ಡೆವಿಲ್‌ ಸಿನಿಮಾದ ಶೂಟಿಂಗ್‌ ಹಿನ್ನಲೆ: 25 ದಿನ ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ದರ್ಶನ್‌ ಅರ್ಜಿ

Kannadaprabha News   | Kannada Prabha
Published : May 29, 2025, 05:33 AM IST
Darshan Thoogudeepa

ಸಾರಾಂಶ

ವಿದೇಶಕ್ಕೆ ತೆರಳಲು ಅನುಮತಿ ಕೋರಿ ದರ್ಶನ್‌ ಅಲ್ಲಿಸಿರುವ ಅರ್ಜಿ ಕುರಿತು ಬುಧವಾರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ.

ಬೆಂಗಳೂರು (ಮೇ.29): ‘ಡೆವಿಲ್‌’ ಚಿತ್ರದ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಲು ಜೂ.1ರಿಂದ 25ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿ ರೇಣುಕಾಸ್ವಾಮಿ ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್‌ ಸಲ್ಲಿಸಿರುವ ಅರ್ಜಿ ಕುರಿತು ನಗರದ 64ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಮೇ 30ರಂದು ಆದೇಶ ನೀಡಲಿದೆ. ವಿದೇಶಕ್ಕೆ ತೆರಳಲು ಅನುಮತಿ ಕೋರಿ ದರ್ಶನ್‌ ಅಲ್ಲಿಸಿರುವ ಅರ್ಜಿ ಕುರಿತು ಬುಧವಾರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿದ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ.

ವಿಚಾರಣೆ ಸಂದರ್ಭದಲ್ಲಿ ದರ್ಶನ್‌ ಪರ ವಕೀಲ, ಪ್ರಕರಣ ಸಂಬಂಧ ಜಾಮೀನು ನೀಡಿರುವ ಸಂದರ್ಭದಲ್ಲಿ ಬೆಂಗಳೂರು ಬಿಟ್ಟು ಹೊರ ಹೋಗುವ ಪರಿಸ್ಥಿತಿಯಲ್ಲಿ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಲಾಗಿದೆ. ಅರ್ಜಿದಾರ ದರ್ಶನ್ ಚಿತ್ರನಟರಾಗಿದ್ದಾರೆ. ನಟನೆಯೇ ಅವರ ಆದಾಯದ ಮೂಲ. ದುಬೈ, ಯೂರೋಪ್‌ನಲ್ಲಿ ಅವರು ನಟಿಸುತ್ತಿರುವ ಚಿತ್ರದ ಚಿತ್ರೀಕರಣ ನಿಗದಿಯಾಗಿದೆ. ಅದರಂತೆ ಜೂ.1ರಿಂದ 25ರವರೆಗೆ ವಿದೇಶಕ್ಕೆ ತೆರಳಲು ಅನುಮತಿ ನೀಡಬೇಕು ಎಂದು ಕೋರಿದ್ದರು.

ಈ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರ ಪರ ವಿಶೇಷ ಸರ್ಕಾರಿ ಅಭಿಯೋಜಕರು, ಯಾವ ದೇಶಕ್ಕೆ ಹೋಗುತ್ತಾರೆ? ಎಲ್ಲಿ ಉಳಿಯುತ್ತಾರೆ ಎಂಬ ಬಗ್ಗೆ ಅರ್ಜಿದಾರ ಅರ್ಜಿಯಲ್ಲಿ ವಿವರಗಳನ್ನು ನೀಡಿಲ್ಲ. ಹಾಗಾಗಿ, ಅನುಮತಿ ನೀಡಬಾರದು ಎಂದು ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಅರ್ಜಿ ಕುರಿತು ಮೇ 30ರಂದು ಆದೇಶ ನೀಡುವುದಾಗಿ ತಿಳಿಸಿತು.

ನಮ್ಮ ವಿರುದ್ಧ ಸುಳ್ಳು ಕೇಸ್‌: ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲು ಮಾಡಲಾಗಿದೆ ಎಂದು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಗೌಡ ಮತ್ತು ಇತರ ಆರೋಪಿಗಳು ನ್ಯಾಯಾಲಯಕ್ಕೆ ಹೇಳಿದ್ದಾರೆ. ನಗರದ 57ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ, ನಿಮ್ಮ ವಿರುದ್ಧ ಐಪಿಸಿ ಕಲಂ 302, 34, 120(ಬಿ) ಸೇರಿ ವಿವಿಧ ಕಲಂಗಳ ಅಡಿ ಕೇಸ್ ದಾಖಲಾಗಿದೆ. ಇದನ್ನು ಒಪ್ಪಿಕೊಳ್ಳುವಿರಾ ಎಂದು ನ್ಯಾಯಾಧೀಶರು ಕೇಳಿದರು. ಆಗ, ನಮ್ಮ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಲಾಗಿದೆ ಎಂದು ಆರೋಪಿಗಳು ಹೇಳಿದರು. ಮಂಗಳವಾರದ ವಿಚಾರಣೆಗೆ ಮೂರನೇ ಆರೋಪಿ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಮುಂದಿನ ವಿಚಾರಣೆ ವೇಳೆ ಎಲ್ಲ ಆರೋಪಿಗಳು ಹಾಜರಾಗಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಜು.10ಕ್ಕೆ ಮುಂದೂಡಿತು.

ಒಂದೆಡೆ ನಿಲ್ಲಲು ಸೂಚನೆ: ಬೆಳಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾದಾಗ ಪ್ರಕರಣದ ಸಂಖ್ಯೆ ಮತ್ತು ಆರೋಪಿಗಳ ಹಾಜರಾತಿಯನ್ನು ನ್ಯಾಯಾಲಯದ ಸಿಬ್ಬಂದಿ ಖಚಿತಪಡಿಸಿಕೊಂಡರು. ಪವಿತ್ರಗೌಡ ಅವರಿಂದ ದರ್ಶನ್ ದೂರ ನಿಂತಿದ್ದರು. ಆಗ, ಒಂದನೇ ಆರೋಪಿ ಪಕ್ಕದಲ್ಲಿ ನಿಲ್ಲುವಂತೆ ದರ್ಶನ್‌ಗೆ ನ್ಯಾಯಾಧೀಶರು ಸೂಚಿಸಿದರು. ಏ.8ರಂದು ಇದೇ ನ್ಯಾಯಾಲಯದಲ್ಲಿ ನಡೆದಿದ್ದ ವಿಚಾರಣೆಗೆ ದರ್ಶನ್ ಗೈರಾಗಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ನಿಗದಿತ ದಿನಾಂಕಗಳಂದು ಆರೋಪಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ದರ್ಶನ್ ಪರ ವಕೀಲರಿಗೆ ಸೂಚಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌