
ಶಿವಮೊಗ್ಗ (ಸೆ.13): ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ರಾಜಕಾರಣ ಮಾಡಿದರೆ ಅದೇ ವಿಚಾರವಾಗಿ ರಾಜ್ಯದಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಫಡ್ನವೀಸ್‌ಗೆ, ಕರ್ನಾಟಕದ ಡಿಸಿಎಂ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು. ಶುಕ್ರವಾರ ಭದ್ರಾ ಡ್ಯಾಂಗೆ ಬಾಗಿನ ಅರ್ಪಿಸಿ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಫಡ್ನವೀಸ್ ಅವರೇ ನೀವೇನು ಜಡ್ಜ್ ಅಲ್ಲ:
‘ಫಡ್ನವೀಸ್ ಅವರೇ ನೀವೇನು ಜಡ್ಜ್ ಅಲ್ಲ, ನಮ್ಮ ನೀರು ನಮ್ಮ ಹಕ್ಕು. ನಮಗೆ 524 ಅಡಿ ವರೆಗೂ ಕೂಡ ನೋಟಿಫಿಕೇಶನ್ ಆಗಿದೆ. ಗೆಜೆಟ್ ಆಗಬೇಕಿದೆ. ನೀವು ರಾಜಕಾರಣ ಮಾಡಬಹುದು. ಆದರೆ, ಕರ್ನಾಟಕದಲ್ಲಿ ನಿಮ್ಮ ಪಕ್ಷ ಬಿಜೆಪಿ ಧೂಳೀಪಟ ಆಗುತ್ತದೆ. ರೈತರ ಪರ ವಿಚಾರದಲ್ಲಿ ನಾವು ತೀರ್ಮಾನ ಮಾಡುತ್ತೇವೆ ಎಂದರು.
ಕೃಷ್ಣೆ ವಿಚಾರದಲ್ಲಿ ರಾಜಕೀಯ ಬೇಡ:
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ₹5500 ಕೋಟಿ ಕೊಡುವುದಾಗಿ ಹೇಳಿತ್ತು. ಇದೀಗ ರಾಜ್ಯ ಸರ್ಕಾರ ₹10000 ಕೋಟಿ ಖರ್ಚು ಮಾಡಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 524 ಅಡಿಗೆ ಏರಿಸಲು ಗೆಜೆಟ್ ನೋಟಿಫಿಕೇಶನ್ ಆಗಿಬೇಕಿದೆ. ಆದರೆ ಅದರಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತರಿಗಾಗಿ ನಮ್ಮ ಸರ್ಕಾರ:
ತುಂಬಿದ ಭದ್ರಾ ಜಲಾಯಶ ರೈತರ ಜೀವನಕ್ಕೆ ಸುಭದ್ರತೆ ನೀಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಾಡಿಗೆ ಬರ ಎನ್ನುತ್ತಿದ್ದರು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ರೈತರನ್ನು ಬದುಕಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನೂತನ ಪ್ರವಾಸಿ ಮಂದಿರ ಉದ್ಘಾಟನೆ:
ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ಸಹಯೋಗದಲ್ಲಿ ಶುಕ್ರವಾರ ಬಿ.ಆರ್.ಪ್ರಾಜೆಕ್ಟ್‌ನಲ್ಲಿ ಸಚಿವ ಎಸ್. ಎಸ್.ಮಲ್ಲಿಕಾರ್ಜುನ ನೇತೃತ್ವದಲ್ಲಿ ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿ, ಬಳಿಕ ನೂತನ ಪ್ರವಾಸಿ ಮಂದಿರ ಉದ್ಘಾಟಿಸಿ ಮಾತನಾಡಿದರು.
ಆಲಮಟ್ಟಿ ಯೋಜನೆಗಳಿಗೆ ಕೇಂದ್ರ ಅನುಮತಿ ಕೊಡಲಿ: ಡಿಕೆಶಿ
ಚನ್ನಗಿರಿ ತಾಲೂಕಿನಲ್ಲಿ ₹367 ಕೋಟಿ ವೆಚ್ಚದಲ್ಲಿ ಕೆರೆಗಳ ಪುನಶ್ಚೇತನ ಕಾರ್ಯ ನಡೆಯಲಿದೆ. ಆಲಮಟ್ಟಿ ಜಲಾಶಯದ ಏರಿಕೆಗೆ ಕೇಂದ್ರ ಹಾಗೂ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಯೋಜನೆ ಕಾರ್ಯಗತಗೊಳಿಸಲಿಲ್ಲ ಎಂದು ದೂರಿದ ಅವರು, ಕಳಸ ಬಂಡೂರಿ, ಮೇಕೆದಾಟು, ಆಲಮಟ್ಟಿ ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ಕೊಡಿಸಬೇಕು. ಇಲ್ಲದಿದ್ದರೆ ಬಿಜೆಪಿ ಸಂಸದರು ರಾಜೀನಾಮೆ ಕೊಡಬೇಕು ಎಂದು ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ