ಪಡೆದಿದ್ದ ಸತೀಶ್ ಜಾರಕಿಹೊಳಿ ಈಗ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ನವೆಂಬರ್ 6ರಂದು ಬೆಳಗಾವಿ ಜಿಲ್ಲೆ ನಿಪ್ಪಾಣಿಯಲ್ಲಿ ನಡೆದ ಮಾನವ ಬಂಧುತ್ವ ವೇದಿಕೆ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಮಾಡಿದ ಭಾಷಣದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರಿಗೆ ಅಪಮಾನ ಮಾಡಿದ ಆರೋಪ ಈಗ ಕೇಳಿ ಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ದೇವೇಂದ್ರ ಫಡ್ನವಿಸ್, 'ಧರ್ಮವೀರ ಸಂಭಾಜಿ ಮಹಾರಾಜರಿಗೆ ಧರ್ಮವೀರ ಬಿರುದು ಬಂದ ಬಗ್ಗೆ ಶಂಕೆ ವ್ಯಕ್ತಪಡಿಸಿ ಛತ್ರಪತಿ ಶಿವಾಜಿ ಮಹಾರಾಜರಿಗೆ ವಿಷಪ್ರಾಶನ ಮಾಡಲಾಗಿತ್ತು ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ ನಾಸ್ತಿಕ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿಗೆ ಧಿಕ್ಕಾರ' ಎಂಬ ಮರಾಠಿ ಬರಹ ಇರುವ ಸತೀಶ್ ಜಾರಕಿಹೊಳಿ ಮಾತನಾಡಿದ 42 ಸೆಕೆಂಡ್‌ಗಳ ವಿಡಿಯೋ ತುಣಕನ್ನು ಸಹ ಅಪ್‌ಲೋಡ್ ಮಾಡಿದ್ದಾರೆ.

Tap to resize

Latest Videos

ಟ್ವಿಟರ್‌ನಲ್ಲಿ ರಾಹುಲ್ ಗಾಂಧಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ದೇವೇಂದ್ರ ಫಡ್ನವಿಸ್, 'ಮಿಸ್ಟರ್ ರಾಹುಲ್ ಗಾಂಧಿ,‌ ಮಹಾನ್ ಛತ್ರಪತಿ ಸಂಭಾಜಿ ಮಹಾರಾಜರ ಬಗ್ಗೆ ನಿಮ್ಮ ಪಕ್ಷದ ಶಾಸಕರು ಆಡಿದ ಈ ಅಸಂಬದ್ಧ, ದಾರಿ ತಪ್ಪಿಸುವ,  ಅಪಮಾನಕರ ಸುಳ್ಳನ್ನು ನೀವು ಒಪ್ಪುತ್ತೀರಾ? ಇದು ನಿಮ್ಮ ಕಾಂಗ್ರೆಸ್ ಪಕ್ಷದ ಅಧಿಕೃತ ಹೇಳಿಕೆಯಾ? ಮಹಾರಾಷ್ಟ್ರ ಇದನ್ನು ಸಹಿಸುವುದಿಲ್ಲ!' ಅಂತಾ ಟ್ವೀಟ್ ಮಾಡಿದ್ದಾರೆ.

ಹಿಂದೂ ಪದ ವಿವಾದಕ್ಕೆ ವಿಷಾದ, ಆಕ್ಷೇಪಿಸಿದವರಿಗೆಲ್ಲ ದಾಖಲೆ ಕಳಿಸುವೆ ಎಂದ ಜಾರಕಿಹೊಳಿ

ಅಷ್ಟಕ್ಕೂ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ 42 ಸೆಕೆಂಡ್ ವಿಡಿಯೋದಲ್ಲಿ ಏನಿದೆ?
ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿರುವ 42 ಸೆಕೆಂಡ್‌ಗಳ ವಿಡಿಯೋದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಬಗ್ಗೆ ಪ್ರಸ್ತಾಪಿಸಿರುವ ಸತೀಶ್ ಜಾರಕಿಹೊಳಿ, 'ಸಂಭಾಜಿ ಮಹಾರಾಜರನ್ನು ಬ್ರಿಟಿಷರು ಹಿಡಿದು ಹತ್ಯೆ ಮಾಡಿದರು‌. ಏಕೆ ಹತ್ಯೆ ಮಾಡಿದರು? ಯಾವಾಗ ಶಿವಾಜಿ ಮಹಾರಾಜರ ಊಟದಲ್ಲಿ ವಿಷ ಹಾಕಲಾಗಿತ್ತೋ ಅವರನ್ನು ಸಂಭಾಜಿ ಮಹಾರಾಜರು ಹಿಡಿದಿದ್ದರು. ಹಿಡಿದು ಅವರಿಗೆ ಶಿಕ್ಷೆ ‌ನೀಡಿದ್ದರು. ಆ ಸಿಟ್ಟಿನಲ್ಲಿ ಅವರನ್ನು ಬ್ರಿಟಿಷರಿಗೆ ಹಿಡಿದು ಕೊಡಲಾಯಿತು‌. ಬಳಿಕ ಅವರಿಗೆ ಧರ್ಮವೀರ ಸಂಭಾಜಿ ಹೆಸರಿಟ್ಟರು. ಅದೊಂದು ಇತಿಹಾಸ. ಈ ದೇಶದ ಇತಿಹಾಸ ಬಹಳ ವಿಚಿತ್ರವಾಗಿದೆ. ಇದನ್ನು ತಿಳಿದುಕೊಳ್ಳಲು ಬಹಳ ಸಮಯ ಬೇಕು. ಬಹಳ ಇದನ್ನ ಅಧ್ಯಯನ ಮಾಡಬೇಕಿದೆ' ಎಂದು ಹಿಂದಿ ಭಾಷೆಯಲ್ಲಿ ಮಾಡಿದ ಭಾಷಣವಿದೆ. 

ಜಾರಕಿಹೊಳಿ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ: ಮಾನವ ಬಂಧುತ್ವ ವೇದಿಕೆ

ಸದ್ಯ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ದೇವೇಂದ್ರ ಫಡ್ನವಿಸ್ ಟ್ಚೀಟ್‌ಗೆ ಏನು ಉತ್ತರ ಕೊಡುತ್ತಾರೆ ಕಾದು ನೋಡಬೇಕು.

click me!