ನಾರಾಯಣಗುರು ನಿಗಮಕ್ಕೆ ಕ್ಯಾರೆ ಎನ್ನದ ಸರ್ಕಾರ, ಬಿಲ್ಲವ ಸಮುದಾಯ ಅಸಮಾಧಾನ

* ನಾರಾಯಣಗುರು ನಿಗಮಕ್ಕೆ ಸರಕಾರದ ಒಪ್ಪಿಗೆ ಸಿಕ್ಕಿಲ್ಲ
* ಕರಾವಳಿಯ ವೋಟ್ ಬ್ಯಾಂಕ್ ಬಿಲ್ಲವ ಸಮುದಾಯ ಬೇಸರ
* ಶೇಂದಿ ತೆಗೆಯಲು ಅವಕಾಶ ಕೋರಿ ರಾಜ್ಯಾದ್ಯಂತ ಹೋರಾಟ
* ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆಗೆ ಸಮುದಾಯದಲ್ಲಿ ಅಸಮಾಧಾನ


ಉಡುಪಿ, (ಜೂನ್.28): ಚುನಾವಣೆಗೆ ದಿನಗಳು ಸಮೀಪಿಸುತ್ತಿದ್ದಂತೆ, ನಾರಾಯಣ ಗುರುಗಳ ಹೆಸರಿನಲ್ಲಿ ನಿಗಮ ಸ್ಥಾಪಿಸಲು ಒತ್ತಾಯ ಮತ್ತಷ್ಟು ಬಲಗೊಂಡಿದೆ. ಆದರೆ ರಾಜ್ಯ ಸರಕಾರ ಪ್ರತಿಯೊಂದು ಸಮುದಾಯಕ್ಕೂ ನಿಗಮ ನೀಡಲು‌ ಸಾಧ್ಯವಿಲ್ಲ ಎಂಬ ಧೋರಣೆ ಹೊಂದಿದ್ದು, ಬೇಡಿಕೆ ಈಡೇರಿಸಲು ಉತ್ಸುಕತೆ ತೋರುತ್ತಿಲ್ಲ. ಕರಾವಳಿಯ ಪ್ರಬಲ ವೋಟ್ ಬ್ಯಾಂಕ್ ಆಗಿರುವ ಬಿಲ್ಲವ ಸಮುದಾಯ ನಿಗಮ ಸ್ಥಾಪನೆಗೆ ಸರಕಾರ ಆಸಕ್ತಿ ತೋರಿಸದೆ ಇರುವ ಬಗ್ಗೆ ಬೇಸರಗೊಂಡಿದೆ.

ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳಿಗೆ ಅವಮಾನ ಆಗುವ ವಿಚಾರ ಪದೇಪದೇ ಮುನ್ನೆಲೆಗೆ ಬರುತ್ತದೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣಗುರುಗಳ ಟ್ಯಾಬ್ಲೋ ಗೆ ಅವಕಾಶ ನೀಡದಿರುವ ಬಗ್ಗೆ ವಿವಾದ ಎದ್ದಿತ್ತು. ನಂತರ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ನಾರಾಯಣ ಗುರುಗಳಿಗೆ ಅವಮಾನವಾಗಿದೆ ಎಂದು ಗದ್ದಲವಾಗಿತ್ತು. ಇದೀಗ ಮತ್ತೊಂದು ಸಮಸ್ಯೆ ಎದುರಾಗಿದೆ. 

Latest Videos

ನಾರಾಯಣಗುರುಗಳ ಹೆಸರಲ್ಲಿ ಶೀಘ್ರ ನಿಗಮ: ಸಚಿವ ಸುನೀಲ್‌

ನಾರಾಯಣ ಗುರುಗಳ ಹೆಸರಲ್ಲಿ ನಿಗಮ ಸ್ಥಾಪಿಸಬೇಕು ಅನ್ನೋದು ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿರುವ ಬಿಲ್ಲವ ಅಥವಾ ಈಡಿಗ ಸಮುದಾಯದ ಒತ್ತಾಯ. ಈ ಬಗ್ಗೆ ಆಗ್ರಹಿಸಲು ಇತ್ತೀಚೆಗೆ ಕಲಬುರ್ಗಿಯಲ್ಲಿ ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ಪ್ರತಿಭಟನೆ ಕೂಡಾ ನಡೆದಿತ್ತು. ಆದರೆ ಬಿಲ್ಲವ ಸಮುದಾಯದ ಬೇಡಿಕೆಗೆ ರಾಜ್ಯ ಸರಕಾರ ಸ್ಪಂದಿಸುವ ಲಕ್ಷಣಗಳು ಕಾಣುತ್ತಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅದೇ ಸಮುದಾಯದ ಸಚಿವ, ಕೋಟ ಶ್ರೀನಿವಾಸ ಪೂಜಾರಿ ನೀಡಿರುವ ಹೇಳಿಕೆಗೆ, ಸಮುದಾಯದ ಕೆಲ ನಾಯಕರು ಆಕ್ಷೇಪಿಸಿದ್ದಾರೆ. ಕರಾವಳಿಯ ಶಾಸಕರ ಜೊತೆ ಅಂದಿನ ಸಿಎಂ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅವರಲ್ಲಿಗೆ ಕೋಟ ಶ್ರೀನಿವಾಸ ಪೂಜಾರಿ ನಿಯೋಗ ಕೊಂಡೊಯ್ದಿದ್ದರು. ಪ್ರತಿಯೊಂದು ಸಮುದಾಯಕ್ಕೂ ನಿಗಮ ನೀಡುವುದು ಕಠಿಣವಾಗುತ್ತದೆ ಮುಂದೆ ನೋಡೋಣ ಎಂಬ ಅಭಿಪ್ರಾಯವನ್ನು ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ. ನಿಗಮ ಸ್ಥಾಪನೆಗೆ ರಾಜ್ಯ ಬಿಜೆಪಿ ಸರಕಾರಕ್ಕೆ ಯಾವುದೇ ಆಸಕ್ತಿ ಇಲ್ಲ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಬಿಲ್ಲವ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

90ರ ದಶಕದ ಅಂತ್ಯಭಾಗದಲ್ಲಿ ರಾಜ್ಯಾದ್ಯಂತ ಶೇಂದಿ  ತೆಗೆಯುವುದನ್ನು ನಿಷೇಧಿಸಲಾಗಿತ್ತು. 30 ವರ್ಷಗಳ ಹಿಂದೆ ಈ ಬಗ್ಗೆ ಬಾರಿ ಹೋರಾಟ ನಡೆದ ಪರಿಣಾಮ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶೇಂದಿ  ತೆಗೆಯಲು ಅವಕಾಶ ನೀಡಲಾಗಿದೆ. ಬಿಲ್ಲವ ಅಥವಾ ಈಡಿಗ ಸಮುದಾಯದವರ ಕುಲಕಸುಬಾದ ಶೇಂದಿ ತೆಗೆಯುವ ಉದ್ಯೋಗಕ್ಕೆ ಮತ್ತೆ ಎಲ್ಲ ಜಿಲ್ಲೆಗಳಲ್ಲೂ ಅವಕಾಶ ನೀಡಬೇಕು ಅನ್ನೋದು ಪ್ರಣವಾನಂದ ಶ್ರೀಗಳ ಹೋರಾಟವಾಗಿತ್ತು. ಮೂರು ದಶಕಗಳ ನಂತರ ಶೇಂದಿ ತೆಗೆಯುವ ಉದ್ಯಮಕ್ಕೆ ಮತ್ತೆ ಅವಕಾಶ ನೀಡಬೇಕೇ? ಎಂಬ ಬಗ್ಗೆ ವಿಚಾರ ವಿಮರ್ಶೆ ನಡೆಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ಈ ಕಾಲಘಟ್ಟದಲ್ಲಿ ಶೇಂದಿ ತೆಗೆಯುವುದು ಅಗತ್ಯವಿದೆಯೇ? ಮರಹತ್ತಿ ಬಿದ್ದು ಅಪಾಯ ತಂದುಕೊಳ್ಳಬೇಕೇ? ಇದರಿಂದ ಸಮಾಜ ಮತ್ತೆ ಹಿಂದಕ್ಕೆ ಹೋಗುವ ಅಪಾಯವಿದೆ... ಎಂದು ಸಮುದಾಯದ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಬಿಲ್ಲವ ಸಮುದಾಯದ ಈ ಎರಡು ಪ್ರಮುಖ ಬೇಡಿಕೆಗಳಿಗೆ ರಾಜ್ಯ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವುದು ಸಮುದಾಯದ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ.

ಕರಾವಳಿಯ 13 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಲ್ಲವ ಮತಗಳು ನಿರ್ಣಾಯಕವಾಗಿದೆ. ನಾರಾಯಣಗುರುಗಳ ಯಾವುದೇ ವಿಚಾರ ಪ್ರಸ್ತಾಪವಾದಾಗ ರಾಜಕೀಯ ಪಕ್ಷಗಳು ಸಂವೇದನೆಯಿಂದ ಸ್ಪಂದಿಸುವುದು ಅಗತ್ಯವಾಗಿದೆ. ಬಿಲ್ಲವ ಸಮುದಾಯದ ಬಹುಕಾಲದ ಈ ಎರಡಯ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದೆ ಹೋದರೆ, ಚುನಾವಣಾ ವಿಷಯವಾಗಿ ಆಗ್ರಹಗಳು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

click me!