ಎಚ್‌ಡಿಕೆ ಪ್ರಯತ್ನಕ್ಕೆ ಸಹಕಾರ ಸಿಗುತ್ತಿಲ್ಲ: ರೈತರಿಗೆ ಸಂಕಷ್ಟ ತಪ್ಪುತ್ತಿಲ್ಲ!

By Web DeskFirst Published Nov 17, 2018, 8:41 AM IST
Highlights

ರಾಜ್ಯ ಸರ್ಕಾರದ ಅಡಿ ಬರುವ ಸಹಕಾರ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ, ಕೆಲ ಖಾಸಗಿ ಬ್ಯಾಂಕ್‌ಗಳ ನಡುವೆ ಇನ್ನೂ ಒಮ್ಮತ ಮೂಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗಂಭೀರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೂ ರೈತರ ಸಾಲ ಮನ್ನಾ ಬಗ್ಗೆ ಇನ್ನೂ ಸ್ಪಷ್ಟತೆ ಮೂಡದೇ ಇರುವ ಕಾರಣ ಗೊಂದಲ ಮುಂದುವರೆದಿದೆ’- ಕೃಷಿ ಸಚಿವ, ಎನ್‌.ಎಚ್‌. ಶಿವಶಂಕರರೆಡ್ಡಿ

ಬೆಂಗಳೂರು[ನ.17]: ‘ರಾಜ್ಯ ಸರ್ಕಾರ ಘೋಷಿಸಿರುವ ರೈತರ ಸಾಲ ಮನ್ನಾ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. ಖಾಸಗಿ ಹಾಗೂ ರಾಷ್ಟ್ರೀಕೃತ ಸಾಲ ಮನ್ನಾ ಬಗ್ಗೆ ಸರ್ಕಾರಿ ಆದೇಶವೂ ಹೊರ ಬಿದ್ದಿಲ್ಲ. ಹೀಗಾಗಿ ಖಾಸಗಿ ಬ್ಯಾಂಕ್‌ಗಳ ವಿಚಾರದಲ್ಲಿ ಗೊಂದಲ ಮುಂದುವರಿದ್ದು, ಎಕ್ಸಿಸ್‌ನಂತಹ ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡದ ರೈತರ ವಿರುದ್ಧ ನ್ಯಾಯಾಲಯದ ಮೊರೆ ಹೋಗುತ್ತಿವೆ. ರೈತರಿಗೆ ಬಂಧನದ ಭೀತಿ ಎದುರಾಗಿದೆ’ ಎಂದು ಕುಮಾರಸ್ವಾಮಿ ಸಂಪುಟದ ಕೃಷಿ ಸಚಿವ, ಕಾಂಗ್ರೆಸ್‌ನ ಎನ್‌.ಎಚ್‌. ಶಿವಶಂಕರರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಅಡಿ ಬರುವ ಸಹಕಾರ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ, ಕೆಲ ಖಾಸಗಿ ಬ್ಯಾಂಕ್‌ಗಳ ನಡುವೆ ಇನ್ನೂ ಒಮ್ಮತ ಮೂಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಗಂಭೀರವಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೂ ರೈತರ ಸಾಲ ಮನ್ನಾ ಬಗ್ಗೆ ಇನ್ನೂ ಸ್ಪಷ್ಟತೆ ಮೂಡದೇ ಇರುವ ಕಾರಣ ಗೊಂದಲ ಮುಂದುವರೆದಿದೆ’ ಎಂದು ಹೇಳಿದ್ದಾರೆ.

‘ಕುಮಾರಸ್ವಾಮಿ ಅವರು ಜುಲೈ 12ರಂದು, 2018ರ ಜು.10ರವರೆಗೆ ರೈತರು ಪಡೆದಿರುವ 1 ಲಕ್ಷ ರು. ಚಾಲ್ತಿ ಸಾಲ ಹಾಗೂ 2009ರ ಏಪ್ರಿಲ… 1ರಿಂದ 2017ರ ಡಿಸೆಂಬರ್‌ 31 ರವರೆಗೆ ರೈತರು ಪಡೆದಿರುವ 2 ಲಕ್ಷ ರು.ವರೆಗಿನ ಎಲ್ಲಾ ಸುಸ್ತಿ ಬೆಳೆ ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡುವುದಾಗಿ ಹೇಳಿದ್ದರು. ರೈತರ ಸಾಲವನ್ನು ಸರ್ಕಾರವು ನಾಲ್ಕು ವರ್ಷ, ನಾಲ್ಕು ಕಂತಿನಲ್ಲಿ ಬ್ಯಾಂಕ್‌ಗಳಿಗೆ ಪಾವತಿಸಲಿದೆ. ಇದಕ್ಕೆ ಬ್ಯಾಂಕ್‌ಗಳೂ ಒಪ್ಪಿಗೆ ನೀಡಿದ್ದು, ರೈತರು ಹೊಸ ಸಾಲ ಪಡೆಯಲು ಅನುಕೂಲವಾಗುವಂತೆ ಸುಸ್ತಿ ಸಾಲ ಮನ್ನಾ ಮಾಡಿರುವ ಋುಣಮುಕ್ತ ಪತ್ರಗಳನ್ನು ನೀಡುವ ಭರವಸೆ ನೀಡಿದ್ದರು. ಆದರೆ, ಈವರೆಗೂ ಸಾಲ ಮನ್ನಾ ವಿಷಯದಲ್ಲಿ ಸ್ಪಷ್ಟಮಾರ್ಗಸೂಚಿ ಸಿದ್ಧಪಡಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವೇ ಆಗಿಲ್ಲ. ಜತೆಗೆ ಇನ್ನೂ ರಾಷ್ಟ್ರೀಕೃತ ಬ್ಯಾಂಕ್‌ ಹಾಗೂ ಖಾಸಗಿ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಬಗ್ಗೆ ಸರ್ಕಾರಿ ಆದೇಶವೂ ಹೊರ ಬಿದ್ದಿಲ್ಲ. ಈ ಹಿನ್ನೆಲೆಯಲ್ಲಿ ಎಕ್ಸಿಸ್‌ನಂತಹ ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡದ ರೈತರ ವಿರುದ್ದ ನ್ಯಾಯಾಲಯದ ಮೊರೆ ಹೋಗುತ್ತಿದ್ದು, ರೈತರಿಗೆ ಬಂಧನದ ಭೀತಿ ಎದುರಾಗಿದೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ಬ್ಯಾಂಕ್‌ಗಳು ಒಪ್ಪಿಗೆ ನೀಡಿವೆ ಸಾಲ ಮನ್ನಾದಲ್ಲಿ ಯಾವುದೇ ಗೊಂದಲ ಇಲ್ಲ ಎಂಬ ಮಾತನ್ನು ಪುನರುಚ್ಚರಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಖಾಸಗಿ ಬ್ಯಾಂಕ್‌ಗಳು ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ತಮ್ಮ ಸಮ್ಮತಿ ಸೂಚಿಸಿಲ್ಲ. ಹೀಗಾಗಿ ಸಾಲ ಮನ್ನಾ ಬಗ್ಗೆ ಸ್ಪಷ್ಟತೆ ಮೂಡಿಲ್ಲ’ ಎಂದು ಹೇಳಿದ್ದಾರೆ.

ಬೆಳೆ ವಿಮೆಗೆ ಹಿನ್ನಡೆ:

ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಾಡಲು ಬೆಳೆ ವಿಮೆ ಮಾಡಿಸುವುದು ಕಡ್ಡಾಯ. ಬೆಳೆ ಸಾಲಕ್ಕೆ ಅರ್ಜಿ ಸಲ್ಲಿಸಿದಾಗ ಅಥವಾ ಬೆಳೆ ಸಾಲ ನವೀಕರಣಕ್ಕೆ ಮುಂದಾದಾಗ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕಾಗುತ್ತದೆ. ಆದರೆ, ಸಾಲ ಮನ್ನಾ ಗೊಂದಲದಿಂದಾಗಿ ಈ ಬಾರಿ ಬೆಳೆ ಸಾಲ ನವೀಕರಣ ತಡವಾಗಿದೆ. ಇದೂ ಕೂಡ ಬೆಳೆ ವಿಮೆ ಪ್ರಮಾಣ ಕುಸಿಯಲು ಕಾರಣ ಇರಬಹುದು ಎಂದು ಶಿವಶಂಕರರೆಡ್ಡಿ ಅಭಿಪ್ರಾಯ ಪಟ್ಟಿದ್ದಾರೆ.

click me!