ಇನ್ನು ಹತ್ತೇ ದಿನ: ಇ-ಕೆವೈಸಿ ಆಗದಿದ್ರೆ BPL ಕಾರ್ಡ್‌ ಖೋತಾ!

By Kannadaprabha NewsFirst Published Oct 21, 2021, 7:20 AM IST
Highlights

* ಇ-ಕೆವೈಸಿ ಆಗದಿದ್ರೆ ಬಿಪಿಎಲ್‌ ಖೋತಾ

* ಅ.31 ಗಡುವು ಇನ್ನು ಹತ್ತೇ ದಿನ

* ಪಡಿತರ ಕೇಂದ್ರಕ್ಕೆ ಹೋಗಿ ಆಧಾರ್‌, ಬೆರಳಚ್ಚು ನೀಡಿ

* ಇಲ್ಲವಾದಲ್ಲಿ ಹೆಸರು ರದ್ದು, ರೇಷನ್‌ ಕೂಡ ಸಿಗೋಲ್ಲ

ಬೆಂಗಳೂರು(ಅ.21): ರಾಜ್ಯದ ಬಿಪಿಎಲ್‌ ಪಡಿತರ ಚೀಟಿದಾರರೇ(BPL Ration Card), ಕೂಡಲೇ ನ್ಯಾಯಬೆಲೆ ಅಂಗಡಿಗೆ ತೆರಳಿ ಆಧಾರ್‌ ಕಾರ್ಡ್‌(Aadhaar) ಜೋಡಣೆ ಹಾಗೂ ಕುಟುಂಬದ ಸದಸ್ಯರ ಬೆರಳಚ್ಚು ನೀಡಿ. ಈ ಪ್ರಕ್ರಿಯೆ ನಡೆಸಲು ಇರುವ ಕಾಲಾವಕಾಶ ಇನ್ನು ಹತ್ತೇ ದಿನ.

ಹೌದು, ಬಿಪಿಎಲ್‌ ಕಾರ್ಡುದಾರರು ತಮ್ಮ ಇ-ಕೆವೈಸಿ(e-KYC) ಮಾಡಿಸದಿದ್ದರೆ ಪಡಿತರ ಹಂಚಿಕೆ ರದ್ದಾಗಲಿದೆ ಎಂದು ಆಹಾರ ಮತ್ತು ನಾಗರಿಕ ಇಲಾಖೆ ಎಚ್ಚರಿಸಿದೆ.

ಅನಧಿಕೃತ ಬಿಪಿಎಲ್‌ ಪಡಿತರ ಚೀಟಿ ಪತ್ತೆಗಾಗಿ ಇ-ಕೆವೈಸಿ (ಆಧಾರ್‌ ಕಾರ್ಡ್‌ ಜೋಡಣೆ) ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಬಿಪಿಎಲ್‌ ಪಡಿತರ ಚೀಟಿಯಲ್ಲಿ ಹೆಸರಿರುವ ಸದಸ್ಯರು ಅ.31ರೊಳಗೆ ಸಮೀಪದ ನ್ಯಾಯಬೆಲೆ ಅಂಗಡಿಗೆ(Ration Shop) ತೆರಳಿ ಪಡಿತರ ಚೀಟಿಗೆ ಆಧಾರ್‌ ಕಾರ್ಡ್‌ ಜೋಡಣೆ ಮಾಡಿಸಬೇಕು ಮತ್ತು ಬೆರಳಚ್ಚು ನೀಡಬೇಕು. ಒಂದು ವೇಳೆ ಆಧಾರ್‌ ಜೋಡಣೆ ಮತ್ತು ಬೆರಳಚ್ಚು ನೀಡದಿದ್ದಲ್ಲಿ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ತೆಗೆದು ಹಾಕಲಾಗುವುದು ಹಾಗೂ ಆ ಸದಸ್ಯನಿಗೆ ಇದುವರೆಗೂ ನೀಡುತ್ತಿದ್ದ ಪಡಿತರ(Ration) ಕಡಿತಗೊಳ್ಳಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.

ಅನರ್ಹರು (ಆರ್ಥಿಕವಾಗಿ ಸಬಲರು) ಬಿಪಿಎಲ್‌ ಪಡಿತರ ಚೀಟಿಯನ್ನು(BPL Raion Card) ದುರ್ಬಳಕೆ ಮಾಡುವುದನ್ನು ತಡೆಗಟ್ಟಲು ಇಲಾಖೆಯು ಪ್ರತಿ ವರ್ಷ ಚೀಟಿದಾರರ ಮಾಹಿತಿ ನವೀಕರಣಕ್ಕೆ ಸೂಚಿಸುತ್ತದೆ. ಅದೇ ರೀತಿ ಈ ಬಾರಿಯೂ ಮಾಹಿತಿ ಕೋರಿದ್ದು, ಮಾಹಿತಿ ನೀಡಲು ಹಾಗೂ ಪಡಿತರ ಚೀಟಿಗೆ ಆಧಾರ್‌ ಕಾರ್ಡು ಜೋಡಣೆ ಮಾಡಲು ಅ.31 ಅಂತಿಮ ದಿನ. ಈ ಅವಧಿ ವೇಳೆಗೆ ಪಡಿತರದಾರರು ತಮ್ಮ ಹಾಗೂ ಕುಟುಂಬದ ಪ್ರತಿ ಸದಸ್ಯರ ಆಧಾರ್‌ ಕಾರ್ಡು ಜೋಡಣೆ ಮಾಡಬೇಕು ಹಾಗೂ ಪ್ರತಿ ಸದಸ್ಯನೂ ಖುದ್ದಾಗಿ ತೆರಳಿ ಬೆರಳಚ್ಚು ನೀಡಬೇಕು.

ಒಂದು ವೇಳೆ ಇಡೀ ಕುಟುಂಬ ಮಾಹಿತಿ ನೀಡದಿದ್ದರೆ ಪಡಿತರ ಚೀಟಿಯೇ ರದ್ದಾಗುತ್ತದೆ. ಕುಟುಂಬದ ಯಾವುದಾದರೂ ಸದಸ್ಯ ತನ್ನ ಬೆರಳಚ್ಚು ನೀಡದಿದ್ದರೆ ಆ ಸದಸ್ಯನಿಗೆ ನೀಡಲಾಗುತ್ತಿದ್ದ ಆಹಾರ ಧಾನ್ಯದ ಪ್ರಮಾಣ ಕಡಿಮೆಯಾಗಲಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಬಿಪಿಎಲ್‌, ಎಪಿಎಲ್‌ ಹಾಗೂ ಅಂತ್ಯೋದಯ ಸೇರಿದಂತೆ ಒಟ್ಟು ಸುಮಾರು 1.8 ಕೋಟಿ ಪಡಿತರ ಚೀಟಿ ವಿತರಿಸಲಾಗಿದೆ. ಇ-ಕೆವೈಸಿ ಮೂಲಕ ಈವರೆಗೆ ಸುಮಾರು 1.73 ಲಕ್ಷ ಅನಧಿಕೃತ ಬಿಪಿಎಲ್‌ ಪಡಿತರ ಚೀಟಿ ರದ್ದುಗೊಳಿಸಲಾಗಿದೆ. ಇದೀಗ ಇ-ಕೆವೈಸಿ ಮಾಡಿಸಲು ಅ.31ರ ಗಡುವು ನೀಡಲಾಗಿದೆ. ಈ ಗಡುವಿನೊಳಗೆ ಇ-ಕೆವೈಸಿ ಮಾಡಿಸದ ಸದಸ್ಯರ ಹೆಸರನ್ನು ಪಡಿತರ ಚೀಟಿಯಿಂದ ಕೈಬಿಟ್ಟು ಅವರ ಪಾಲಿನ ಪಡಿತರ ಕಡಿತಗೊಳಿಸುವುದಾಗಿ ಆಹಾರ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಇ-ಕೆವೈಸಿ ಏಕೆ?

1. ಕಡುಬಡವರಿಗೆ ನೀಡುವ ಪಡಿತರ ಧಾನ್ಯ ಶ್ರೀಮಂತರು ಪಡೆಯುವುದನ್ನು ತಡೆಯುವ ಉದ್ದೇಶ

2. ಕುಟುಂಬವೊಂದರ ವಾರ್ಷಿಕ ಆದಾಯ 1.2 ಲಕ್ಷ ರು. ಒಳಗೆ ಇದ್ದರೆ ಮಾತ್ರ ಬಿಪಿಎಲ್‌ಗೆ ಅರ್ಹ

3. ಇದಕ್ಕಿಂತ ಹೆಚ್ಚು ಆದಾಯ ಇದ್ದವರ ಪತ್ತೆಗಾಗಿ ಆಧಾರ್‌ ಜೋಡಣೆ ಕಡ್ಡಾಯಗೊಳಿಸಿದ ಸರ್ಕಾರ

4. ಆಧಾರ್‌ಗೆ ಪ್ಯಾನ್‌ ಕಾರ್ಡ್‌ ಲಿಂಕ್‌ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಸ್ಥಿತಿವಂತರ ಪತ್ತೆ ಸುಲಭ

5. ಅಲ್ಲದೆ, ನಿಧನ ಹೊಂದಿದವರ ಹೆಸರಲ್ಲೂ ಪಡಿತರ ಪಡೆಯುವುದನ್ನು ತಪ್ಪಿಸಲು ಇ-ಕೆವೈಸಿ ವ್ಯವಸ್ಥೆ

click me!