
ಬಳ್ಳಾರಿ (ಆ.31): ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಗೆ ಶಿಫ್ಟ್ ಆಗಿರುವ ನಟ ದರ್ಶನ್ ಒಬ್ಬಂಟಿಯಾದಂತಾಗಿದ್ದು, ತೀವ್ರ ಮಂಕಾಗಿದ್ದಾರೆ. ಊಟ, ಉಪಾಹಾರ ಸರಿಯಾಗಿ ಮಾಡದೆ ಮೌನವಾಗಿಯೇ ದಿನ ಕಳೆಯತ್ತಿದ್ದಾರೆ. ಜೈಲು ಸಿಬ್ಬಂದಿ ಬಳಿಯೂ ಮಾತನಾಡದೆ ಮೌನಕ್ಕೆ ಜಾರಿರುವ ಅವರು, ಸಮಯ ಕಳೆಯಲು ಪುಸ್ತಕಗಳ ಮೊರೆ ಹೋಗಿದ್ದಾರೆ.
ಬಳ್ಳಾರಿ ಜೈಲು ಸೇರಿದ ಬಳಿಕ ಮೊದಲ ದಿನವಾದ ಗುರುವಾರ ರಾತ್ರಿ ಅವರು ಸರಿಯಾಗಿ ಊಟ ಮಾಡಿರಲಿಲ್ಲ. 2ನೇ ದಿನವಾದ ಶುಕ್ರವಾರ ಬೆಳಗಿನ ಉಪಾಹಾರಕ್ಕೆಂದು ನೀಡಿದ್ದ ಉಪ್ಪಿಟ್ಟು, ಮಧ್ಯಾಹ್ನ ರಾಗಿ ಮುದ್ದೆ, ಚಪಾತಿ ಮತ್ತು ಅನ್ನ ಸಾಂಬಾರು ಸೇವಿಸಿದ್ದಾರೆ. ಬಳ್ಳಾರಿಯ ತಾಪಮಾನ ಸಂಕಷ್ಟ ಅವರಿಗೆ ಸಮಸ್ಯೆ ತಂದೊಡ್ಡಿದೆ, ಜತೆಗೆ ಕಾರಾಗೃಹದ ಸೊಳ್ಳೆಗಳು ನಿದ್ರೆಗೆಡಿಸಿವೆ ಎಂದು ಹೇಳಲಾಗುತ್ತಿದೆ.
ಭಾನುವಾರ ಕುಟುಂಬ ಭೇಟಿ: ಮೂಲಗಳ ಪ್ರಕಾರ ದರ್ಶನ್ ಕುಟುಂಬ ಸದಸ್ಯರು ಭಾನುವಾರ ಬಳ್ಳಾರಿಗೆ ಬರಲಿದ್ದು, ದರ್ಶನ್ ಭೇಟಿ ಮಾಡಲಿದ್ದಾರೆ. ಬಳ್ಳಾರಿಯಲ್ಲಿನ ವಾತಾವರಣ ಹೊಂದಾಣಿಕೆ ಸೇರಿ ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಜೈಲು ಬದಲಾವಣೆಗೆ ಅವರು ಪುನಃ ಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಕೀಲರ ಜತೆ ದರ್ಶನ್ ಚರ್ಚಿಸುವ ಸಾಧ್ಯತೆಯಿದೆ. ಬಳ್ಳಾರಿಯಲ್ಲಿ ಸಾಕಷ್ಟು ದಿನ ಇರಬೇಕಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು ಇಲ್ಲೇ ಮನೆಯೊಂದನ್ನು ಬಾಡಿಗೆ ಹಿಡಿಯಲು ನಿರ್ಧರಿಸಿದ್ದಾರೆನ್ನಲಾಗಿದೆ. ದರ್ಶನ್ ಜತೆ ಈ ಕುರಿತು ಚರ್ಚಿಸಿದ ಬಳಿಕ ಮುಂದಿನ ನಿರ್ಧಾರವಾಗಲಿದೆ.
ದರ್ಶನ್ ಶಿಫ್ಟಿಗೂ ಬಳ್ಳಾರಿ ಉಸ್ತುವಾರಿ ಜಮೀರ್‌ಗೂ ಸಂಬಂಧವಿಲ್ಲ: ಸಚಿವ ಪರಮೇಶ್ವರ್
ಬ್ಯಾರಕ್‌ನಲ್ಲೇ ಓಡಾಟ: ಶುಕ್ರವಾರ ಬೆಳಗ್ಗೆ 6.30ಕ್ಕೆ ಎದ್ದಿರುವ ದರ್ಶನ್ ಕೂತು ಕೂತು ಕಾಲು ಹಿಡಿದುಕೊಂಡಿದ್ದು ಒಂದಷ್ಟು ಓಡಾಡಲು ಅವಕಾಶ ಮಾಡಿಕೊಡಿ ಎಂದು ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ. ಅದರಂತೆ ಮಧ್ಯಾಹ್ನ ಅರ್ಧಗಂಟೆ ಹಾಗೂ ಸಂಜೆ ಅರ್ಧಗಂಟೆ ಬ್ಯಾರಕ್ ಆವರಣದಲ್ಲೇ ಅವರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ