
ದಾವಣಗೆರೆ (ಸೆ.25): ನಗರದ ಕಾರ್ಲ್ ಮಾರ್ಕ್ಸ್ ನಗರದಲ್ಲಿ 'ಐ ಲವ್ ಮಹಮ್ಮದ್' (I Love Mohammad) ಎಂಬ ಬರಹದ ಫ್ಲೆಕ್ಸ್ ಬೋರ್ಡ್ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ಗುಂಪುಗಳ ನಡುವೆ ನಡೆದ ವಾಗ್ವಾದ ಮತ್ತು ಗಲಾಟೆಯು ಕಲ್ಲು ತೂರಾಟದಂತಹ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆ ಸಂಬಂಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ಪೊಲೀಸರು ವಿವಾದಿತ ಫ್ಲೆಕ್ಸ್ ಅನ್ನು ತೆರವುಗೊಳಿಸಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಗಲಾಟೆಯ ಸಂದರ್ಭದಲ್ಲಿ ಕೆಲವರು 'ಹಿಂದೂ ಮನೆಗಳನ್ನು ಗುರಿಯಾಗಿಸಿ ಕಲ್ಲು ತೂರಿದ್ದಾರೆ' ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾರ್ಲ್ ಮಾರ್ಕ್ಸ್ ರೋಡ್ ಫಸ್ಟ್ ಮೇನ್ ಫಸ್ಟ್ ಕ್ರಾಸ್ ನಿವಾಸಿಗಳಾದ ಕಸ್ತೂರಮ್ಮ ಮತ್ತು ಚಿತ್ರವೇಲು ಅವರ ಮನೆಗಳ ಮೇಲೆ ಕಲ್ಲು ಎಸೆಯಲಾಗಿದ್ದು, ಹಲವು ಮನೆಗಳ ನಿವಾಸಿಗಳು ತಮ್ಮ ಮನೆಗಳ ಬಾಗಿಲು ಹಾಕಿ ಮಲಗಿದ್ದಾಗಲೇ ಕಲ್ಲುತೂರಾಟ ನಡೆದಿದೆ ಎಂದು ಘಟನೆಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ಗಾಯಾಳು ರೇಖಾ ಅವರ ಸಹೋದರ ರಂಗನಾಥ್ ಅವರು ನೀಡಿದ ದೂರಿನಲ್ಲಿ, ಫ್ಲೆಕ್ಸ್ ಅಳವಡಿಕೆಯನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮನೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ ಮತ್ತು ಜೀವ ಬೆದರಿಕೆಯೊಡ್ಡಲಾಗಿದೆ ಎಂದು ತಿಳಿಸಿದ್ದು, ಈ ಕೃತ್ಯದಲ್ಲಿ 28 ಜನರ ಹೆಸರು ಸೇರಿ 40 ರಿಂದ 50 ಜನ ಭಾಗಿಯಾಗಿದ್ದರು ಎಂದು ದೂರಿದ್ದಾರೆ. ಗಾಯಾಳುಗಳಾದ ಯಮನೂರಪ್ಪ ಪುತ್ರಿ 'ರೇಖಾ' ಮತ್ತು ಅಳಿಯ 'ಹನುಮಂತು' ಆಸ್ಪತ್ರೆಗೆ ದಾಖಲಾಗಿದ್ದರು, ಸದ್ಯ ಅವರು ಡಿಸ್ಚಾರ್ಜ್ ಆಗಿದ್ದಾರೆ.
ದೂರು-ಪ್ರತಿದೂರು ಮತ್ತು ಪೊಲೀಸರ ಕ್ರಮ:
ಫ್ಲೆಕ್ಸ್ ಅಳವಡಿಸಿದ್ದ ಮೊಹಮ್ಮದ್ ಸಾದಿಕ್ ಎಂಬುವರು ನೀಡಿದ ದೂರಿನ ಮೇರೆಗೆ ಒಂದು ಎಫ್‌ಐಆರ್ ದಾಖಲಾಗಿದೆ. ಮೂರು ದಿನಗಳ ಹಿಂದೆ ಫ್ಲೆಕ್ಸ್ ಅಳವಡಿಸಲಾಗಿದ್ದು, ಸಂಜೆ 7:30ರ ಸುಮಾರಿಗೆ ಗಲಾಟೆ ಮಾಡಿ ಅದನ್ನು ತೆರವುಗೊಳಿಸಲು ಪ್ರಯತ್ನಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮತ್ತೊಂದೆಡೆ, ಗಾಯಾಳು ರೇಖಾ ಅವರ ಸಹೋದರ ರಂಗನಾಥ್ ಅವರ ದೂರಿನ ಮೇರೆಗೆ ಹಲ್ಲೆ ಮತ್ತು ಜೀವ ಬೆದರಿಕೆ ಕುರಿತು ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಈ ಘಟನೆ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ, ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿ, ವಿವಾದಕ್ಕೆ ಕಾರಣವಾಗಿದ್ದ 'ಐ ಲವ್ ಮೊಹಮ್ಮದ್' ಫ್ಲೆಕ್ಸ್ ಅನ್ನು ತೆರವುಗೊಳಿಸಿದ್ದಾರೆ.
ಈ ಘಟನೆಗಳ ನಡುವೆ, ಕಾರ್ಲ್ ಮಾರ್ಕ್ಸ್ ನಗರದ ಕೆಲವು 'ಮುಸ್ಲಿಂ ಮಹಿಳೆಯರು' ಆಜಾದ್ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ನಾವೆಲ್ಲರೂ ಅನ್ಯೋನ್ಯವಾಗಿದ್ದೇವೆ, ಹೊರಗಿನ ವ್ಯಕ್ತಿಗಳು ಬಂದು ಗಲಾಟೆ ಮಾಡುತ್ತಿದ್ದಾರೆ. ಜೊತೆಗೆ, 'ಐ ಲವ್ ಮೊಹಮ್ಮದ್' ಫ್ಲೆಕ್ಸ್ ಹಾಕಿದಾಗ ದುಗ್ಗ ಎಂಬ ವ್ಯಕ್ತಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಮತ್ತು ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದಾನೆ ಎಂದು ರೇಷ್ಮಾ ಎಂಬ ನಿವಾಸಿ ಆರೋಪಿಸಿದ್ದಾರೆ. ಅಪ್ಪಣ್ಣ ಎಂಬ ವ್ಯಕ್ತಿ ಆ್ಯಸಿಡ್ ಹಾಕ್ತೀನಿ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ಸಹ ಮಹಿಳೆಯರು ಆರೋಪಿಸಿದ್ದಾರೆ.
ಫ್ಲೆಕ್ಸ್ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ರಂಗನಾಥ್ ಅವರು, ರಸ್ತೆ ಪಕ್ಕದಲ್ಲಿ ಹಾಕಿದ್ದಕ್ಕೆ ನಮ್ಮ ವಿರೋಧ ಇರಲಿಲ್ಲ, ಆದರೆ, ನಮ್ಮ ಮನೆ ಮುಂದೆ ಹಾಕುವಾಗ ಪ್ರಶ್ನಿಸಿದ್ದಕ್ಕೆ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎಂದು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಸದ್ಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬಿಗುವಿನ ಪರಿಸ್ಥಿತಿ ಮುಂದುವರೆದಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಆಜಾದ್ ನಗರ ಠಾಣೆ ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ