ದರ್ಶನ್ & ಗ್ಯಾಂಗ್‌ನ ಜಾಮೀನು ರದ್ದತಿ ಮಾಡಲು, ಸುಪ್ರೀಂ ಕೋರ್ಟ್‌ಗೆ ಲಿಖಿತ ವಾದ ಸಲ್ಲಿಸಿದ ಸರ್ಕಾರ!

Published : Aug 06, 2025, 05:32 PM IST
darshan

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದೆ. ಪ್ರತ್ಯಕ್ಷದರ್ಶಿಗಳು, ವಿಧಿವಿಜ್ಞಾನ ವರದಿಗಳು, ದರ್ಶನ್ ಮತ್ತು ಪವಿತ್ರಾಳ ಸಕ್ರಿಯ ಪಾತ್ರ ಬಿಚ್ಚಿಟ್ಟಿದ್ದಾರೆ.

ಹೊಸದಿಲ್ಲಿ/ಬೆಂಗಳೂರು (ಆ.06): ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್ ಮತ್ತು ಆತನ ಸಹಚರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೆಚ್ಚುವರಿ ಅಫಿಡವಿಟ್ ಸಲ್ಲಿಸಿದ್ದು, ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಾಧಾರಗಳ ಸರಮಾಲೆಯನ್ನೇ ಮುಂದಿಟ್ಟಿದೆ.

ರಾಜ್ಯ ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಲಿಖಿತ ವಾದದಲ್ಲಿ, ಹೈಕೋರ್ಟ್‌ನ ತೀರ್ಪು ದಾಖಲೆಗಳಿಗೆ ವಿರುದ್ಧವಾಗಿದೆ ಮತ್ತು ಜಾಮೀನು ವಿಚಾರಣೆಯ ಹಂತದಲ್ಲಿಯೇ 'ಮಿನಿ ವಿಚಾರಣೆ' ನಡೆಸಿದೆ ಎಂದು ಗಂಭೀರ ಆರೋಪ ಮಾಡಲಾಗಿದೆ.

ಸರ್ಕಾರದ ಅಫಿಡವಿಟ್‌ನಲ್ಲಿರುವ ಪ್ರಮುಖ ಅಂಶಗಳು:

1. ಪ್ರಬಲ ಪ್ರತ್ಯಕ್ಷ ಸಾಕ್ಷಿಗಳು:

ಮೃತನನ್ನು ಅಪಹರಿಸಿ, ಪಟ್ಟಣಗೆರೆಯ ಶೆಡ್‌ಗೆ ಕರೆತರುವುದನ್ನು ಐವರು ಪ್ರತ್ಯಕ್ಷ ಸಾಕ್ಷಿಗಳು ಕಣ್ಣಾರೆ ಕಂಡಿದ್ದಾರೆ. ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳು ಮತ್ತು ಮೃತ ರೇಣುಕಾಸ್ವಾಮಿ ಪ್ರವೇಶಿಸಿದ್ದಕ್ಕೆ ಇವರು ಸಾಕ್ಷಿಯಾಗಿದ್ದಾರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

2. ವಿಧಿವಿಜ್ಞಾನ ವರದಿಗಳೇ ಬಲವಾದ ಪುರಾವೆ:

ಮಣ್ಣಿನ ಸಾಕ್ಷ್ಯ: ಕೊಲೆ ನಡೆದ ಸ್ಥಳದಿಂದ ಸಂಗ್ರಹಿಸಲಾದ ಮಣ್ಣಿನ ಮಾದರಿ ಮತ್ತು ಪ್ರಕರಣದ ಎರಡನೇ ಆರೋಪಿ (A-2) ದರ್ಶನ್, ನಾಲ್ಕನೇ ಆರೋಪಿ (A-4) ರಾಘವೇಂದ್ರ, ಐದನೇ ಆರೋಪಿ (A-5) ನಂದೀಶ್ ಮತ್ತು ಹನ್ನೊಂದನೇ ಆರೋಪಿ (A-11) ನಾಗರಾಜು ಅವರ ಪಾದರಕ್ಷೆಗಳಲ್ಲಿದ್ದ ಮಣ್ಣಿನ ಮಾದರಿಗಳು ಸಂಪೂರ್ಣವಾಗಿ ಹೊಂದಾಣಿಕೆಯಾಗಿವೆ. ಇದು ಆರೋಪಿಗಳು ಘಟನಾ ಸ್ಥಳದಲ್ಲಿದ್ದಿದ್ದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸುತ್ತದೆ.

ರಕ್ತದ ಕಲೆಗಳು: ಡಿಎನ್‌ಎ ವಿಶ್ಲೇಷಣೆಯ ಪ್ರಕಾರ, ಮೃತ ರೇಣುಕಾಸ್ವಾಮಿಯ ರಕ್ತದ ಕಲೆಗಳು ಹಲವು ಆರೋಪಿಗಳ ಬಟ್ಟೆಗಳ ಮೇಲೆ ಪತ್ತೆಯಾಗಿವೆ. ಇದು ಕೊಲೆಯಲ್ಲಿ ಆರೋಪಿಗಳ ನೇರ ಪಾಲ್ಗೊಳ್ಳುವಿಕೆಗೆ ಪ್ರಮುಖ ಸಾಕ್ಷಿಯಾಗಿದೆ.

3. ಕೊಲೆಯಲ್ಲಿ ದರ್ಶನ್ ಮತ್ತು ಪವಿತ್ರಾ ಸಕ್ರಿಯ ಭಾಗಿ:

ಹತ್ಯೆಯ ಸಂಚು ಮತ್ತು ಪ್ರಕ್ರಿಯೆಯಲ್ಲಿ ಮೊದಲ ಆರೋಪಿ (A-1) ಪವಿತ್ರಾ ಗೌಡ ಮತ್ತು ಎರಡನೇ ಆರೋಪಿ (A-2) ದರ್ಶನ್ ಇಬ್ಬರೂ ಸಕ್ರಿಯವಾಗಿ ಭಾಗಿಯಾಗಿದ್ದರು ಎಂದು ತನಿಖೆಯಿಂದ ಬಯಲಾಗಿದೆ. ದರ್ಶನ್ ಅವರ ಅಭಿಮಾನಿಯಾಗಿದ್ದ ರೇಣುಕಾಸ್ವಾಮಿ, ಪವಿತ್ರಾ ಗೌಡ ಅವರಿಗೆ ಇನ್‌ಸ್ಟಾಗ್ರಾಂ (Instagram) ನಲ್ಲಿ ಅವಹೇಳನಕಾರಿ ಸಂದೇಶ ಕಳುಹಿಸಿದ್ದೇ ಈ ಬರ್ಬರ ಕೃತ್ಯಕ್ಕೆ ಕಾರಣ ಎಂದು ಸರ್ಕಾರ ವಾದಿಸಿದೆ.

4. ಹೈಕೋರ್ಟ್ ತೀರ್ಪಿನಲ್ಲಿದ್ದ ದೋಷಗಳು:

ಕೊಲೆಗೆ ಬಳಸಿದ ಆಯುಧಗಳು ಮಾರಕವಲ್ಲ ಎಂಬ ಹೈಕೋರ್ಟ್‌ನ ಅಭಿಪ್ರಾಯ ತಪ್ಪು. ಮೃತನ ದೇಹದ ಮೇಲಿದ್ದ 15ಕ್ಕೂ ಹೆಚ್ಚು ಗಂಭೀರ ಗಾಯಗಳೇ ಇದಕ್ಕೆ ಸಾಕ್ಷಿ. ಪ್ರಕರಣದ ಪ್ರಮುಖ ಸಾಕ್ಷಿ ಪುನೀತ್ ಎಂಬುವವರ ಹೇಳಿಕೆಯನ್ನು ತಡವಾಗಿ ದಾಖಲಿಸಲಾಗಿದೆ ಎಂಬ ಕಾರಣಕ್ಕೆ ಅನುಮಾನಿಸಿದ್ದು ಸರಿಯಲ್ಲ. ಆ ವಿಳಂಬಕ್ಕೆ ತನಿಖಾ ತಂಡವು ಸೂಕ್ತ ಕಾರಣಗಳನ್ನು ನೀಡಿದೆ. ಪ್ರಕರಣದಲ್ಲಿ ಲಭ್ಯವಿರುವ ಪ್ರಬಲ ವಿಧಿವಿಜ್ಞಾನ, ಎಲೆಕ್ಟ್ರಾನಿಕ್ ಮತ್ತು ಸಿಡಿಆರ್ (CDR) ಪುರಾವೆಗಳನ್ನು ಹೈಕೋರ್ಟ್ ಪರಿಗಣನೆಗೆ ತೆಗೆದುಕೊಂಡಿಲ್ಲ.

5. ದರ್ಶನ್‌ನ ಅಪರಾಧ ಹಿನ್ನೆಲೆ ಮತ್ತು ನಡವಳಿಕೆ:

ಎರಡನೇ ಆರೋಪಿ ದರ್ಶನ್‌ಗೆ ಈ ಹಿಂದೆಯೂ ಅಪರಾಧ ಹಿನ್ನೆಲೆ ಇದೆ. ಬೆನ್ನು ನೋವಿನ ಕಾರಣ ನೀಡಿ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದ ದರ್ಶನ್, ಅದರ ಮರುದಿನವೇ ಚಲನಚಿತ್ರವೊಂದರ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಇದು ಅವರ ನಡವಳಿಕೆಯ ಬಗ್ಗೆ ಸಂಶಯ ಮೂಡಿಸುತ್ತದೆ ಎಂದು ಸರ್ಕಾರ ಉಲ್ಲೇಖಿಸಿದೆ.

ಒಟ್ಟಿನಲ್ಲಿ, ಬಲವಾದ ಸಾಕ್ಷ್ಯಾಧಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವು ದರ್ಶನ್ ಮತ್ತು ಗ್ಯಾಂಗ್‌ನ ಜಾಮೀನು ರದ್ದತಿಗೆ ಪ್ರಬಲವಾಗಿ ಪಟ್ಟುಹಿಡಿದಿದೆ. ಸರ್ಕಾರದ ಈ ಹೆಚ್ಚುವರಿ ಅಫಿಡವಿಟ್ ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ್ದು, ಸುಪ್ರೀಂ ಕೋರ್ಟ್‌ನ ತೀರ್ಪು ಏನಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!