ನಕಲಿ ಬೀಜ, ಗೊಬ್ಬರ ಜಾಲದ ಮೂಲ ನಾಶಪಡಿಸಿ: ಸಚಿವ ಬಿ.ಸಿ.ಪಾಟೀಲ್‌

By Kannadaprabha NewsFirst Published Jun 29, 2022, 12:00 AM IST
Highlights

*  ಕಂಪನಿಗಳ ವಿರುದ್ಧ ಕ್ರಿಮಿನಲ್‌ ಕೇಸಿನ ಎಚ್ಚರಿಕೆ
*   ಎಲ್ಲ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಪಡೆದಿರಬೇಕು
*  ವಂಚಕರ ವಿರುದ್ಧ ಚಾರ್ಜ್‌ಶೀಟ್‌ ಹಾಕಿದರೆ ಸಾಲದು, ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು 

ಬೆಂಗಳೂರು(ಜೂ.29):  ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟಗಾರರ ಮೇಲೆ ಹದ್ದಿನ ಕಣ್ಣಿಡಿ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಎಂಬಂತೆ ಆಗದೆ ನಕಲಿ ಜಾಲದ ಮೂಲವನ್ನೇ ನಾಶಪಡಿಸಬೇಕು. ಜೊತೆಗೆ ದಂಧೆಕೋರರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕೃಷಿ ವಿಚಕ್ಷಣಾ ದಳ (ಜಾಗೃತ ಕೋಶ)ವನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ವಿಕಾಸಸೌಧದ ಕಚೇರಿಯಲ್ಲಿ ಮಂಗಳವಾರ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.

ಬಿತ್ತನೆ ಚುರುಕುಗೊಳ್ಳುತ್ತಿದ್ದು ಕಾಳಸಂತೆ ಮಾರಾಟಗಾರರು ರೈತರಿಗೆ ಮೋಸ ಮಾಡಲೆಂದು ನಕಲಿ ಬಿತ್ತನೆ ಬೀಜ, ರಸ ಗೊಬ್ಬರ ಮಾರಲು ಕಾಯುತ್ತಿರುತ್ತಾರೆ. ಇಂತವರ ಮೇಲೆ ಕೃಷಿ ವಿಚಕ್ಷಣಾ ದಳ ಹದ್ದಿನ ಕಣ್ಣಿಟ್ಟು ಸದಾ ಎಚ್ಚರಿಕೆಯಿಂದ ಇರಬೇಕು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಎನ್ನುವಂತಾಗದೇ ನಕಲಿ ಜಾಲದ ಮೂಲವನ್ನೇ ನಾಶಪಡಿಸಬೇಕು. ವಂಚಕರ ವಿರುದ್ಧ ಚಾರ್ಜ್‌ಶೀಟ್‌ ಹಾಕಿದರೆ ಸಾಲದು, ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

Latest Videos

PMFBY: ರೈತರ ಮನೆ ಬಾಗಿಲಿಗೇ ಫಸಲ್ ಬಿಮಾ ಪಾಲಿಸಿ: ಬಿ.ಸಿ. ಪಾಟೀಲ್‌

ಕಂಪೆನಿಯು ಎಷ್ಟೇ ದೊಡ್ಡದಾಗಿರಲಿ, ರೈತರಿಗೆ ಮಾರುವ ಬೀಜ, ಗೊಬ್ಬರ ಮತ್ತಿತರ ಉತ್ಪನ್ನಗಳು ಅಧಿಕೃತವಾಗಿರಬೇಕು. ಎಲ್ಲ ಉತ್ಪನ್ನಗಳ ಮಾರಾಟಕ್ಕೆ ಪರವಾನಗಿ ಪಡೆದಿರಬೇಕು. ಯಾವುದೋ ಒಂದು ಉತ್ಪನ್ನಕ್ಕೆ ಪರವಾನಗಿ ಪಡೆದು ಅದರ ಹೆಸರಿನಲ್ಲಿ ಮತ್ತೊಂದು ಉತ್ಪನ್ನ ಮಾರಾಟ ಮಾಡಿದರಾಯಿತು ಎಂಬ ಮನೋಭಾವ ಕಂಪನಿಗಳಿಗೆ ಬರದಂತೆ ಕಾರ್ಯನಿರ್ವಹಿಸಿ ಎಂದು ವಿವರಿಸಿದರು.

ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ:

ಕಂಪೆನಿಗಳು ತಪ್ಪು ಮಾಡಿದರೆ ಮುಲಾಜಿಲ್ಲದೇ ನೋಟಿಸ್‌ ನೀಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು. ನಿಗದಿತ ಸೂಚಿತ ಪ್ರದೇಶಗಳಲ್ಲಿ ಸೂಚಿಸಿದ ಕಂಪೆನಿ ಮಾರಾಟಗಾರರು ಮಾತ್ರ ಕೃಷಿ ಉತ್ಪನ್ನ, ಬೀಜ ಗೊಬ್ಬರವನ್ನು ಮಾರಾಟ ಮಾಡಬೇಕು. ರೈತರಿಗೆ ಮೋಸವಾದ ನಂತರ ಎಚ್ಚೆತ್ತುಕೊಳ್ಳುವುದಕ್ಕಿಂತ ಅನ್ಯಾಯವಾಗುವ ಮೊದಲೇ ಕೃಷಿ ವಿಚಕ್ಷಣಾ ದಳ ಸನ್ನದ್ಧವಾಗಿರಬೇಕು ಎಂದು ನಿರ್ದೇಶನ ನೀಡಿದರು.

ಕೃಷಿ ವಿಚಕ್ಷಣಾ ದಳವನ್ನು ಇನ್ನಷ್ಟು ಬಲಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಲು ಹೊಸದಾಗಿ ಮೈಸೂರು ಹಾಗೂ ಕಲಬುರಗಿಯಲ್ಲಿ ನೂತನ ಕಚೇರಿಯನ್ನು ಆರಂಭಿಸಲಾಗುವುದು. ಜು.5 ಕ್ಕೆ ಮೈಸೂರಿನಲ್ಲಿ ನೂತನ ಕಚೇರಿ ಉದ್ಘಾಟನೆಗೊಳ್ಳಲಿದೆ. ಕಲಬುರಗಿ ಕಚೇರಿಯೂ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿಸಿದರು. ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತ ಶರತ್‌ ಪಿ, ವಿಚಕ್ಷಣಾ ದಳದ ಅನೂಪ್‌ ಮತ್ತಿತರರು ಉಪಸ್ಥಿತರಿದ್ದರು.
 

click me!