ನಕ್ಸಲ್ ನಂಟು : ತಂದೆ-ಮಗ ನಿರ್ದೋಷಿ: 9 ವರ್ಷಗಳ ಬಳಿಕ ಕೇಸ್ ಸುಖಾಂತ್ಯ

By Suvarna NewsFirst Published Oct 21, 2021, 4:56 PM IST
Highlights

* ವಿಠಲ್ ಮಲೆಕುಡಿಯ ನಕ್ಸಲ್ ನಂಟಿನ ಆರೋಪದಿಂದ ಮುಕ್ತ
* ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ತೀರ್ಪು
* 9 ವರ್ಷಗಳ ಬಳಿಕ ಅಂತಿಮ ತೀರ್ಪು ಪ್ರಕಟಿಸಿದ ನ್ಯಾಯಾಲಯ

ಮಂಗಳೂರು, (ಅ.21): ನಕ್ಸಲ್ ನಂಟಿನ (Naxal Link) ಆರೋಪದಿಂದ ವಿಠಲ್ ಮಲೆಕುಡಿಯ ಮತ್ತು ಆತನ ತಂದೆ ಆರೋಪ ಮುಕ್ತರಾಗಿದ್ದಾರೆ. ಇಡೀ ದೇಶದಲ್ಲೇ ಭಾರೀ ಸಂಚಲನ ಸೃಷ್ಟಿಸಿದ್ದ ಈ ಪ್ರಕರಣ 9 ವರ್ಷಗಳ ಬಳಿಕ ಸುಖಾಂತ್ಯ ಕಂಡಿದೆ.

2012ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ (Mangaluru University) ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಯಾಗಿದ್ದ ವಿಠಲ್ ಮಲೆಕುಡಿಯ (Vittal Malekudiya) ಅವರಿಗೆ ನಕ್ಸಲ್ ನಂಟು ಇದೆ ಎಂದು ಬಂಧಿಸಲಾಗಿತ್ತು.

 9 ವರ್ಷಗಳ ಹಿಂದಿನ ಆ ಪ್ರಕರಣದ ಅಂತಿಮ ತೀರ್ಪನ್ನು ಪ್ರಕಟಿಸಿರುವ ನ್ಯಾಯಾಲಯ ನಕ್ಸಲ್ ನಂಟಿನ  ಆರೋಪದಿಂದ ವಿಠಲ್ ಮಲೆಕುಡಿಯ ಮತ್ತು ಆತನ ತಂದೆಯನ್ನು ಮುಕ್ತಗೊಳಿಸಿದೆ.  ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಇಂದು (ಅ.21) ಮಹತ್ವದ ತೀರ್ಪು ನೀಡಿದೆ.

ಕರ್ನಾ​ಟ​ಕ-ತಮಿ​ಳ್ನಾಡು ಗಡಿಯಲ್ಲಿ ನಕ್ಸಲ್‌ ಚಟುವಟಿಕೆ: ಭದ್ರತೆ ಭಾರೀ ಹೆಚ್ಚಳ!

ದಕ್ಷಿಣ ಕನ್ನಡ (Dakshina Kananda) ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ಮತ್ತು ಆತನ ತಂದೆಯನ್ನು 2012ರ ಮಾರ್ಚ್ 03ರಂದು ನಕ್ಸಲ್ ನಿಗ್ರಹ ಪಡೆ ಬಂಧಿಸಿತ್ತು.  ನಕ್ಸಲ್ ನಂಟಿನ ಈ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿತ್ತು. ಇದೀಗ 9 ವರ್ಷಗಳ ಈ ಕೇಸ್ ಸುಖಾಂತ್ಯವಾಗಿದೆ.

ವಿಠಲ್ ಮನೆಗೆ ದಾಳಿ ನಡೆಸಿದ್ದ ವೇಳೆ ಚುನಾವಣೆ ಬಹಿಷ್ಕಾರದ ಕರಪತ್ರ, ಭಗತ್ ಸಿಂಗ್ ಪುಸ್ತಕ, ನಕ್ಸಲ್ ಬರಹದ ಪತ್ರಿಕಾ ಕಟ್ಟಿಂಗ್ ಗಳು ಪತ್ತೆಯಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಮೂಲ ನಿವಾಸಿಗಳನ್ನ ಒಕ್ಕಲೆಬ್ಬಿಸುವುದರ ವಿರುದ್ಧ ಹೋರಾಟ ನಡೆಸುತ್ತಿದ್ದ ವಿಠಲ್ ಮಲೆಕುಡಿಯ ಅವರಿಗೆ ನಕ್ಸಲ್ ನಂಟಿದೆ ಎಂದು ಬಂಧಿಸಿದ್ದ ನಕ್ಸಲ್ ನಿಗ್ರಹ ಪಡೆ ವೇಣೂರು ಪೊಲೀಸರಿಗೆ ಒಪ್ಪಿಸಿತ್ತು.

ವಿಠಲ ಮಲೆಕುಡಿಯ ಪ್ರತಿಕ್ರಿಯೆ

 ನಕ್ಸಲ್ ನಂಟು ಆರೋಪದಿಂದ ನಿರ್ದೋಷಿ ಎಂದು ತೀರ್ಪು ಪ್ರಕಟ ಹಿನ್ನೆಲೆ ಏಷ್ಯಾನೆಟ್ ಸುವರ್ಣ ನ್ಯೂಸ್‌ ಜತೆ  ಆರೋಪ ಮುಕ್ತ ವಿಠಲ ಮಲೆಕುಡಿಯ ಪ್ರತಿಕ್ರಿಯಿಸಿದ್ದು, ನನ್ನ ಪ್ರಕರಣದಲ್ಲಿ ಜನ ನನ್ನ ಪರ ನಿಂತ ಕಾರಣ ಬಿಡುಗಡೆಯಾಗಿದ್ದೇನೆ. ನಾವು ನಕ್ಸಲ್ ಬೆಂಬಲಿಗರಲ್ಲ, ದೇಶದ್ರೋಹಿಗಳಲ್ಲ ಅನ್ನೋದನ್ನ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ ಎಂದರು.

ಕುತ್ಲೂರು ಆವತ್ತು ನಕ್ಸಲ್ ಪೀಡಿತ ಪ್ರದೇಶ ಅಲ್ಲ, ಪೊಲೀಸ್ ಪೀಡಿತ ಪ್ರದೇಶ. ಪ್ರತೀ ನಿತ್ಯ ನನ್ನೂರಿನ ಒಬ್ಬರ ಬಂಧನವಾಗ್ತಿತ್ತು, ಪೊಲೀಸ್ ದೌರ್ಜನ್ಯ ಮಿತಿ ಮೀರಿತ್ತು. ಭಗತ್ ಸಿಂಗ್ ಪುಸ್ತಕ ಓದೋದು ದೇಶದ್ರೋಹ ಅಲ್ಲ ಅಂತ ಇವತ್ತು ಕೋರ್ಟ್ ಹೇಳಿದೆ. ಸಕ್ಕರೆ, ಚಾ ಹುಡಿ, ಆಟಿಕೆ ಬೈನಾಕ್ಯುಲರ್ ಇದ್ದ ಕಾರಣಕ್ಕೆ ಪೊಲೀಸರು ಬಂಧಿಸಿದ್ದರು. ಇದನ್ನ ನಕ್ಸಲರಿಗೆ ಇಟ್ಟಿದ್ದು ಅಂತ ನನ್ನ ಮೇಲೆ ಆರೋಪ ಮಾಡಿದ್ದರು ಎಂದು ಹೇಳಿದರು.

ಇವತ್ತು ಕೂಡ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಮೂಲ ನಿವಾಸಿಗಳ ಪರವಾದ ನಮ್ಮ ಬೇಡಿಕೆಯಿದೆ.ಸರ್ಕಾರಕ್ಕೆ ಈಗಲೂ ನಮ್ಮ ಮೇಲೆ ಕಾಳಜಿ ಇಲ್ಲ. ನಮ್ಮ ಹೋರಾಟ ಇನ್ನೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

click me!