
ಧಾರವಾಡ : ಧಾರವಾಡದಲ್ಲಿ ಜ.4ರಿಂದ 6ರವರೆಗೆ ನಡೆಯಲಿರುವ 84ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು. ಧಾರವಾಡದ ಗರಿಮೆಗಳಾದ ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ವಿಶ್ವವಿದ್ಯಾಲಯ, ಡಯಟ್ ಹಾಗೂ ಸಾಹಿತ್ಯ ಮತ್ತು ಸಂಗೀತದ ಹಿನ್ನೆಲೆಯ ಕಲ್ಪನೆಯಲ್ಲಿ ಕಲಾವಿದ ಮಹೇಶ ಪತ್ತಾರ ರಚಿಸಿದ ಈ ಲಾಂಛನವನ್ನು ಶುಕ್ರವಾರ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಬಿಡುಗಡೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಲಾಂಛನ ಸೇರಿ ಕನ್ನಡದ ಬಾವುಟ, ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮನ ಪ್ರತಿಮೆ, ಪುಸ್ತಕಗಳ ಹೊತ್ತಿಗೆ, ಸಂಗೀತದ ಪರಿಕರಗಳನ್ನು ಒಳಗೊಂಡ ಲಾಂಛನ ಇದಾಗಿದೆ. ಲಾಂಛನ ಬಿಡುಗಡೆ ಜತೆಗೆ, ಸಮ್ಮೇಳನದ ಮಾಹಿತಿ ಇಡೀ ಜಗತ್ತಿಗೆ ಪಸರಿಸಲು ಸಿದ್ಧವಾದ ವೆಬ್‌ಸೈಟ್( (abkssdwd.org) ಅನ್ನು ಸಹ ಜಿ.ಪಂ. ಸಭಾಂಗಣದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಚಿವರು ಲೋಕಾರ್ಪಣೆಗೊಳಿಸಿದರು.
ಮುಂದುವರಿದ ಗೊಂದಲ: ಸಮಯದ ಅಭಾವದಿಂದ ಈಗಾಗಲೇ ಜನವರಿ ತಿಂಗಳಿಗೆ ಮುಂದೂಡಿರುವ ಸಾಹಿತ್ಯ ಸಮ್ಮೇಳನಕ್ಕೆ ಇದೀಗ ಸ್ಥಳ ನಿಗದಿ ಕುರಿತಂತೆ ಮತ್ತಷ್ಟುಗೊಂದಲಗಳು ಸೃಷ್ಟಿಯಾಗಿವೆ. ಆರಂಭದಲ್ಲಿ ಶತಮಾನದ ಇತಿಹಾಸ ಹೊಂದಿರುವ ಕರ್ನಾಟಕ ಕಾಲೇಜು ಆವರಣದಲ್ಲಿ ಸಮ್ಮೇಳನ ನಡೆಸುವ ಚರ್ಚೆಯಾಗಿ ಅಂತಿಮವೂ ಆಗಿತ್ತು. ನಂತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ದೃಷ್ಟಿಯಿಂದ ಕೃಷಿ ವಿವಿಯಲ್ಲೇ ಸಮ್ಮೇಳನ ನಡೆಸಲು ಚಿಂತನೆ ನಡೆಯಿತು.
ಇದಕ್ಕೆ ಪೂರಕವಾಗಿ 2 ದಿನಗಳ ಹಿಂದಷ್ಟೇ ಜಿಲ್ಲಾಧಿಕಾರಿಗಳ ಹಾಗೂ ಸಾಹಿತಿಗಳ ಸಭೆಯಲ್ಲಿ ಈ ವಿಚಾರ ತೀರ್ಮಾನವೂ ಆಗಿತ್ತು. ಆದರೆ, ಶುಕ್ರವಾರ ಮತ್ತೆ ಈ ಕುರಿತ ಗೊಂದಲ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ