
ಬೆಂಗಳೂರು (ಸೆ.5) : ರಾಜ್ಯ ಸರ್ಕಾರ ಘೋಷಿಸಲಿರುವ ಬರಪೀಡಿತ ತಾಲೂಕುಗಳ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪೂರ್ಣ 10 ಕೆ.ಜಿ. ಅಕ್ಕಿ ನೀಡಲು ತೀರ್ಮಾನಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅನ್ನಭಾಗ್ಯ ಯೋಜನೆಯಡಿ ಪ್ರಸ್ತುತ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ 5 ಕೆ.ಜಿ. ದವಸ ಮತ್ತು ಉಳಿದ ಐದು ಕೆ.ಜಿ. ಬದಲು ಹಣವನ್ನು ಪಡಿತರ ಚೀಟಿದಾರರ ಖಾತೆಗೆ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಸುಮಾರು 114 ಕ್ಕೂ ಹೆಚ್ಚು ತಾಲೂಕುಗಳು ಬರದ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ. ಈ ತಾಲೂಕುಗಳ ಎಲ್ಲಾ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿದಾರರಿಗೆ 5 ಕೆ.ಜಿ.ಗೆ ಹಣ ನೀಡುವ ಬದಲು ಸಂಪೂರ್ಣ 10 ಕೆಜಿ ಅಕ್ಕಿ ವಿತರಣೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಬಡವರ ಪರ ದಿಟ್ಟ ನಿರ್ಧಾರ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ: ಸಚಿವ ಮುನಿಯಪ್ಪ
ಮುಂದಿನ ಒಂದು ವಾರದಲ್ಲಿ ಅಕ್ಕಿ ಖರೀದಿ ವಿಚಾರ ಅಂತಿಮವಾಗಲಿದೆ. ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್‌ಗಢ ಸರ್ಕಾರಗಳು ನಮ್ಮ ರಾಜ್ಯಕ್ಕೆ ಅಕ್ಕಿ ನೀಡಲು ಮುಂದೆ ಬಂದಿವೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬೆಲೆ ನಿಗದಿ ವಿಚಾರವಾಗಿ ಮಾತುಕತೆ ನಡೆಯುತ್ತಿದೆ. ಸರ್ಕಾರ ಬರ ತಾಲೂಕುಗಳ ಪಟ್ಟಿಘೋಷಿಸಿದ ಬಳಿಕ ಹತ್ತು ಕೆ.ಜಿ ಅಕ್ಕಿ ಕೊಡುವ ಕೆಲಸ ಮಾಡುತ್ತೇವೆ ಎಂದರು.
ಇನ್ನು ಉಚಿತ ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ದೇಶದಲ್ಲಿ ಶೇ.35 ರಿಂದ 37ರಷ್ಟುಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಯುಪಿಎ ಇದ್ದಾಗ ಯಾರೂ ಹಸಿವಿನಿಂದ ಬÙಸಬಾರದು ಎಂದು ಆಹಾರ ಭದ್ರತಾ ಕಾಯ್ದೆ ತರಲಾಗಿತ್ತು. ದುಡಿಯುವ ಕೈಗಳು ಕೆಲಸವಿಲ್ಲದೆ ಇರಬಾರದು ಎಂದು ನರೇಗಾ ಯೋಜನೆ ತಂದಿತ್ತು. ಈ ಎರಡೂ ಕಾಯ್ದೆಗಳಿಂದ ದೇಶದ ಜನರಿಗೆ ಸಾಕಷ್ಟುಅನುಕೂಲವಾಗುತ್ತಿದೆ. ಆದರೆ, ಈಗಿನ ಬಿಜೆಪಿ ಸರ್ಕಾರ ಈ ಯೋಜನೆಗಳಿಗೆ ಅನುದಾನ ಕಡಿಮೆ ಮಾಡಿ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿದರು.
ಬ್ಯಾಂಕ್ ಅಕೌಂಟ್‌ರಹಿತ ಪಡಿತದಾರರು 21 ಲಕ್ಷ
ಪಡಿತರದಾರರಿಗೆ 5 ಕೆ.ಜಿ. ಪಡಿತರ ಬದಲು ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಹಣ ನೀಡಲು ಬ್ಯಾಂಕ್ ಅಕೌಂಟ್ ಇಲ್ಲದವರಿಗೆ ಸರ್ಕಾರದಿಂದಲೇ ಅಕೌಂಟ್ ಮಾಡಲಾಗುತ್ತಿದೆ. ಇದರಲ್ಲಿ ಯಾರಿಗೂ ಅನ್ಯಾಯ ಆಗುತ್ತಿಲ್ಲ ಎಂದು ಇದೇ ವೇಳೆ ಸಚಿವ ಮುನಿಯಪ್ಪ ಸ್ಪಷ್ಟಪಡಿಸಿದರು.
ಸಣ್ಣ ಕಾರಿದ್ದವರ ಬಿಪಿಎಲ್ ಕಾರ್ಡ್ ರದ್ದಿಲ್ಲ: ಸಚಿವ ಮುನಿಯಪ್ಪ
ಜುಲೈ ತಿಂಗಳಲ್ಲಿ 3.45 ಕೋಟಿ ಜನರಿಗೆ 566 ಕೋಟಿ ರು. ಡಿಬಿಟಿ ಮಾಡಲಾಗಿದೆ. ಆಗಸ್ಟ್‌ನಲ್ಲಿ 3.69 ಕೋಟಿ ಜನರಿಗೆ 606 ಕೋಟಿ ರು. ಟಿಬಿಟಿ ಮಾಡಲಾಗಿದೆ. ಬ್ಯಾಂಕ್ ಅಕೌಂಟ್ ಇಲ್ಲದ 21 ಲಕ್ಷ ಪಡಿತರದಾರರಿದ್ದಾರೆ. 2 ಲಕ್ಷ ಜನರಿಗೆ ನಾವೇ ಬ್ಯಾಂಕ್ ಅಕೌಂಟ್ ಮಾಡಿದ್ದೇವೆ. ಇನ್ನೂ 14 ಲಕ್ಷ ಜನರಿಗೆ ನಾವೇ ಅಕೌಂಟ್ ಮಾಡಿಸುತ್ತಾ ಇದ್ದೇವೆ. ಹಾಗಾಗಿ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ