ದರ್ಶನ್‌ಗೆ ಜೈಲಲ್ಲಿ ಮಂಚ ಕೊಡಲಾಗದು ಎಂದ ಸರ್ಕಾರ: ನಟನ ಪರ ವಕೀಲರ ವಾದವೇನು?

Published : Oct 01, 2025, 06:20 AM IST
Darshan

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ನ್ಯಾಯಾಲಯದ ಆದೇಶ ಅನುಸಾರ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳಾದ ಚಾಪೆ, ದಿಂಬು, ಕಂಬಳಿ, ತಟ್ಟೆ, ಚೊಂಬು ನೀಡಲಾಗಿದೆ. ಒಂದು ಗಂಟೆ ವಾಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ.

ಬೆಂಗಳೂರು (ಅ.01): ‘ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ಗೆ ನ್ಯಾಯಾಲಯದ ಆದೇಶ ಅನುಸಾರ ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳಾದ ಚಾಪೆ, ದಿಂಬು, ಕಂಬಳಿ, ತಟ್ಟೆ, ಚೊಂಬು ನೀಡಲಾಗಿದೆ. ಒಂದು ಗಂಟೆ ವಾಕಿಂಗ್‌ಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಪಲ್ಲಂಗ (ಮಂಚ/ಹಾಸಿಗೆ) ಕೇಳಿದರೆ, ಅದನ್ನು ನೀಡಲು ಜೈಲು ಕೈಪಿಡಿಯಲ್ಲಿ ಅವಕಾಶವಿಲ್ಲ...!’ ಕಾರಾಗೃಹದ ಕೈಪಿಡಿ ಅನುಸಾರ ತನಗೆ ಕನಿಷ್ಠ ಸೌಲಭ್ಯ ಕಲ್ಪಿಸಲು ನ್ಯಾಯಾಲಯ ಹೊರಡಿಸಿರುವ ಆದೇಶ ಪಾಲಿಸದ ಜೈಲಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸಲು ಶಿಫಾರಸು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿರುವ ನಟ ದರ್ಶನ್‌ ಮನವಿಗೆ ಸರ್ಕಾರಿ ವಿಶೇಷ ಅಭಿಯೋಜಕರಾದ (ಎಸ್‌ಪಿಪಿ) ಪಿ.ಪ್ರಸನ್ನ ಕುಮಾರ್‌ ಮಂಡಿಸಿದ ವಾದವಿದು.

ಅರ್ಜಿಯ ವಿಚಾರಣೆ ವೇಳೆ ದರ್ಶನ್‌ ಪರ ವಕೀಲ ಎಸ್‌.ಸುನೀಲ್‌ ಕುಮಾರ್‌ ಮತ್ತು ಜೈಲಧಿಕಾರಿಗಳ ಪರ ಎಸ್‌ಪಿಪಿ ನಡುವೆ ಕಾವೇರಿದ ವಾದ-ಪ್ರತಿವಾದ ನಡೆಯಿತು. ಅಂತಿಮವಾಗಿ ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ದರ್ಶನ್‌ ಮನವಿ ಕುರಿತ ತೀರ್ಪನ್ನು ಅ.9ಕ್ಕೆ ಕಾಯ್ದಿರಿಸಿತು. ಇದಕ್ಕೂ ಮುನ್ನ ನ್ಯಾಯಾಲಯದ ಹಿಂದಿನ ಆದೇಶದಂತೆ ಜೈಲಿನಲ್ಲಿ ದರ್ಶನ್‌ಗೆ ನೀಡಲಾದ ಸೌಲಭ್ಯಗಳ ಕುರಿತು ವಿವರಣೆ ನೀಡಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಾದ ಸುರೇಶ್‌ ನ್ಯಾಯಾಧೀಶರ ಮುಂದೆ ಖುದ್ದು ಹಾಜರಾಗಿ ಲಿಖಿತ ರೂಪದಲ್ಲಿ ವಿವರಣೆ ನೀಡಿದರು. ಈ ವೇಳೆ ‘ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆಯೇ?’ ಎಂದು ನ್ಯಾಯಾಲಯ ಕೇಳಿದ ಪ್ರಶ್ನೆಗೆ ‘ಪಾಲಿಸಲಾಗಿದೆ’ ಎಂದು ಉತ್ತರಿಸಿದರು.

ನಂತರ ಜೈಲು ಅಧಿಕಾರಿಗಳ ಪರ ಎಸ್‌ಪಿಪಿ ಪ್ರಸನ್ನಕುಮಾರ್, ದರ್ಶನ್‌ಗೆ ಜೈಲು ಕೈಪಿಡಿ ಅನುಸಾರ ಕನಿಷ್ಠ ಸೌಲಭ್ಯ ನೀಡಲು ನ್ಯಾಯಾಲಯ ನಿರ್ದೇಶಿಸಿತ್ತು. ಅದರಂತೆ ಕೈಪಿಡಿಯಲ್ಲಿ ಹೇಳಿರುವಂತೆ ಸವಲತ್ತುಗಳನ್ನು ದರ್ಶನ್‌ಗೆ ಕಲ್ಪಿಸಲಾಗಿದೆ. ದೂರವಾಣಿ, ವಿಡಿಯೋ ಕಾನ್ಫರೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಕಂಬಳಿ, ಬೆಡ್‌ಶೀಟ್, ತಲೆದಿಂಬು, ತಟ್ಟೆ, ಚೊಂಬು ನೀಡಲಾಗಿದೆ. ಆದರೆ ಅವರು ಪಲ್ಲಂಗ ಕೇಳಿದರೆ, ಅದನ್ನು ನೀಡಲು ಜೈಲು ಕೈಪಿಡಿಯಲ್ಲಿ ಅವಕಾಶವಿಲ್ಲ. ದರ್ಶನ್‌ ಇರುವ ಸೆಲ್‌ ಬಳಿ, ಲಭ್ಯವಿರುವ ಜಾಗದಲ್ಲಿ ಬೆಳಗ್ಗೆ ಮತ್ತು ಸಂಜೆ ಒಂದು ಗಂಟೆ ವಾಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಇಂತಹದ್ದೇ ಬ್ಯಾರಕ್ ಬೇಕು; ಬಿಸಿಲು ಬರಬೇಕು ಎಂದು ಜೈಲಿನಲ್ಲಿರುವ ಮೂಲಭೂತ ಹಕ್ಕಿನ ರೀತಿಯಲ್ಲಿ ಕೇಳಲಾಗದು ಎಂದು ಬಲವಾಗಿ ವಾದಿಸಿದರು.

ಕಂಬಳಿ ಮಾತ್ರ ಕೊಟ್ಟಿದ್ದಾರೆ

ಅದನ್ನು ತೀವ್ರವಾಗಿ ಆಕ್ಷೇಪಿಸಿದ ದರ್ಶನ್ ಪರ ವಕೀಲರು, ನ್ಯಾಯಾಲಯದ ಆದೇಶವನ್ನು ಜೈಲಧಿಕಾರಿಗಳು ಪಾಲಿಸುತ್ತಿಲ್ಲ. ಆದೇಶ ಪ್ರತಿಯನ್ನು ನೀಡಿದರೆ, ಎಸೆದಿದ್ದಾರೆ. ನಾವೇನು ಚಿನ್ನದ ಮಂಚ ಕೇಳುತ್ತಿಲ್ಲ. ಕೇವಲ ಚಳಿಯಿಂದ ರಕ್ಷಣೆ ಪಡೆಯಲು ಹಾಸಿಗೆ. ದಿಂಬು ಕೇಳುತ್ತಿದ್ದೇವೆ. ಚೊಂಬು, ಲೋಟ, ಚಾಪೆಯನ್ನು ಈ ಮೊದಲೇ ನೀಡಲಾಗಿತ್ತು. ಕೋರ್ಟ್ ಆದೇಶದ ಬಳಿಕ ಕಂಬಳಿ ಮಾತ್ರ ಕೊಡಲಾಗಿದೆ. ಬ್ಯಾರಕ್ ಒಳಗೆ ಮಾತ್ರ ಅರ್ಧ ಗಂಟೆ ಕಾಲ ವಾಕಿಂಗ್‌ ಮಾಡಲು ಬಿಡಲಾಗಿದೆ. ಅಲ್ಲಿಂದ ಹೊರಗಡೆಗೆ ಬಿಡುತ್ತಿಲ್ಲ ಎಂದು ಆಕ್ರೋಶದಿಂದ ನುಡಿದರು. ದರ್ಶನ್‌ ಅವರನ್ನು ಕ್ವಾರಂಟೈನ್ ಸೆಲ್‌ನಲ್ಲಿ ಇಡಲಾಗಿದೆ.

ಬೇರೆ ಯಾರಿಗೂ ಈ ರೀತಿ ಕ್ವಾರಂಟೈನ್ ಸೆಲ್‌ನಲ್ಲಿ ಇಟ್ಟಿಲ್ಲ. ಬೇರೆ ಬ್ಯಾರಕ್‌ಗೆ ವರ್ಗಾಯಿಸಲು ಜೈಲಧಿಕಾರಿಗಳೇ ಹೆದರುತ್ತಿದ್ದಾರೆ. ಕೇಳಿದರೆ, ಸೆಲೆಬ್ರಿಟಿ ರಕ್ಷಣೆಗೆ ಕ್ರಮವೆಂದು ನೆಪ ಹೇಳುತ್ತಿದ್ದಾರೆ. ಆದರೆ, ಉಗ್ರರನ್ನು ಇರಿಸಿದ್ದ ಸೆಲ್ ಪಕ್ಕದಲ್ಲೇ ದರ್ಶನ್‌ರನ್ನು ಇರಿಸಿದ್ದಾರೆ. 14 ದಿನ ಮಾತ್ರ ಕ್ವಾರಂಟೈನ್ ಸೆಲ್‌ನಲ್ಲಿಡಬಹುದು. ಜೈಲಿನಲ್ಲಿದ್ದಾಗ ಅಪರಾಧ ಎಸಗಿದರೆ ಮಾತ್ರ ಪ್ರತ್ಯೇಕವಾಗಿ 60 ದಿನ ಇಡಬಹುದು. ಜೈಲಿನಲ್ಲಿ ಸಿಗರೇಟ್ ಸೇದಿದರು, ಮಗ್‌ನಲ್ಲಿ ಕಾಫಿ ಕುಡಿದರೆಂಬ ಕಾರಣಕ್ಕೆ ದೇಶದಲ್ಲೇ ಇಲ್ಲದ ನಿಯಮಗಳನ್ನು ದರ್ಶನ್ ಮೇಲೆ ಹೇರಲಾಗುತ್ತಿದೆ ಎಂದು ಆರೋಪಿಸಿದರು. ಅತ್ಯಾಚಾರಿ ಉಮೇಶ್ ರೆಡ್ಡಿಗೆ ಕಲರ್ ಟಿವಿ ಇರುವ ರೂಂ ನೀಡಲಾಗಿದೆ. ಇತರೆ ವಿವಿಐಪಿ ಕೈದಿಗಳಿಗೆ ವಿಶೇಷ ಸವಲತ್ತು ನೀಡಲಾಗಿದೆ. ದರ್ಶನ್‌ಗೆ ಮಾತ್ರ ಯಾವ ಸೌಲಭ್ಯವೂ ನೀಡುತ್ತಿಲ್ಲ.

ಜೈಲು ಅಧಿಕಾರಿಗಳಿಗೆ ಆರೋಪಿಗಳ ರಕ್ಷಣೆಯ ಜವಾಬ್ದಾರಿಯೂ ಇದೆ. ಅದನ್ನು ಅವರು ನಿಭಾಯಿಸಬೇಕಲ್ಲವೇ? ಜೈಲು ಅಧಿಕಾರಿಗಳಿಗೆ ಕೋರ್ಟ್ ನೀಡಿದ ನಿರ್ದೇಶನ ಅರ್ಥವಾಗಿಲ್ಲ ಎಂದು ಆಕ್ಷೇಪಿಸಿದರು. ಎಸ್‌ಪಿಸಿ ವಾದ ಮುಂದುವರಿಸಿ, ಕ್ವಾರಂಟೈನ್ ಸೆಲ್ ಕೂಡ ಜೈಲಿನ ಒಂದು ಭಾಗವಾಗಿದೆ. ಯಾವ ಕೈದಿಗೆ ಯಾವ ಸೆಲ್‌ ನೀಡಬೇಕು? ಯಾವ ಸೆಲ್‌ ಸೂಕ್ತ ಎಂಬುದು ಜೈಲು ಅಧಿಕಾರಿಗಳಿಗೆ ಬಿಟ್ಟ ವಿಚಾರ. ದರ್ಶನ್ ವಿಚಾರಣಾಧೀನ ಕೈದಿ. ಆತನನ್ನು ಜೈಲಿನಲ್ಲಿ ಎಲ್ಲಿ ಬೇಕಾದರೂ ಇಡಬಹುದು. ವಿಚಾರಣಾಧೀನ ಕೈದಿಗಳಿಗೆ ವಿಶೇಷ, ಸಾಮಾನ್ಯ ಎಂಬ ವರ್ಗೀಕರಣವಿದೆ. ಸಜಾಬಂಧಿಗಳಿಗೆ ಎ,ಬಿ,ಸಿ, ಎಂಬ ವರ್ಗೀಕರಣವಿದೆ. ಕೈದಿಗಳಿಗಿರುವ ಭದ್ರತಾ ಅಪಾಯ ಗಮನದಲ್ಲಿಕೊಂಡು ಸೆಲ್ ನೀಡಲಾಗುತ್ತದೆ. ಜೈಲಿನಲ್ಲಿದ್ದಾಗ ಸೌಲಭ್ಯ ದುರುಪಯೋಗ ಮಾಡಿರುವ ಕಾರಣಗಳಿಗೆ ಪ್ರತ್ಯೇಕ ಸೆಲ್‌ನಲ್ಲಿ ಇಡಲು ಅವಕಾಶವಿದೆ ಎಂದು ಪ್ರತ್ಯುತ್ತರ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌