ನಾನು ಕನ್ನಡ ಕಲಿಯಲ್ಲ, ಕನ್ನಡ ಯಾಕೆ ಮಾತಾಡಬೇಕು? ದೇವನಹಳ್ಳಿ ಮ್ಯಾನೇಜರ್ ಧಿಮಾಕು ನೋಡಿ!

Published : Sep 15, 2025, 12:46 PM IST
Devanahalli Toll Gate Manager Kannada

ಸಾರಾಂಶ

ಬೆಂಗಳೂರು ಹೊರವಲಯದಲ್ಲಿ ಮ್ಯಾನೇಜರ್ ಒಬ್ಬರು ಕನ್ನಡ ಕಲಿಯಲು ನಿರಾಕರಿಸಿ, ಸ್ಥಳೀಯರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ನಾನು ಕನ್ನಡ ಭಾಷೆಯನ್ನು ಕಲಿಯುವುದಿಲ್ಲ, ನಾನೇಕು ಕನ್ನಡ ಮಾತನಾಡಬೇಕು? ಎಂದು ಹೇಳುತ್ತಾ ಕನ್ನಡ ಭಾಷೆ ಕಡೆಗಣಿಸುತ್ತಿರುವುದಕ್ಕೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಸೆ.15): ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರಭಾಗದಲ್ಲಿಯೇ ಸ್ಥಳೀಯ ಆಡಳಿತ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಅವಮಾನಿಸುವ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೇವನಹಳ್ಳಿ ತಾಲೂಕಿನ ನಲ್ಲೂರಿನ ಟೋಲ್‌ಗೇಟ್ ಬಳಿ ಒಂದು ವರ್ಷದ ಹಿಂದೆ ಕೆಲಸಕ್ಕೆ ಬಂದ ಮ್ಯಾನೇಜರ್ ಒಬ್ಬರು, ಕನ್ನಡ ಕಲಿಯಲು ಸಹ ಆಸಕ್ತಿ ತೋರದೆ 'ನಾನು ಕನ್ನಡ ಮಾತಾಡಲ್ಲ, ಏನ್ ಬೇಕಾದ್ರೂ ಕಿತ್ಕೊಳ್ಳಿ' ಎಂದು ಅಹಂಕಾರದಿಂದ ಹೇಳಿರುವುದು ಜನರ ಕೋಪಕ್ಕೆ ಗುರಿಯಾಗಿದೆ.

ಕನ್ನಡದಲ್ಲಿ ಮಾತಾಡದವರಿಗೆ ಇಷ್ಟು ಪ್ರೋತ್ಸಾಹ ಯಾಕೆ?

ಸ್ಥಳೀಯರ ಪ್ರಕಾರ, ಅವರು ಪ್ರತಿದಿನ ಸ್ಥಳೀಯ ಕಾರ್ಮಿಕರ ಜೊತೆ ಕೆಲಸ ಮಾಡುತ್ತಾ ಇದ್ದರೂ, ಕನ್ನಡ ಭಾಷೆ ಕಲಿಯುವ ಬದಲು ತಮಿಳು-ತೆಲುಗು ಭಾಷೆಗಳಲ್ಲಿ ಮಾತ್ರ ಸಂವಹನ ಮಾಡುತ್ತಿದ್ದಾರೆ. ಈ ಮ್ಯಾನೇಜರ್‌ನ ಈ ಸ್ಥಳೀಯ ಭಾಷಾ ವಿರೋಧಿ ಧೋರಣೆ ಸ್ಥಳೀಯ ಕನ್ನಡಿಗರ ಗೌರವಕ್ಕೆ ಧಕ್ಕೆ ತಂದಂತಾಗಿದೆ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರುಗಳ ಸಿನೆಮಾಗಳನ್ನ (ತೆಲುಗು, ತಮಿಳು) ನಾವೇ ನೋಡುತ್ತಾ ನಮ್ಮ ಯುವಜನತೆಯನ್ನು ಹಾಳು ಮಾಡ್ತಿದ್ದೀವಿ. ನಮ್ಮ ಕನ್ನಡ ಹುಡುಗಿಯರು ಈ ಚಿತ್ರಗಳನ್ನು ನೋಡುತ್ತಾ ಗುಲ್ಟಿ ಭಾಷೆ ಕಲಿಯುತ್ತಿದ್ದಾರೆ. ಆದರೆ ಇವರು ಕನ್ನಡ ಕಲಿಯೋದಕ್ಕೆ ಸಿದ್ಧರಿಲ್ಲ' ಎಂದು ಸ್ಥಳೀಯ ಯುವಕರು ಕಿಡಿಕಾರಿದ್ದಾರೆ.

ಕರ್ನಾಟಕದ ನೆಲವನ್ನು ಕಬಳಿಸುತ್ತಿದ್ದಾರೆ:

ಇದೇ ವೇಳೆ, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೊರ ರಾಜ್ಯದವರು ತೋಟ ಜಮೀನುಗಳನ್ನು ಖರೀದಿ ಮಾಡುತ್ತಿರುವುದಕ್ಕೂ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. 'ನಮ್ಮ ಭೂಮಿ, ನಮ್ಮ ಸಂಪತ್ತು ಎಲ್ಲವನ್ನೂ ಇವರು ನಿಧಾನವಾಗಿ ಕಬಳಿಸುತ್ತಿದ್ದಾರೆ. ಇಲ್ಲಿ ಬಂದು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೂ ಕನ್ನಡವನ್ನು ನಿರ್ಲಕ್ಷಿಸುವುದು ಅಸಹ್ಯ' ಎಂದು ಹಿರಿಯ ನಾಗರಿಕರು ಹೇಳಿದ್ದಾರೆ.

ಕನ್ನಡಿಗರ ಹಕ್ಕು ರಕ್ಷಣೆ ಅಗತ್ಯ:

ಸ್ಥಳೀಯ ಸಂಘಟನೆಗಳು ಕನ್ನಡ ಭಾಷೆಯ ಗೌರವ ಕಾಪಾಡಲು ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿವೆ. 'ಕನ್ನಡ ಕಲಿಯದವರಿಗೆ ಸರ್ಕಾರದ ಅನುಮತಿ ಮತ್ತು ಸೌಲಭ್ಯ ನೀಡಬಾರದು. ರಾಜ್ಯಕ್ಕೆ ಬರುವ ಪ್ರತಿಯೊಬ್ಬರೂ ಕನಿಷ್ಠ ಮಟ್ಟದಲ್ಲಿ ಕನ್ನಡ ಕಲಿಯಬೇಕು ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಬೇಕು' ಎಂದು ಒತ್ತಾಯ ವ್ಯಕ್ತವಾಗಿದೆ.

ಕನ್ನಡದ ನೆಲದಲ್ಲಿ ಕನ್ನಡವೇ ನಿರ್ಲಕ್ಷ್ಯಗೊಳ್ಳುತ್ತಿರುವುದು ನೋವಿನ ಸಂಗತಿ. ಭಾಷೆಯ ಗೌರವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಹೊರ ರಾಜ್ಯದವರು ಸಹ ಈ ನೆಲದ ಸಂಸ್ಕೃತಿ ಮತ್ತು ಭಾಷೆಯನ್ನು ಗೌರವಿಸುವುದು ಕಡ್ಡಾಯ ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌