ಕೃಷ್ಣರಾಜಸಾಗರ ಜಲಾಶಯ ಹಳೆ ಮೈಸೂರು ಭಾಗದ ಸಮಗ್ರ ಪ್ರಗತಿಗೆ ಹೇಗೆ ಕಾರಣವಾಗಿದೆ ಎಂಬುದನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಮನಗರ (ಸೆ.06): ಕೃಷ್ಣರಾಜಸಾಗರ ಜಲಾಶಯ ಹಳೆ ಮೈಸೂರು ಭಾಗದ ಸಮಗ್ರ ಪ್ರಗತಿಗೆ ಹೇಗೆ ಕಾರಣವಾಗಿದೆ ಎಂಬುದನ್ನು ನಾನು ಚಿಕ್ಕಂದಿನಿಂದಲೂ ನೋಡಿದ್ದೇನೆ. ಇಂತಹ ಯೋಜನೆಯೊಂದನ್ನು ನಮ್ಮ ಬಯಲುಸೀಮೆಗೆ ನೀಡಬೇಕು ಎನ್ನುವುದು ನನ್ನ ಬಹುವರ್ಷಗಳ ಕನಸಾಗಿತ್ತು. ಅದನ್ನು ಎತ್ತಿನಹೊಳೆಯ ಮೂಲಕ ನೆರವೇರಿಸಿದ್ದೇನೆ ಎನ್ನುವುದು ನನ್ನ ಬದುಕಿನ ಸಾರ್ಥಕತೆಯ ಕ್ಷಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದೇ ಬಲವಾಗಿ ನಂಬಿದ್ದ ನಾನು, ಆ ಸಮಯದಲ್ಲಿ ಎತ್ತಿನಹೊಳೆಯ ಯೋಜನೆಗೆ ಕಾಯಕಲ್ಪ ನೀಡೀಯೇ ತೀರುತ್ತೇನೆ ಎಂದು ಸಂಕಲ್ಪ ಮಾಡಿದ್ದೆ. ಅಂದುಕೊಂಡ ಹಾಗೆಯೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಎತ್ತಿನಹೊಳೆ ಯೋಜನೆಗೆ ಸಂಪೂರ್ಣ ಒತ್ತು ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೃಢ ನಾಯಕತ್ವದಲ್ಲಿ, ಕಾಮಗಾರಿಗಳಿಗೆ ವೇಗ ನೀಡಿ, ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಿದೆ. ಅದರ ಫಲಿತಾಂಶ ಇಂದು ನಮ್ಮೆಲ್ಲರ ಮುಂದಿದೆ ಎಂದಿದ್ದಾರೆ.
2027 ಕ್ಕೆ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸುವುದು ಕಾಂಗ್ರೆಸ್ ಸರ್ಕಾರದ ಆದ್ಯತೆ. ಎತ್ತಿನಹೊಳೆಯ ನೀರಿನ ಮೂಲಕ ನೀರಾವರಿಗೆ ಪ್ರಗತಿ ತರಲಾಗುತ್ತಿದೆ. ಸ್ವರ್ಣ ಗೌರಿ ಮನೆಗೆ ಬರುತ್ತಾಳೆ ಎಂದರೆ ಎಲ್ಲ ಬಗೆಯ ಸಮೃದ್ಧಿ ಮನೆಯಲ್ಲಿ ನೆಲೆಯಾಗಲಿದೆ ಎಂದೇ ಅರ್ಥ. ಈ ಬಾರಿಯ ಗೌರಿ ಹಬ್ಬ ಅಂತಹ ಜಲ ಸಮೃದ್ಧಿಯನ್ನು ತರುತ್ತಿದೆ. ಈ ಭಗೀರಥ ಕಾರ್ಯವನ್ನು ಮಾಡುವ ಅವಕಾಶ ಕಾಂಗ್ರೆಸ್ ಸರ್ಕಾರಕ್ಕೆ, ಅದು ಕೂಡ ನನಗೆ ದೊರಕಿರುವುದು ಪುಣ್ಯವೆಂದೇ ಭಾವಿಸಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಜಲಜೀವನ ಮಿಷನ್, ಜಲಧಾರೆ ಪರಿಣಾಮಕಾರಿ ಅನುಷ್ಠಾನಗೊಳಿಸಿ: ಕೇಂದ್ರ ಸಚಿವ ಸೋಮಣ್ಣ
ಶಿಕ್ಷಣ ಕ್ಷೇತ್ರದ ಬದಲಾವಣೆಗಾಗಿ ಸಿಎಸ್‌ಆರ್ ನಿಧಿ ಬಳಕೆ: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ತರುವ ಉದ್ದೇಶದಿಂದ ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ನಿಧಿಯಲ್ಲಿ ಶಾಲೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಶಿಕ್ಷಣ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಗ್ರಾಮೀಣ ಶಾಲೆಗಳ ಕಟ್ಟಡವನ್ನು ಸದೃಢಗೊಳಿಸಲು ಖಾಸಗಿ ಸಂಸ್ಥೆಗಳ ಸಿಎಸ್‌ಆರ್ ನಿಧಿಯನ್ನು ಬಳಸಲಾಗುವುದು. ಅದಾದ ನಂತರ ಆ ಶಾಲೆಗಳಲ್ಲಿ ಶಿಕ್ಷಣ ಮಟ್ಟ ಹೆಚ್ಚಿಸಲು ಖಾಸಗಿ ಶಾಲೆಗಳಿಗೆ ಜವಾಬ್ದಾರಿ ನೀಡಲಾಗುವುದು. ಆಮೂಲಕ ಶಿಕ್ಷಕರ ಕೊರತೆ ನೀಗುವುದು, ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ವಿಶೇಷ ಯೋಜನೆ ರೂಪಿಸಲಾಗಿದೆ ಎಂದರು.