ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಒತ್ತುವರಿ ಬಗ್ಗೆ ಸರ್ಕಾರದಿಂದ ಸುಳಿವು ಸಿಕ್ಕಿದೆ.
ಬೆಂಗಳೂರು (ಜೂ.18): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಒತ್ತುವರಿ ಬಗ್ಗೆ ಸರ್ಕಾರದಿಂದ ಸುಳಿವು ಸಿಕ್ಕಿದೆ. ಬಿಬಿಎಂಪಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮೇಲ್ವಿಚಾರಣೆ ಕಛೇರಿ ಉದ್ಘಾಟನೆ ಮತ್ತು ಬಿಬಿಎಂಪಿ ಪೌರ ಸಭಾಂಗಣ ಕಛೇರಿ ಉದ್ಘಾಟನೆ ಮಾಡಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ದರ್ಶನ್ ಮನೆ ತೆರವಿನ ಬಗ್ಗೆ ಮಾತನಾಡಿದ್ದಾರೆ.
ಯಾರೇ ಸ್ಟೇ ತಂದಿದ್ದರೂ ಕಾನೂನು ಪ್ರಕಾರ ಕ್ರಮ ವಹಿಸಿ ತೆರವು ಮಾಡ್ತೇವೆ. ನೀನು ಸ್ಟೇ ತಂದಿದ್ರು ತೆರವು ಮಾಡ್ತೇವೆ, ನಾನು ಸ್ಟೇ ತಂದಿದ್ರು ತೆರವು ಮಾಡ್ತೇವೆ .ಯಾರೇ ಸ್ಟೇ ತಂದಿದ್ರೂ ತೆರವು ಮಾಡ್ತೀವಿ. ಕಾನೂನು ಪ್ರಕಾರ ಏನು ಮಾಡಬೇಕೋ ಮಾಡುತ್ತೇವೆ ಎಂದು ಹೇಳಿದ್ದಾರೆ.
2016ರಲ್ಲಿ ರಾಜ ಕಾಲುವೆ ಒತ್ತುವರಿ (Raja Kaluve Encroachment) ತೆರವಿಗೆ ಸರ್ಕಾರ ಸೂಚಿಸಿತ್ತು. ಆಗ ನಟ ದರ್ಶನ್ ರಾಜಕಾಲುವೆಯ ಬಫರ್ ಝೋನ್ ಮೇಲೆ ಮನೆ ಕಟ್ಟಿರುವುದು ಬೆಳಕಿಗೆ ಬಂದಿತ್ತು. ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ನಟ ಕಾನೂನು ಮೊರೆ ಹೋಗಿದ್ದರು. ಹೀಗಾಗಿ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿರುವ ನಟ ದರ್ಶನ್ ಮನೆ ತೆರವು ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಹೈಕೋರ್ಟ್ 2016 ಅಕ್ಟೋಬರ್ ನಲ್ಲಿ ಸೂಚನೆ ನೀಡಿತ್ತು.
ದರ್ಶನ್ ಪರ ವಕೀಲರು, ಲಾಯರ್ ಆಗಲು ಅನ್‌ಫಿಟ್; ಎಂಎಲ್‌ಸಿ ಭೋಜೇಗೌಡ ಆಕ್ರೋಶ
ಆರ್.ಆರ್ ನಗರದಲ್ಲಿ ಒಟ್ಟು 70 ಕಡೆ ಒತ್ತುವರಿ ಆಗಿರುವುದು ಪತ್ತೆಯಾಗಿತ್ತು. ಹಳೆಯ 37 ಕಡೆ, ಹೊಸದಾಗಿ 33 ಕಡೆ ಒತ್ತುವರಿಯಾಗಿದೆ. ಸರಕಾರಕ್ಕೆ ಸೇರಿದ ಬಿ ಖರಾಬು ಭೂಮಿಯಲ್ಲಿ ಎರಡು ಗುಂಟೆ ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಸೈಟ್ ನಂ. 217ರಲ್ಲಿ ದರ್ಶನ್ ಮನೆ ನಿರ್ಮಿಸಿದ್ದಾರೆ ಎಂಬುದು ಸಂಬಂಧಪಟ್ಟ ಇಲಾಖೆಯು 2016ರಲ್ಲಿ ಕೋರ್ಟ್‌ಗೆ ತಿಳಿಸಿತ್ತು. ಸರ್ವೆ ವರದಿ ಪ್ರಕಾರ ಶಾಸಕ ಶಾಮನೂರು ಶಿವಶಂಕರಪ್ಪ ಆಸ್ಪತ್ರೆ ಸೇರಿದಂತೆ ವಿವಿಧ ಕಟ್ಟಡಗಳು ಸುಮಾರು 7 ಎಕರೆ 31 ಗುಂಟೆಗಳಷ್ಟು ವಿಸ್ತೀರ್ಣದ ರಾಜಕಾಲುವೆ ಒತ್ತುವರಿ ಮಾಡಿಕೊಂಡಿವೆ. ಹಲವು ಪ್ರಭಾವಿಗಳ ಆಸ್ತಿ ರಾಜಕಾಲುವೆಯಲ್ಲಿ ಹಾದು ಹೋಗುತ್ತದೆ ಎಂದು ವರದಿ ಇದೆ.
ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿ, ಸಣ್ಣವರು, ದೊಡ್ಡವರು ಅಂತಾ ನೋಡಲ್ಲ ತೆರವು ಮಾಡುತ್ತೇವೆ. ಸ್ಟೇ ಇತ್ತು ನಾವು ವೆಕೆಟ್ ಮಾಡಿರಲಿಲ್ಲ, ಸ್ಟೇ ತೆರವು ಮಾಡಿ ಕಾರ್ಯಾಚರಣೆ ಮಾಡುತ್ತೇವೆ. ಎಷ್ಟು ಸ್ಟೇ ತೆರವು ಆಗುತ್ತೋ ನೋಡುತ್ತೇವೆ. ಎಲ್ಲೆಲ್ಲಿ ಸ್ಟೇ ಇರುವ ಪ್ರಕರಣಗಳು ಇವೆ ಅಲ್ಲಿ ತೆರವು ಕಾರ್ಯ ಮಾಡುತ್ತೇವೆ. ಎಷ್ಟು ಬೇಗ ಕೋರ್ಟ್ ನಲ್ಲಿ ಸ್ಟೇ ತೆರವಾಗುತ್ತೋ ನಂತರ ಕ್ರಮ ವಹಿಸುತ್ತೇವೆ. ಯಾರೇ ಒತ್ತುವರಿ ಮಾಡಿ ಸ್ಟೇ ತಂದಿದ್ರೂ ಕೂಡ ಕಾನೂನಿನ ಪ್ರಕಾರ ತೆರವು ಮಾಡಲು ಸೂಚನೆ ನೀಡಲಾಗುವುದು ಎಂದಿದ್ದಾರೆ.