ಕೋವಿಡ್‌ ನಿಯಮ ಜಾರಿಯಾಗದಿದ್ರೆ ಡಿಸಿ ಹೊಣೆ

By Kannadaprabha NewsFirst Published Jun 29, 2021, 8:55 AM IST
Highlights
  • ಕೋವಿಡ್‌ ನಿಯಮ ಜಾರಿಯಾಗದೇ ಉಲ್ಲಂಘನೆಯಾದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಹೊಣೆ
  • ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವ ಸುಧಾಕರ್ ಮಾಹಿತಿ
  •  ರಾಜ್ಯದ ಕೆಲವೆಡೆ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳು ಪಾಲನೆ ಆಗುತ್ತಿಲ್ಲ

 ಬೆಂಗಳೂರು (ಜೂ.29):  ಕೋವಿಡ್‌ ನಿಯಮ ಕಟ್ಟು ನಿಟ್ಟಾಗಿ ಜಾರಿಯಾಗದೇ ಉಲ್ಲಂಘನೆಯಾದಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಯನ್ನೇ ಹೊಣೆ ಮಾಡುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕೆಲವೆಡೆ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳು ಪಾಲನೆ ಆಗುತ್ತಿಲ್ಲ. ಜನರು ಕೋವಿಡ್‌ ನಿಯಮ ಮೀರಿ ವರ್ತಿಸುತ್ತಿದ್ದಾರೆ. ಆನ್‌ಲಾಕ್‌ ಆಗುತ್ತಿದ್ದಂತೆ ಕೆಲವು ಕಡೆ ಜನರು ಮಾಸ್ಕ್‌ ಹಾಕದೇ ಓಡಾಡುತ್ತಿದ್ದಾರೆ. ಸೋಮವಾರದಿಂದ ಕಲ್ಯಾಣ ಮಂಟಪ, ಹೊಟೆಲ್‌ನಲ್ಲಿ ಸಮಾರಂಭ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸಮಾರಂಭಗಳಲ್ಲಿ ನೂರಾರು ಜನರು ಸೇರುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿ, ಗೃಹ ಸಚಿವರ ಜೊತೆ ಮಾತನಾಡಿ ನಿಯಮ ಉಲ್ಲಂಘನೆಗೆ ಜಿಲ್ಲಾಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಡೆಲ್ಟಾ ಭೀತಿ: ರಾಜ್ಯದ ಗಡಿಭಾಗದಲ್ಲಿ ಕಟ್ಟೆಚ್ಚರ, ಪ್ರಯಾಣಿಕರ ಮೇಲೆ ನಿಗಾ: ಡಾ. ಸುಧಾಕರ್ ...

ಮನೆಗಳಲ್ಲಿ ಹೆಚ್ಚು ಜಾಗ ಇರುವುದಿಲ್ಲ ಎಂದು ಕಲ್ಯಾಣ ಮಂಟಪಗಳಲ್ಲಿ ಮದುವೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅದೇ ರೀತಿ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿಯೂ ನಿಯಮ ಮೀರಿ ಜನ ಸೇರುತ್ತಿದ್ದಾರೆ. ಹಾಗಾಗಿ ಕೋವಿಡ್‌ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಭಾರಿ ದಂಡ ವಿಧಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ 24.37 ಲಕ್ಷ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದಾರೆ. ಇವೆರಲ್ಲರಿಗೂ ಸೋಮವಾರದಿಂದ ಲಸಿಕೆ ನೀಡಲು ಪ್ರಾರಂಭಿಸಿದ್ದೇವೆ. 10 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳುತ್ತಿದ್ದೇವೆ. ಇನ್ನೆರಡು ದಿನದಲ್ಲಿ ದೆಹಲಿಗೆ ತೆರಳಿ ಹೆಚ್ಚು ಲಸಿಕೆ ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಲಸಿಕೆ ನೀಡಿದ ಬಳಿಕ ಶಾಲೆ ಆರಂಭಿಸುತ್ತೇವೆ ಎಂದು ಡಾ. ಸುಧಾಕರ್‌ ತಿಳಿಸಿದರು.

ಮಕ್ಕಳ ವಿದ್ಯಾಭ್ಯಾಸ ಮುಖ್ಯ. ಆದರೆ ಶಿಕ್ಷಣದ ಜೊತೆಗೆ ಮಕ್ಕಳ ಆರೋಗ್ಯವು ಬಹು ಮುಖ್ಯ. ಆದ್ದರಿಂದ ಈ ವಿಚಾರದಲ್ಲಿ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ. ಕೊರೋನಾ ಎರಡನೇ ಅಲೆ ಯಾವಾಗ ಕಡಿಮೆ ಆಗುತ್ತದೆ ಎಂಬುದು ಇನ್ನೂ ಗೊತ್ತಿಲ್ಲ. ಬಹುಶಃ ಇನ್ನೊಂದು ವಾರ ಬೇಕಾಗಬಹುದು. ಜುಲೈ 5ನೇ ತಾರೀಕಿನವರೆಗೂ ಕಾದು ನೋಡಬೇಕು. ಹಂತ ಹಂತವಾಗಿ ಲಾಕ್‌ ಡೌನ್‌ ತೆರವು ಮಾಡುವಂತೆ ಏಮ್ಸ್‌ ನಿರ್ದೇಶಕರು ಪತ್ರ ಬರೆದಿದ್ದಾರೆ. ಲಾಕ್‌ ಡೌನ್‌ ಅನ್ನು ಸಂಪೂರ್ಣವಾಗಿ ತೆಗೆಯಲು ಶೇ.70ರಷ್ಟುಮಂದಿಗೆ ಲಸಿಕೆ ನೀಡಬೇಕಾಗುತ್ತದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಸದ್ಯ ಪ್ರತಿ ದಿನ 10 ಲಕ್ಷ ಮಂದಿಗೆ ಲಸಿಕೆ ನೀಡಲು ಸಾಧ್ಯವಾಗದಿದ್ದರೂ ಪ್ರತಿದಿನ 3 ರಿಂದ 5 ಲಕ್ಷ ಮಂದಿಗೆ ಲಸಿಕೆ ನೀಡುತ್ತಿದ್ದೇವೆ. ಲಸಿಕೆ ನಿರಂತರವಾಗಿ ಪೂರೈಕೆ ಆಗುತ್ತಿದೆ. ಡಿಸೆಂಬರ್‌ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಡಾ. ಕೆ. ಸುಧಾಕರ್‌ ಹೇಳಿದರು.

click me!