
ಶ್ರೀಕಾಂತ್ ಎನ್. ಗೌಡಸಂದ್ರ
ಬೆಂಗಳೂರು (ಮೇ.29): ನೆರೆಯ ಆಂಧ್ರಪ್ರದೇಶ ಸೇರಿ ಹಲವು ರಾಜ್ಯಗಳು ಕರ್ನಾಟಕದ ಕೈಗಾರಿಕೆಗಳನ್ನು ಕೈ ಬೀಸಿ ಕರೆಯುತ್ತಿದ್ದರೆ, ಇತ್ತ ರಾಜ್ಯದಲ್ಲಿ ಓಸಿ-ಸಿಸಿ ನೆಪದಲ್ಲಿ ಬರೋಬ್ಬರಿ 5,500 ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕವನ್ನೇ ನೀಡುತ್ತಿಲ್ಲ. ಪರಿಣಾಮ ರಾಜ್ಯದ ಸಣ್ಣ ಕೈಗಾರಿಕಾ ವಲಯದ ಮೇಲೆ ಭಾರೀ ಪೆಟ್ಟು ಬಿದ್ದಿದೆ ಎಂಬ ದೂರು ಕೇಳಿಬಂದಿದೆ. ರಾಜ್ಯದಲ್ಲಿ ವಸತಿ ಹಾಗೂ ವಾಣಿಜ್ಯ ಆಸ್ತಿಗಳ ಮಾದರಿಯಲ್ಲಿ ಕೈಗಾರಿಕೆ, ಕೈಗಾರಿಕಾ ಶೆಡ್‌ಗಳಿಗೂ ಏ.4 ರಿಂದ ವಿದ್ಯುತ್ ಸಂಪರ್ಕಕ್ಕೆ ಓಸಿ (ಸ್ವಾಧೀನಾನುಭವ ಪತ್ರ)-ಸಿಸಿ (ನಿರ್ಮಾಣ ಕಾರ್ಯಾರಂಭ ಪತ್ರ) ಕಡ್ಡಾಯ ಮಾಡಲಾಗಿದೆ.
ರಾಜ್ಯದಲ್ಲಿ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯದ ಹೊರತು ನಿವೇಶನ ಅಥವಾ ಜಾಗಗಳಲ್ಲಿ ಕೈಗಾರಿಕೆ ಸ್ಥಾಪಿಸಲು ನಕ್ಷೆ ಮಂಜೂರಾತಿ ನೀಡುತ್ತಿಲ್ಲ. ಎಲ್ಲವೂ ಸರಿಯಿದ್ದು ನಕ್ಷೆ ಮಂಜೂರಾತಿ ಪಡೆದಿದ್ದರೂ ನಕ್ಷೆ ಮಂಜೂರಾತಿ ಪ್ರಕಾರ ಕೈಗಾರಿಕಾ ಕಟ್ಟಡ ನಿರ್ಮಿಸಿಲ್ಲ ಎಂದೆಲ್ಲ ಕಾರಣಗಳನ್ನು ನೀಡಿ ಓಸಿ ಕೊಡುತ್ತಿಲ್ಲ. ಓಸಿ ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ ಎಂಬ ನೆಪ ನೀಡಿ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ. ಇದರಿಂದ ಕೈಗಾರಿಕೆ, ಸಣ್ಣ ಕೈಗಾರಿಕೆ, ಕೋಳಿ ಫಾರಂ, ಡೈರಿಫಾರಂಗೆ ಕೂಡ ವಿದ್ಯುತ್ ಸಂಪರ್ಕ ಸಿಗದಂತಾಗಿದೆ.
ಕೋಟ್ಯಂತರ ರು. ಬಂಡವಾಳ ಹೂಡಿ ಕೈಗಾರಿಕೆ ಶುರು ಮಾಡಲು ಮುಂದಾದರೆ ಓಸಿ-ಸಿಸಿ ನೆಪದಲ್ಲಿ ಮೂಲ ಸೌಕರ್ಯಗಳಾದ ವಿದ್ಯುತ್, ನೀರು ಹಾಗೂ ಒಳಚರಂಡಿ ಸಂಪರ್ಕವನ್ನೇ ನೀಡುತ್ತಿಲ್ಲ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಖುದ್ದು ಭೇಟಿಯಾಗಿ ಸಂಘದ ಅಧ್ಯಕ್ಷರು ಅಹವಾಲು ಪತ್ರವನ್ನೂ ನೀಡಿದ್ದು, ಗಂಭೀರ ಸಮಸ್ಯೆ ಇತ್ಯರ್ಥ ಮಾಡದಿದ್ದರೆ ಕೈಗಾರಿಕಾ ವಲಯಕ್ಕೆ ತೀವ್ರ ನಷ್ಟ ಉಂಟಾಗಲಿದೆ ಎಂದು ಎಚ್ಚರಿಸಿದ್ದಾರೆ.
ಶೇ.94 ಕೈಗಾರಿಕೆಗಳು ಕೈಗಾರಿಕಾ ಪ್ರದೇಶದಲ್ಲಿಲ್ಲ: ಈ ಬಗ್ಗೆ ಕನ್ನಡಪ್ರಭ ಜತೆ ಮಾತನಾಡಿದ ಕಾಸಿಯಾ ಅಧ್ಯಕ್ಷ ಎಂ.ಜಿ.ರಾಜಗೋಪಾಲ್, ರಾಜ್ಯದಲ್ಲಿ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (ಕೆಎಸ್‌ಎಸ್‌ಐಡಿಸಿ) ಹಾಗೂ ಕೆಐಎಡಿಬಿ ನಿವೇಶನಗಳಲ್ಲಿ ಇರುವ ಕೈಗಾರಿಕೆಗಳು ಶೇ.6 ಮಾತ್ರ. ಉಳಿದ ಶೇ.94 ರಷ್ಟು ಕೈಗಾರಿಕೆ ಬಿ ಖಾತಾ, ಕಂದಾಯ ಭೂಮಿಗಳಲ್ಲೇ ಇದೆ. ಬೆಂಗಳೂರಿನಲ್ಲೇ ರಾಜಾಜಿನಗರ, ಪೀಣ್ಯ, ಸುಂಕದಕಟ್ಟೆ ಸೇರಿ ಹಲವೆಡೆ ಇರುವ ಕೈಗಾರಿಕೆಗಳು ಬಿ-ಖಾತಾ ನಿವೇಶನಗಳಲ್ಲೇ ಇವೆ. ಹೀಗಿರುವಾಗ ಹೊಸದಾಗಿ ನಕ್ಷೆ ಮಂಜೂರಾತಿ, ನಿರ್ಮಾಣ ನಿಯಮ ಉಲ್ಲಂಘನೆ, ಓಸಿ-ಸಿಸಿ ಎಂದು ವಿದ್ಯುತ್ ನೀಡದಿದ್ದರೆ ಸಾಲ ಮಾಡಿ ಕೈಗಾರಿಕೆ ಮಾಡಿರುವ ಉದ್ಯಮಿಗಳು ಬೀದಿಗೆ ಬೀಳಬೇಕಾಗುತ್ತದೆ.
ಮೇ 17 ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಮ್ಮ ಮನವಿ ಸಲ್ಲಿಸಿದ್ದೇವೆ. ಆ ದಿನಕ್ಕೆ 5,500 ವಿದ್ಯುತ್ ಸಂಪರ್ಕ ಅರ್ಜಿಗಳಿಗೆ ಸಂಪರ್ಕ ನೀಡಿಲ್ಲ. ಶುಲ್ಕ ಪಾವತಿಸಿ ವೈರಿಂಗ್ ಮುಗಿದಿರುವ ಕಾರ್ಖಾನೆಗಳಿಗೂ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ. ಈಗಾಗಲೇ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯದ ಜತೆ ದಶಕಗಳ ನಂಟು ಇರುವ ಎಚ್‌ಎಎಲ್ ಸಂಸ್ಥೆಯನ್ನೇ ತಮ್ಮ ರಾಜ್ಯಕ್ಕೆ ಸ್ಥಳಾಂತರವಾಗುವಂತೆ ಕರೆಯುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ರಾಜ್ಯ ಸರ್ಕಾರ ಮಾತ್ರ ಇಲ್ಲಿ ನಿರ್ಮಾಣವಾಗಿರುವ ಕೈಗಾರಿಕೆಗಳಿಗೆ ವಿದ್ಯುತ್, ನೀರು ನೀಡುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶದ ನೆಪ ಇಟ್ಟುಕೊಂಡು ಓಸಿ-ಸಿಸಿ ಇಲ್ಲದೆ ವಿದ್ಯುತ್ ನೀಡುವುದಿಲ್ಲ ಎಂದು ವಿನಾಕಾರಣ ಕಿರುಕುಳ ನೀಡಲಾಗುತ್ತಿದೆ. ಈ ನಿಯಮ ಬೇರೆ ರಾಜ್ಯಗಳಲ್ಲಿ ಯಾಕೆ ಅನ್ವಯ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಏನಿದು ಸುಪ್ರೀಂ ಕೋರ್ಟ್ ಆದೇಶ?: ಸುಪ್ರೀಂ ಕೋರ್ಟ್ 2024ರ ಡಿ.17ರ ಆದೇಶದಲ್ಲಿ ಅನಧಿಕೃತವಾಗಿ ಕಟ್ಟಡ ಹಾಗೂ ನಕ್ಷೆ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ಮೇಲೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆದೇಶ ಮಾಡಿದೆ. ಈ ವೇಳೆ ನಕ್ಷೆ ಮಂಜೂರಾತಿ ಹಾಗೂ ಓಸಿ ಇಲ್ಲದ ಯಾವುದೇ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ, ನೀರಿನ ಸಂಪರ್ಕ ನೀಡದಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದರನ್ವಯ ಮಾ.13 ರಂದು ಆದೇಶ ಹೊರಡಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ), ಬೆಂಗಳೂರಿನ ಬೆಸ್ಕಾಂ, ಮಂಗಳೂರು, ಹುಬ್ಬಳ್ಳಿ, ಚಾಮುಂಡೇಶ್ವರಿ (ಮೈಸೂರು), ಕಲಬುರ್ಗಿ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸರಬರಾಜು ಸಹಕಾರ ಸೊಸೈಟಿ ಸೇರಿ ಆರೂ ಎಸ್ಕಾಂಗಳು ಓಸಿ ಪ್ರಮಾಣಪತ್ರ ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ನೀಡಬಾರದು. ಈ ಬಗ್ಗೆ ಸುಪ್ರೀಂ ಕೋರ್ಟ್ ಹೊರಡಿಸಿರುವ ಎಲ್ಲಾ ನಿಯಮಗಳನ್ನು ಸ್ಪಷ್ಟವಾಗಿ ಎಸ್ಕಾಂಗಳು ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಎಸ್ಕಾಂಗಳು ಈ ನಿಯಮ ಜಾರಿ ಮಾಡಿವೆ.
ನಾವು ಜಮೀನು ಖರೀದಿಸಿದಾಗ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದಾರೆ. ಬಳಿಕ ಪ್ರತಿ ವರ್ಷ ಆಸ್ತಿ ತೆರಿಗೆಯನ್ನೂ ಪಾವತಿಸಿಕೊಳ್ಳುತ್ತಿದ್ದಾರೆ. ಆದರೆ ಅವುಗಳಲ್ಲಿ ಕಟ್ಟಡ ಕಟ್ಟಲು ಮಾತ್ರ ಇ-ಖಾತಾ ಇಲ್ಲ, ಎ-ಖಾತಾ ಇಲ್ಲ ಎಂದು ನಕ್ಷೆ ಮಂಜೂರಾತಿ ನೀಡುತ್ತಿಲ್ಲ. ನಕ್ಷೆ ಮಂಜೂರಾತಿ ಪ್ರಕಾರ ಕೈಗಾರಿಕೆ ಕಟ್ಟಿಲ್ಲ ಎಂದು ವಿದ್ಯುತ್, ನೀರು ಕೊಡುತ್ತಿಲ್ಲ. ಸಾಲ ಸೋಲ ಮಾಡಿ ಕೋಟ್ಯಂತರ ರು. ಬಂಡವಾಳ ಹೂಡಿ ಜಮೀನು ಖರೀದಿಸಿ ಸುಮ್ಮನೆ ಕೋಮಾದಲ್ಲಿ ಮಲಗುವಂತಾಗಿದೆ.
- ಎಂ.ಜಿ. ರಾಜಗೋಪಾಲ್, ಕಾಸಿಯಾ ಅಧ್ಯಕ್ಷ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ