ತಾಂಡಾಗೆ ಒಂದು ರೇಶನ್‌ ಅಂಗಡಿ: ಡಿಸಿಎಂ ಗೋವಿಂದ ಕಾರಜೋಳ

By Kannadaprabha NewsFirst Published Aug 29, 2020, 11:18 AM IST
Highlights

ವಿದ್ಯುತ್‌ ಸಂಪರ್ಕ ಹೊಂದಿಲ್ಲದ ತಾಂಡಗಳಿಗೆ ವಿದ್ಯುತ್‌ ಸಂಪರ್ಕ| ಅರ್ಹ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ| ಮದ್ಯ ವ್ಯಸನಿಗಳನ್ನು ಮದ್ಯಪಾನದಿಂದ ಮುಕ್ತಗೊಳಿಸಲು 1 ಕೋಟಿ ರು. ವೆಚ್ಚದಲ್ಲಿ ಮದ್ಯ ವರ್ಜನಾ ಕೇಂದ್ರ ಸ್ಥಾಪನೆ| 

ಬೆಂಗಳೂರು(ಆ.29): ರಾಜ್ಯದಲ್ಲಿ 100ಕ್ಕೂ ಹೆಚ್ಚು ಪಡಿತರ ಚೀಟಿ ಹೊಂದಿರುವ ಎಲ್ಲ ತಾಂಡಗಳಲ್ಲಿ ನ್ಯಾಯ ಬೆಲೆ ಅಂಗಡಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಭರವಸೆ ನೀಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಸಂತ ಸೇವಾಲಾಲ್‌ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನದ ಮೂರನೇ ಆಡಳಿತ ಮಂಡಳಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಲಂಬಾಣಿ ಸಮುದಾಯ ವಾಸಿಸುವ 3,300 ತಾಂಡಗಳಿದ್ದು ಪಡಿತರ ಪಡೆಯಲು ಒಂದು ದಿನ ಕೆಲಸ ಬಿಟ್ಟು ನ್ಯಾಯ ಬೆಲೆ ಅಂಗಡಿಗಳಿಗೆ ತೆರಳಬೇಕಾಗಿರುತ್ತದೆ. ಹೀಗಾಗಿ 100 ಪಡಿತರ ಚೀಟಿ ಹೊಂದಿರುವ ಎಲ್ಲಾ ತಾಂಡಗಳಲ್ಲಿ ನ್ಯಾಯ ಬೆಲೆ ಅಂಗಡಿ ಸ್ಥಾಪಿಸಿ ಲಂಬಾಣಿ ಸಮುದಾಯದವರಿಗೆ ಪರವಾನಗಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ನೂತನ ಶಿಕ್ಷಣ ನೀತಿಯಿಂದ ಇತಿಹಾಸ ಸೃಷ್ಟಿ: ಡಿಸಿಎಂ ಕಾರಜೋಳ

ವಿದ್ಯುತ್‌ ಸಂಪರ್ಕ ಹೊಂದಿಲ್ಲದ ತಾಂಡಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗುವುದು. ಜತೆಗೆ ಅರ್ಹ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗುವುದು. ಜತೆಗೆ ಕೊರೋನಾದಿಂದ ಕೆಲಸ ಕಳೆದುಕೊಂಡು ಹೊರ ರಾಜ್ಯಗಳಿಂದ ವಾಪಸು ತಾಂಡಗಳಿಗೆ ಬಂದಿರುವವರಿಗೆ ಜೀವನ ನಿರ್ವಹಣೆಗೆ ಉದ್ಯೋಗ ಸೃಷ್ಟಿಸುವ ಸಂಬಂಧ ಪ್ರಸ್ತಾವನೆ ಸಿದ್ದಪಡಿಸಿ ಸಲ್ಲಿಸುವಂತೆ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಸಂತ ಸೇವಾಲಾಲ್‌ ಜನ್ಮಸ್ಥಳವಾದ ಸೂರಗೊಂಡನಕೊಪ್ಪ ಮಹಾಮಠದ ಸಂತ ಸೇವಾಲಾಲ್‌ ಕ್ಷೇತ್ರ ಮತ್ತು ಬೋಧನ ಸ್ಥಳಗಳ ಅಭಿವೃದ್ಧಿ, ನಿರ್ವಹಣೆ, ಯಾತ್ರಾತ್ರಿಗಳಿಗೆ ಯಾತ್ರಿ ನಿವಾಸ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಇದರ ಜತೆಗೆ ಕ್ಷೇತ್ರದ ಸುತ್ತಮುತ್ತಲಿನ ಕೆರೆಗಳ ಅಭಿವೃದ್ದಿ, ಮಹಾಮಠಕ್ಕೆ ಹೊಂದಿಕೊಂಡಿರುವ ಅರಣ್ಯವನ್ನು ಪರಿಸರ ಪ್ರವಾಸೋದ್ಯಮ ಸ್ಥಳವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಮದ್ಯ ವ್ಯಸನಿಗಳನ್ನು ಮದ್ಯಪಾನದಿಂದ ಮುಕ್ತಗೊಳಿಸಲು 1 ಕೋಟಿ ರು. ವೆಚ್ಚದಲ್ಲಿ ಮದ್ಯ ವರ್ಜನಾ ಕೇಂದ್ರ ಸ್ಥಾಪಿಸಲಾಗುವುದು ಎಂದರು.

ಈ ವೇಳೆ ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಾದ ರವಿಕುಮಾರ್‌ ಸುರಪುರ, ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್‌ ಹಾಜರಿದ್ದರು.
 

click me!