ಕುಂದಾಪುರ ಪ್ರವಾಸಿ ತಾಣವನ್ನಾಗಿಸುವುದು ಮೊದಲ ಆದ್ಯತೆ: ಡಿಸಿಎಂ ಭರವಸೆ

Published : Jul 27, 2025, 09:00 PM IST
Kundapra Kannada Festival-2025

ಸಾರಾಂಶ

ಕುಂದಾಪುರವನ್ನು ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ವಿಮಾನ ನಿಲ್ದಾಣದ ಯೋಜನೆಯನ್ನು ಪರಿಗಣಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. 

ಬೆಂಗಳೂರು (ಜುಲೈ.27): ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಆದ್ಯತೆ ನೀಡಿ ಬಳಿಕ ಆ ಪ್ರದೇಶಕ್ಕೆ ವಿಮಾನ ನಿಲ್ದಾಣ ನಿರ್ಮಾಣ ಕುರಿತು ಚಿಂತನೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಬೆಂಗಳೂರಿನ ʼಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)ʼ ಬೆಂಗಳೂರಿನಲ್ಲಿ ಹಮ್ಮಿಕೊಂಡ ಎರಡು ದಿನಗಳ "ಕುಂದಾಪ್ರ ಕನ್ನಡ ಹಬ್ಬ-2025"ರ ಸಮಾರೋಪ ಸಮಾರಂಭ ದಿನವಾದ ಭಾನುವಾರ ಅವರು ಮಾತನಾಡಿದರು. ಇದೇ ವೇಳೆ ಖ್ಯಾತ ಸಿನಿಮಾ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಡಿಸಿಎಂ ಸಮ್ಮುಖದಲ್ಲಿ ʼಊರ ಗೌರವʼ ಎನ್ನುವ ವಿಶೇಷ ಪುರಸ್ಕಾರ ಮಾಡಲಾಯಿತು.

'ಕುಂದಾಪುರಕ್ಕೆ ಒಂದು ಸುಸಜ್ಜಿತ ಕುಂದಾಪ್ರ ಭವನ, ಒಂದು ವೈದ್ಯಕೀಯ ಕಾಲೇಜು ಹಾಗೂ ಕುಂದಾಪ್ರ ಸಮೀಪದ ಬೈಂದೂರಿನಲ್ಲಿ ಒಂದು ವಿಮಾನ ನಿಲ್ದಾಣ ಆಗಬೇಕು' ಎಂದು 'ಕುಂದಾಪುರ ಕನ್ನಡ ಪ್ರತಿಷ್ಠಾನ' ಸರ್ಕಾರಕ್ಕೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಡಿಸಿಎಂ, "340 ಕಿ.ಮೀ. ಉದ್ದದ ಕರಾವಳಿಗೆ ಪ್ರತ್ಯೇಕ ಪ್ರವಾಸ ನೀತಿ ರೂಪಿಸುವ ಚಿಂತನೆ ಸರ್ಕಾರಕ್ಕಿದೆ, ಈ ನೀತಿ ಜಾರಿ ಬಳಿಕ ವಿಮಾನ ನಿಲ್ದಾಣದ ಬಗ್ಗೆ ಚಿಂತಿಸೋಣ" ಎಂದರು. ಅಲ್ಲದೆ 'ಅದಕ್ಕೂ ಮುನ್ನ ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸಲಾಗುವುದು' ಎಂದರು.

"ನಾನು ಯಾವತ್ತೂ ಇಷ್ಟೊತ್ತು ಕೂತವನಲ್ಲ. ನಿಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ, ಒಗ್ಗಟ್ಟು ನೋಡಿ ಒಂದು ಗಂಟೆ ಕೂತಿದ್ದೇನೆ. ನೆಲ-ಭಾಷೆ-ಸಂಸ್ಕೃತಿ ಉಳಿಸುತ್ತಿರುವ ನಿಮಗೆ ಸಾಷ್ಟಾಂಗ ನಮಸ್ಕಾರಗಳು. ನೀವು ಇಷ್ಟೊಂದು ಜನರನ್ನು ಒಟ್ಟು ಸೇರಿಸಿ ಕರ್ನಾಟಕದ ಹೃದಯ ಭಾಗದಲ್ಲಿ ಇದ್ದೀವಿ ಅಂತ ತೋರಿಸಿದ್ದೀರಿ. ಬಿಬಿಎಂಪಿ ಐದು ಭಾಗ ಮಾಡಿದಾಗ ಕೆಲವರು ಆಕ್ಷೇಪಿಸಿದ್ದರು, ಆದರೆ ಇದು ಕರ್ನಾಟಕದ ಹೃದಯ ಭಾಗ. ದಕ್ಷಿಣಕನ್ನಡ, ಉಡುಪಿ ಸೇರಿ ಎಲ್ಲ ಭಾಗದ ಜನರ ಕೇಂದ್ರ ಸ್ಥಳವಿದು, ಹೊರಗಡೆಯವರು ಅನ್ನೋ ಭಯ ಯಾರಿಗೂ ಬೇಡ" ಎಂದರು. "ಎಲ್ಲಕ್ಕಿಂತ ಹೆಚ್ಚು ಉಡುಪಿ-ಕುಂದಾಪುರದ ಜನತೆ ಜೊತೆ ಇದ್ದೇನೆ ಎಂಬ ಮಾತು ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

"ನಾನು ಉಡುಪಿಯವನಾದರೂ ಕುಂದಾಪುರದ ಜೊತೆ ನನ್ನದು ಹತ್ತಿರದ ಸಂಬಂಧವಿದೆ. ನಾನು ಸೆಕೆಂಡ್ ಪಿಯುಸಿ ಓದುವಾಗಲೇ ಕುಂದಾಪುರದಲ್ಲಿ ಟಿಂಬರ್ ಬಿಸಿನೆಸ್ ಮಾಡ್ತಿದ್ದೆ, ಹಾಗೆ ನನ್ನ ಉದ್ಯಮ ಬದುಕು ಶುರುವಾಗಿದ್ದೇ ಕುಂದಾಪುರದಿಂದ, ನಂತರ ಬೆಂಗಳೂರಿಗೆ ಬಂದಾಗ ನನಗೆ ಮೊದಲು ಸಹಾಯ ಮಾಡಿದವರು ಕುಂದಾಪುರದ ವಿ.ಪಿ.ಶೆಟ್ಟರು. ಅವರು ಮೂರು ಬ್ಯಾಂಕಿನ ಚೇರ್ಮನ್ ಆಗಿದ್ದ ದೇಶದ ಏಕೈಕ ವ್ಯಕ್ತಿ" ಎಂದು ಉದ್ಯಮಿ, ಎಂಆರ್‌ಜಿ ಗ್ರೂಪ್‌ ಸಿಎಂಡಿ ಪ್ರಕಾಶ್ ಶೆಟ್ಟಿ ಹೇಳಿದರು. 'ನನ್ನ ಉದ್ಯಮ ಸಣ್ಣದಾಗೇ ಶುರುವಾಗಿದ್ದು, ಈಗ ಒಂದು ಹಂತಕ್ಕೆ ಬೆಳೆದಿದ್ದೇನೆ' ಎಂದ ಅವರು 'ಈಗ ಬೇಕರಿ ಸಣ್ಣಪುಟ್ಟ ವ್ಯವಹಾರ ಮಾಡುವವರು ಎದೆಗುಂದಬೇಡಿ' ಎಂದರು.

"ನನ್ನ ತಂದೆಯ ಊರು ದಾವಣಗೆರೆ, ತಾಯಿಯ ಊರು ಕುಂದಾಪುರ. ಅದಕ್ಕೆ ನನಗೆ ಕುಂದಾಪುರ ಅಂದರೆ ಒಂದು ದೊಡ್ಡ ಸೆಂಟಿಮೆಂಟ್. ನನ್ನನ್ನು ಕುಂದಾಪುರ ಕನ್ನಡ ಹಬ್ಬಕ್ಕೆ ಬನ್ನಿ ಎಂದು ಆಹ್ವಾನಿಸಿದಾಗ, 'ಎಲ್ಲಿ ಹಬ್ಬ ಕುಂದಾಪುರದಲ್ಲಾ?' ಅಂದಾಗ 'ಬೆಂಗಳೂರು' ಎಂದರು. 'ಇಲ್ಲಿ ಅದೂ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಕುಂದಾಪುರದ ಅಷ್ಟು ಜನ ಸೇರ್ತಾರಾ?' ಎಂದಿದ್ದೆ. ಆದರೆ ಇಂದು ಇಲ್ಲಿ ಬಂದು ನೋಡಿದರೆ ನೀವು ಶಕ್ತಿಪ್ರದರ್ಶನ ಮಾಡಿದ್ದೀರಿ. ಭಾಷೆಯನ್ನು ಹೀಗೆ ಸೆಲೆಬ್ರೇಟ್ ಮಾಡೋದು ತುಂಬಾ ಹೆಮ್ಮೆಯ ಸಂಗತಿ" ಎಂದು ನಟಿ ರಕ್ಷಿತಾ ಪ್ರೇಮ್ ಹೇಳಿದರು.

ಊರ ಗೌರವ ಪುರಸ್ಕಾರ

ಊರು ಅಂದ್ರೆ ವ್ಯಕ್ತಿಗಿಂತ ದೊಡ್ದದು. ಜನ್ಮ ಕೊಟ್ಟ ಊರು ಎಲ್ಲರಿಗಿಂತ ದೊಡ್ಡದು, ಊರು-ಭಾಷೆ ಹೆಸರೇ ನನ್ನನ್ನು ಇಲ್ಲಿ ತಂದು ನಿಲ್ಲಿಸಿದೆ. ಕುಂದಾಪುರದ ತಂತ್ರಾಡಿ ನಾನು ಹುಟ್ಟಿದ ಊರು, ತಾಯಿಯದ್ದು ತುಳು, ತಂದೆಯದ್ದು ಕುಂದಾಪುರ ಕನ್ನಡ. ತಂದೆ-ತಾಯಿಗೆ ನಾನು ಒಂಬತ್ತನೇ ಮಗ, ನಾನು ಹುಟ್ಟುವ ಮೊದಲೇ ತಾಯಿಗೆ ತಂದೆ ಕುಂದಾಪ್ರ ಕನ್ನಡ ಕಲಿಸಿದ್ದರು. ಹೀಗಾಗಿ ನಾನು ಬೆಳೆದದ್ದು ಧಾರವಾಡ ಜಿಲ್ಲೆಯಾದ್ರೂ ಮನೆಯಲ್ಲಿ ಕುಂದಾಪ್ರದ ವಾತಾವರಣ ಇತ್ತು. ಭಾಷೆ ಬದುಕಾಗಿ ಅನ್ನ ಹುಟ್ಟಿಸುವ ಮಟ್ಟಕ್ಕೆ ತಂದಿದೆ. ಭಾಷಾಭಿಮಾನ ತುಂಬಾ ದೊಡ್ಡದು.

ನಮ್ಮ ಭಾಷೆಯನ್ನು ಎಷ್ಟಾಗುತ್ತೋ ಅಷ್ಟು ಮತ್ತೆ ಮತ್ತೆ ಮಾತಾಡಿ, ಮನಸಿನಾಳದಿಂದ ಪ್ರೀತಿಸುವ" ಎಂದು 'ಊರ ಗೌರವ' ವಿಶೇಷ ಪುರಸ್ಕಾರ ಸ್ವೀಕರಿಸಿದ ಚಿತ್ರನಿರ್ದೇಶಕ ಯೋಗರಾಜ್ ಭಟ್ ಹೇಳಿದರು.

ಸಾಹಿತಿ-ಪತ್ರಕರ್ತ ಜೋಗಿ, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್‌ನ ಉಪೇಂದ್ರ ಶೆಟ್ಟಿ, ಚಿತ್ರನಟರಾದ ಶೈನ್ ಶೆಟ್ಟಿ, ಪ್ರವೀರ್ ಶೆಟ್ಟಿ, ಲೈಫ್‌ಲೈನ್ ಟೆಂಡರ್ ಚಿಕನ್ ಮ್ಯಾನೇಜಿಂಗ್ ಡೈರೆಕ್ಟರ್ ಕಿಶೋರ್ ಹೆಗ್ಡೆ, ವಿಎಲ್ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಅಂಜಲಿ ವಿಜಯ್, ಎಎಸ್ ಗ್ರೂಪ್ಸ್ ಮ್ಯಾನೇಜಿಂಗ್ ಡೈರೆಕ್ಟರ್ ಸತೀಶ್ ಶೆಟ್ಟಿ, ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜೊತೆ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ ಮುಂತಾದವರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌