
ಬೆಂಗಳೂರು(ಜೂ.12): ಐ ಮಾನಿಟರಿ ಅಡ್ವೈಸರಿ (ಐಎಂಎ) ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ಆರ್. ರೋಷನ್ ಬೇಗ್ ಅವರ ಆಸ್ತಿ ಜಪ್ತಿ ಮಾಡುವ ಸಂಬಂಧ ಎರಡು ವಾರದಲ್ಲಿ ತೀರ್ಮಾನ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ಮಾಡಿದೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಪಾಷಾ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ಅವರ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಅರ್ಜಿ ವಿಚಾರಣೆಗೆ ಬಂದಾಗ ರೋಷನ್ ಬೇಗ್ ಆಸ್ತಿ ಜಪ್ತಿ ವಿಚಾರದಲ್ಲಿ ಯಾವೆಲ್ಲಾ ಕ್ರಮ ಜರುಗಿಸಲಾಗಿದೆ ಎಂದು ನ್ಯಾಯಪೀಠ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಸರ್ಕಾರದ ಪರ ವಕೀಲರು, ಲಾಕ್‌ಡೌನ್ ಇದ್ದ ಕಾರಣ ರೋಷನ್ ಬೇಗ ಅವರ ಆಸ್ತಿ ಜಪ್ತಿ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದರು.
ರೋಷನ್ ಬೇಗ್ ಆಸ್ತಿ ಜಪ್ತಿಗೆ ವಿಳಂಬ: ಹೈಕೋರ್ಟ್ ಅಸಮಾಧಾನ
ಆ ಕಾರಣವನ್ನು ಒಪ್ಪದ ನ್ಯಾಯಪೀಠ, ಲಾಕ್ ಡೌನ್‌ಗೂ, ಆಸ್ತಿ ಜಪ್ತಿ ಮಾಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡುವುದಕ್ಕೂ ಯಾವುದೇ ಸಂಬಂಧವಿಲ್ಲ. ಏಪ್ರಿಲ…ನಲ್ಲಿಯೇ ಈ ಬಗ್ಗೆ ನ್ಯಾಯಾಲಯ ಸ್ಪಷ್ಟನಿರ್ದೇಶನ ನೀಡಿದ್ದರೂ ಸಹ ಸರ್ಕಾರ ಬೇಗ್ ಅವರ ಆಸ್ತಿ ಜಪ್ತಿ ವಿಚಾರದಲ್ಲಿ ತೀರ್ಮಾನ ತೆಗೆದುಕೊಂಡಿಲ್ಲ. ಆಸ್ತಿಗಳನ್ನು ಪರಭಾರೆ ಮಾಡಿದರೆ ಯಾರು ಹೊಣೆ ಎಂದು ಖಾರವಾಗಿ ಪ್ರಶ್ನಿಸಿತು.
ರಾಜಕಾರಣಿ ಎಂಬ ಕಾರಣಕ್ಕೆ ಜಪ್ತಿ ತೆಗೆದುಕೊಳ್ಳುವ ವಿಷಯದಲ್ಲಿ ತೀರ್ಮಾನ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಲಾಗುತ್ತಿದೆ ಎನ್ನುವ ಆರೋಪವಿದೆ. ಸರ್ಕಾರ ಸಹ ರೋಷನ್ ಬೇಗ್ ಆಸ್ತಿ ಜಪ್ತಿಗೆ ಹಿಂಜರಿಯುತ್ತಿದೆ. ಸರ್ಕಾರದ ನೀತಿ ನಿಜಕ್ಕೂ ನ್ಯಾಯಾಲಯಕ್ಕೆ ಅಚ್ಚರಿ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಎರಡು ವಾರದಲ್ಲಿ ರೋಷನ್ ಬೇಗ್ ಅವರ ಆಸ್ತಿ ಜಪ್ತಿ ಮಾಡುವ ಸಂಬಂಧ ತೀರ್ಮಾನ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ತಾಕೀತು ಮಾಡಿತು.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್ ವಾದಿಸಿ, ರೋಷನ್ ಬೇಗ್ ವಿರುದ್ಧ ಆರೋಪಪಟ್ಟಿ ದಾಖಲಿಸಲಾಗಿದೆ. ಪ್ರಕರಣ ಕುರಿತ ಸಿಬಿಐ ತನಿಖೆ ಮುಕ್ತಾಯವಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿರುವ ಐಪಿಎಸ್ ಅಧಿಕಾರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಪೂರ್ವಾನುಮತಿ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅದನ್ನು ಪರಿಗಣಿಸಿದ ನ್ಯಾಯಪೀಠ, ಸಿಬಿಐ ಮನವಿ ಕುರಿತು ಶೀಘ್ರ ಕ್ರಮ ಕೈಗೊಂಡು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಹಾಗೆಯೇ, ಹೂಡಿಕೆದಾರರಿಂದ ಠೇವಣಿ ಹಣ ವಾಪಸ್ಸಾತಿಗೆ ಕೋರಿ ಎಷ್ಟು ಅರ್ಜಿಗಳು ಬಂದಿವೆ? ಈವರೆಗೆ ಎಷ್ಟು ಹಣ ಹಿಂದಿರುಗಿಸಲಾಗಿದೆ. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಇದೇ ವೇಳೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಕರ್ನಾಟಕ ರಾಜ್ಯ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದೆ( ಕೆಪಿಐಡಿ)-2004ರ ಅಡಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ಜೂ.10ರಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೆಚ್ವುವರಿ ಅಡ್ವೋಕೇಚ್ ಜನರಲ್ ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ