ಮಾಜಿ ಪ್ರಧಾನಿ ದೇವೇಗೌಡರಿಗೆ ತಲುಪದ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಆಹ್ವಾನ

By Sathish Kumar KHFirst Published Nov 11, 2022, 5:04 PM IST
Highlights

ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬರುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳುಹಿಸಿದ ಆಹ್ವಾನ ಪತ್ರಿಕೆ ಮಾಜಿ ಪ್ರಧಾನಿ ದೇವೇಗೌಡರ ಕೈಗೆ ಸೇರಿಲ್ಲ.

ಬೆಂಗಳೂರು: ರಾಜ್ಯದಲ್ಲಿ ನಿರ್ಮಾಣವಾಗಿರುವ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಲೋಕಾರ್ಪಣೆ ಮಾಡಿದ ಸರ್ಕಾರಕ್ಕೆ ಎಲ್ಲೆಡೆಯಿಂದ ಶುಭಾಶಯಗಳು ಹರಿದುಬಂದಿವೆ. ಆದರೆ, ನಮ್ಮ ನಾಡಿನವರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಆಹ್ವಾನ ನೀಡಲಿಲ್ಲ ಎಂಬ ಜೆಡಿಎಸ್‌ ಆರೋಪವು ಸರ್ಕಾರಕ್ಕೆ ಕೊಂಚ ಇರಿಸು-ಮುರಿಸು ತರಿಸುತ್ತಿದೆ. ಈ ಆರೋಪವನ್ನು ತಿರಸ್ಕರಿಸಿದ ಸರ್ಕಾರ, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿಗೆ ಆಹ್ವಾನ ನೀಡಿರುವ ಪ್ರತಿಯನ್ನು ಹಂಚಿಕೊಂಡಿದೆ.

ವಿಮಾನ ನಿಲ್ದಾಣ (Airport)ದಲ್ಲಿ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಬೆನ್ನಲ್ಲೇ ಸರಣಿ ಟ್ವೀಟ್‌ಗಳನ್ನು ಮಾಡಿದ ಜೆಡಿಎಸ್‌ (JDS)ಸರ್ಕಾರದ ವಿರುದ್ಧ ಹರಿಹಾಯ್ದಿದೆ. 'ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಮತ್ತು ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗರಾದ ಎಚ್.ಡಿ. ದೇವೇಗೌಡ (H.D.Devegowda) ಅವರನ್ನು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಆಹ್ವಾನ ಮಾಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಆಗಿದೆ. ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಅಡಿಗಲ್ಲು (footstone) ಹಾಕುವ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸಿದ ಬಿಜೆಪಿ ಸರ್ಕಾರ, ಈಗ ಪ್ರತಿಮೆ ಲೋಕಾರ್ಪಣೆ ಸಮಾರಂಭಕ್ಕೆ ಏಕೆ ಆಹ್ವಾನ ಮಾಡಲಿಲ್ಲ. ಸ್ಥಳೀಯ ಮಟ್ಟದ ಕಾರ್ಯಕ್ರಮ ಆಗಿದ್ದಿದ್ದರೆ ಇದನ್ಜು ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ, ನಾಡಪ್ರಭುಗಳ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಬರುತ್ತಾರೆ ಎಂದರೆ, ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳನ್ನು ಅಧಿಕೃತವಾಗಿ ಕರೆಯಲೇಬೇಕಿತ್ತು. ಈ ಬಗ್ಗೆ ಅನಾದರ ತೋರಿದ್ದು ಅಪಾರ ನೋವುಂಟು ಮಾಡಿದೆ' ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಶಿಷ್ಟಾಚಾರ ಬ್ರೇಕ್: ಕಾರಿನ ರನ್ನಿಂಗ್ ಬೋರ್ಡ್ ಮೇಲೆ ನಿಂತು ಕಾರ್ಯಕರ್ತರಿಗೆ ಮೋದಿ ಸ್ವಾಗತ

ರಾಜಕೀಯ ಕಾರಣಕ್ಕೆ ಕಡೆಗಣನೆ:
ರಾಜ್ಯ ಸರ್ಕಾರ ಮತ್ತು ಬಿಜೆಪಿ (BJP) ನಾಯಕರು ರಾಜಕೀಯ ಕಾರಣಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದರಿಂದ ಕಡೆಗಣಿಸಿದ್ದಾರೆ ಎನ್ನುವುದು ಎಲ್ಲರ ಭಾವನೆಯಾಗಿದೆ. ಇದನ್ನು ಬಿಜೆಪಿ ಕಾರ್ಯಕ್ರಮದಂತೆ ನಡೆಸಿರುವುದು ಮಾಜಿ ಪ್ರಧಾನಿಗಳು ಮಾತ್ರವಲ್ಲದೆ, ಕನ್ನಡಿಗರು ಹಾಗೂ ಸ್ವತಃ ನಾಡಪ್ರಭುಗಳಿಗೇ ಮಾಡಿದ  ಅಪಮಾನ. ಇದು ಅಕ್ಷಮ್ಯದ ಪರಮಾವಧಿ ಆಗಿದೆ. ಸರ್ವರನ್ನೂ ಸಮಾನವಾಗಿ ಕಂಡು ಆದರ್ಶ ಪ್ರಭುವಾಗಿದ್ದ ನಾಡಪ್ರಭು ಕೆಂಪೇಗೌಡರನ್ನು ರಾಜಕೀಯಕ್ಕೆ ಎಳೆಯುವ ಕೆಲಸ ಮಾಡಿರುವುದು ಅತ್ಯಂತ ದುರದೃಷ್ಟಕರ. ರಾಜ್ಯ ವಿಧಾನಸಭೆ ಚುನಾವಣೆಯನ್ನು (Assembly Election) ದೃಷ್ಟಿಯಲ್ಲಿ ಇಟ್ಟುಕೊಂಡೇ ಪ್ರತಿಮೆ ಅನಾವರಣ ಮಾಡಲಾಗಿದೆ ಎನ್ನುವುದು ಸತ್ಯ ಎಂದು ಜೆಡಿಎಸ್‌ ಹೇಳಿಕೊಂಡಿದೆ.

ಕೆಂಪೇಗೌಡರು ಬಿಜೆಪಿ ಆಸ್ತಿಯಲ್ಲ:
ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯ ಸರ್ಕಾರ ಹಾಗೂ ಬಿಜೆಪಿ ನಾಯಕರು ದಾರಿ ತಪ್ಪಿಸಿದ್ದಾರೆ ಎನ್ನುವುದರಲ್ಲಿ ಸಂಶಯ ಇಲ್ಲ. ದೇವೇಗೌಡರ ಬಗ್ಗೆ ಅತೀವ ಗೌರವ ಇಟ್ಟುಕೊಂಡಿರುವ ಪ್ರಧಾನಿಗಳ ಬಗ್ಗೆಯೇ ಕನ್ನಡಿಗರಲ್ಲಿ (Kannadiga's) ತಪ್ಪು ಅಭಿಪ್ರಾಯ ಮೂಡುವಂತೆ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ವರ್ತಿಸಿದ್ದಾರೆ. ಕೆಂಪೇಗೌಡರು ಬಿಜೆಪಿ ಆಸ್ತಿಯಲ್ಲ (BJP Property), ಕೆಲ ಸಚಿವರ ಜಹಗೀರಲ್ಲ, ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುವ ವಿಷಯವೂ ಅಲ್ಲ. ನಾಡಪ್ರಭುಗಳು ಸಮಸ್ತ ಕನ್ನಡಿಗರ ಹೆಮ್ಮೆ. ನಮ್ಮೆಲ್ಲರ ಅರಾಧ್ಯದೈವ. ಇನ್ನು, ಬೆಂಗಳೂರು (Bengaluru) ನಗರ ನಮ್ಮೆಲ್ಲರದ್ದು. ಸಮಸ್ತ ಕನ್ನಡಿಗರ ಜೀವನಾಡಿ. ಈ ಸೂಕ್ಷ್ಮವನ್ನು ರಾಜ್ಯ ಸರ್ಕಾರ ಮರೆತು ಅಪಮಾನಿಸಿದೆ ಎಂದು ಸರಣಿ ಟ್ವೀಟ್‌ಗಳ ಮೂಲಕ ಅಸಮಾಧಾನ ಹೊರ ಹಾಕಿದೆ.

ಬೆಂಗಳೂರು ಸ್ಟಾರ್ಟ್‌ಅಪ್‌ ಕ್ಯಾಪಿಟಲ್‌, ಕೆಂಪೇಗೌಡರ ಕೊಡುಗೆ ಅಪಾರ: ಪ್ರಧಾನಿ ನರೇಂದ್ರ ಮೋದಿ

ದೇವೇಗೌಡರ ಆಹ್ವಾನ ಪ್ರತಿ ವೈರಲ್:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಸ್ವತಃ ಮಾಜಿ ಪ್ರಧಾನಿ ದೇವೇಗೌಡರನ್ನು ಆಹ್ವಾನಿಸಿದ್ದರು. ನ.೧೧ರರಂದು ಉದ್ಘಾಟನೆ ಮಾಡಲಾಗುವ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೆ ಆಹ್ವಾನಿಸಿ ಪತ್ರ ಬರೆದಿದ್ದರು. ಜೆಡಿಸ್‌ ಆರೋಪ ಮಾಡಿದ ತಕ್ಷಣವೇ ಬಿಜೆಪಿ ವತಿಯಿಂದ ಆಹ್ವಾನ ಪತ್ರವನ್ನು (Invitation Letter) ಹಂಚಿಕೊಳ್ಳಲಾಗಿದೆ. ಆದರೆ ಆಹ್ವಾನ ನೀಡುವುದಕ್ಕೆ ಕೊನೆಯ ಹಂತದಲ್ಲಿ ನ.10ರಂದು ಪತ್ರ ಬರೆಯಲಾಗಿದ್ದು, ಇದು ಕೂಡ ಮಾಜಿ ಪ್ರಧಾನಿಗಳ ಕೈ ಸೇರಿಲ್ಲ ಎಂಬ ದೂರು ಕೇಳಿಬಂದಿದೆ. ಭೌತಿಕ ಪತ್ರದ ಬದಲು ಆನ್‌ಲೈನ್‌ನಲ್ಲಿ ಸಾಫ್ಟ್‌ (Soft Copy) ಪ್ರತಿಯನ್ನು ಕಳುಹಿಸಿ ಆಹ್ವಾನ ನೀಡಲಾಗಿದೆ ಎಂಬ ಆರೋಪವೂ ಇದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ- ವಿರೋಧದ ಚರ್ಚೆಗಳು ನಡೆಯುತ್ತಿವೆ. 

click me!