ಸರ್ಕಾರದ ಸೇವೆಗೆ ಅರ್ಧದಷ್ಟು ಎಲೆಕ್ಟ್ರಿಕ್‌ ವಾಹನ ಬಳಕೆ

By Web DeskFirst Published Nov 17, 2018, 8:40 AM IST
Highlights

ಸರ್ಕಾರದ ಯಾವುದೇ ಇಲಾಖೆಗಳು ವಾಹನಗಳನ್ನು ಬಾಡಿಗೆಗೆ ಪಡೆದುಕೊಳ್ಳುವಾಗ ಅಥವಾ ಸ್ವಂತಕ್ಕೆ ಖರೀದಿಸುವಾಗ ಶೇ.50ರಷ್ಟುವಿದ್ಯುತ್‌ ಚಾಲಿತ ವಾಹನಗಳಿಗೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. 

ಬೆಂಗಳೂರು :  ಪರಿಸರ ಮಾಲಿನ್ಯವನ್ನು ತಗ್ಗಿಸಲು ವಿದ್ಯುತ್‌ ಚಾಲಿತ ವಾಹನಗಳು ಸಹಕಾರಿಯಾಗಲಿದ್ದು, ಸರ್ಕಾರ ಬಳಕೆಯ ವಾಹನಗಳಲ್ಲಿ ಶೇ.50ಷ್ಟುವಿದ್ಯುತ್‌ ಚಾಲಿತ ವಾಹನಗಳನ್ನು ಬಳಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಶ್ವಾಸನೆ ನೀಡಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಸ್ಥಾಪಿಸಲಾಗಿರುವ ವಿದ್ಯುತ್‌ ವಾಹನಗಳ ಚಾರ್ಜಿಂಗ್‌ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಯಾವುದೇ ಇಲಾಖೆಗಳು ವಾಹನಗಳನ್ನು ಬಾಡಿಗೆಗೆ ಪಡೆದುಕೊಳ್ಳುವಾಗ ಅಥವಾ ಸ್ವಂತಕ್ಕೆ ಖರೀದಿಸುವಾಗ ಶೇ.50ರಷ್ಟುವಿದ್ಯುತ್‌ ಚಾಲಿತ ವಾಹನಗಳಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳವಾಗುತ್ತಿರುವುದರಿಂದ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವ ಪ್ರಯತ್ನ ಇದಾಗಿದೆ. ತೈಲಕ್ಕಾಗಿ ವೆಚ್ಚವಾಗುವ ಖರ್ಚು ಸಹ ಉಳಿಸಬಹುದಾಗಿದೆ. ಅಲ್ಲದೇ, ಪರಿಸರ ಮಾಲಿನ್ಯ ತಗ್ಗಿಸಲು ಸಹಕಾರಿಯಾಗಿದೆ. ರಾಜ್ಯ ಸರ್ಕಾರವು ಬೆಸ್ಕಾಂ ಸಹಯೋಗದಲ್ಲಿ ಪ್ರಾಯೋಗಿಕವಾಗಿ ಬ್ಯಾಟರಿ ಚಾಲಿತ ವಿದ್ಯುತ್‌ ವಾಹನಗಳಿಗೆ ಉತ್ತೇಜನ ನೀಡಲಾಗುವುದು. ಬ್ಯಾಟರಿ ಚಾಲಿತ ಕಾರನ್ನು ಒಮ್ಮೆ ಚಾಜ್‌ರ್‍ ಮಾಡಿದರೆ ಸುಮಾರು 150 ಕಿ.ಮೀ. ಚಲಿಸಲಿದೆ. ಸದ್ಯಕ್ಕೆ ಚಾರ್ಜಿಂಗ್‌ ಕೇಂದ್ರದಲ್ಲಿ ಉಚಿತವಾಗಿ ಚಾರ್ಜಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಚಾರ್ಜಿಂಗ್‌ ಘಟಕ:

ವಿದ್ಯುತ್‌ ಚಾಲಿತ ವಾಹನಗಳನ್ನು ಖರೀದಿಸುವ ಸಾರ್ವಜನಿಕರಿಗೆ ಕೆಲವು ರಿಯಾಯಿತಿ ನೀಡುವ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಇದರೊಂದಿಗೆ ಖಾಸಗಿಯಾಗಿ ಚಾರ್ಜಿಂಗ್‌ ಘಟಕಗಳನ್ನು ಆರಂಭಿಸುವವರಿಗೂ ಪ್ರೋತ್ಸಾಹ ಧನ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲಿಯೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರಲ್ಲಿ ಚಾರ್ಜಿಂಗ್‌ ಘಟಕ:

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಮಾತನಾಡಿ, ಬೆಂಗಳೂರು ನಗರದಲ್ಲಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಹೆಚ್ಚಿಸಲು ನಗರದ ವಿವಿಧೆಡೆ 11 ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಆರಂಭಿಸಲಾಗುವುದು. ಈಗಾಗಲೇ ಮೂರು ಚಾರ್ಜಿಂಗ್‌ ಪಾಯಿಂಟ್‌ಗಳನ್ನು ಬೆಸ್ಕಾಂ ಆರಂಭಿಸಿದೆ. ಚಾರ್ಜಿಂಗ್‌ ಪಾಯಿಂಟ್‌ಗಳಲ್ಲಿ ಪ್ರತಿ ಯೂನಿಟ್‌ಗೆ 4.50 ರು. ದರ ವಿಧಿಸಲಾಗುವುದು. ಆರಂಭಿಕ ಹಂತದಲ್ಲಿ ಉತ್ತೇಜನ ನೀಡುವ ಉದ್ದೇಶದಿಂದ ಉಚಿತವಾಗಿ ಚಾರ್ಜಿಂಗ್‌ ಮಾಡಲಾಗುತ್ತಿದೆ. ವಿದ್ಯುತ್‌ ಚಾಲಿತ ವಾಹನಗಳಲ್ಲಿ ಪ್ರತಿ ಕಿ.ಮೀ.ಗೆ ಒಂದು ರು.ವೆಚ್ಚವಾದರೆ ಪೆಟ್ರೋಲ್‌ ಮತ್ತು ಡೀಸೆಲ್‌ ಚಾಲಿತ ವಾಹನಗಳಿಗೆ 5 ರು. ವೆಚ್ಚವಾಗಲಿದೆ ಎಂದು ತಿಳಿಸಿದರು.

ರಾಜ್ಯದ ವಿವಿಧೆಡೆ:

ಬೆಂಗಳೂರು ನಗರದಲ್ಲಿ 97 ಸ್ಥಳಗಳಲ್ಲಿ ಮತ್ತು ಬೆಂಗಳೂರು-ಮೈಸೂರು, ಬೆಂಗಳೂರು-ಚೆನ್ನೈ ಹೆದ್ದಾರಿಗಳಲ್ಲಿ 24 ವಿದ್ಯುತ್‌ ವಾಹನ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರದ ಇಂಧನ ಸಚಿವಾಲಯಕ್ಕೆ ಸಂಕ್ಷಿಪ್ತ ಯೋಜನಾ ವರದಿಯನ್ನು ಸಲ್ಲಿಸಲಾಗಿದೆ. 15 ಕಿಲೋವ್ಯಾಟ್‌ ಬ್ಯಾಟರಿ ವಾಹನಗಳನ್ನು 6ರಿಂದ 7 ತಾಸುಗಳಲ್ಲಿ ಸಂಪೂರ್ಣವಾಗಿ ಚಾಜ್‌ರ್‍ ಮಾಡುವ ಸಾಮರ್ಥ್ಯ ಹೊಂದಿರುತ್ತದೆ. ದ್ವಿಚಕ್ರ ವಾಹನಗಳನ್ನು ಒಂದೆರಡು ತಾಸುಗಳಲ್ಲಿ ಸಂಪೂರ್ಣವಾಗಿ ಚಾಜ್‌ರ್‍ ಮಾಡುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹೇಳಿದರು.

click me!