
ವರದಿ: ರವಿ ಎಸ್ ಹಳ್ಳಿ, ಏಷ್ಯಾ ನೆಟ್ ಸುವರ್ಣ ನ್ಯೂಸ್
ಕೊಡಗು (ನ.05): ನಿಯಮಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಕಲ್ಲುಕೋರೆಗಳಿಂದ ಈ ಜಿಲ್ಲೆಯ ನೂರಾರು ಕುಟುಂಬಗಳ ಹಲವು ಜನರು ಗಂಭೀರ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗಿದ್ದರು. ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸುತ್ತಮುತ್ತಲ ಗ್ರಾಮಗಳ ಜನರು ಆಗ್ರಹಿಸಿದ್ದರು. ಕೊನೆಗೂ ಅವುಗಳೀಗೆ ಬೀಗ ಬಿದ್ದಿದೆ. ಇದು ಸುವರ್ಣ ನ್ಯೂಸ್ ಬಿಗ್ ಇಂಪ್ಯಾಕ್ಟ್. ಅಪಾರವಾದ ಪ್ರಾಕೃತಿಕ ಸಂಪತ್ತು, ಅರಣ್ಯ ಸಂಪತ್ತು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ದೇಶದಲ್ಲಿಯೇ ಅತ್ಯುತ್ತಮ ಶುದ್ಧಗಾಳಿ ಇದೆ. ಆದರೂ ಸೋಮವಾರಪೇಟೆ ತಾಲ್ಲೂಕಿನ ಯಲಕನೂರು, ಹೊಸಳ್ಳಿ ಮತ್ತು ಸೀಗೆ ಹೊಸೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನರು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುವಂತೆ ಆಗಿದೆ.
ಇದಕ್ಕೆ ಕಾರಣ ಈ ಗ್ರಾಮಗಳ ಸುತ್ತಮುತ್ತ ನಡೆಯುತ್ತಿರುವ ಕಾನೂನು ಬಾಹಿರ ಕಲ್ಲುಗಣಿಗಾರಿಕೆ. ಹೌದು ಇಲ್ಲಿನ ಕಲ್ಲು ಗಣಿಗಾರಿಕೆಗಳಲ್ಲಿ ಕನಿಷ್ಠ ತಂತಿ ಬೇಲಿಯನ್ನು ಹಾಕದೆ ಜನರ ಜೀವಕ್ಕೆ ಅಪಾಯ ತಂದೊಡ್ಡುವ ರೀತಿ ನಡೆಯುತ್ತಿದ್ದ ಕಲ್ಲುಗಣಿಗಾರಿಕೆಗಳ ವಿರುದ್ಧ ಇಲ್ಲಿನ ಸಾರ್ವಜನಿಕರು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಸೆಪ್ಟೆಂಬರ್ 28 ರಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಂಗಳವಾರ ಕಲ್ಲುಕೋರೆಗಳನ್ನು ಪರಿಶೀಲಿಸುವುದಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದರು.
18 ಕಲ್ಲುಕೋರೆಗಳಿದ್ದು, ಬಹುತೇಕ ಕಲ್ಲುಕೋರೆಗಳು ನಿಯಮಗಳನ್ನು ಉಲ್ಲಂಘಿಸಿದ್ದರೂ ಒಂದೇ ಒಂದು ಕಲ್ಲುಕೋರೆಯ ಬಗ್ಗೆಯೂ ಯಾವ ಅಧಿಕಾರಿಗಳು ದಾಖಲೆ ತರದೇ ಇರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ದಾಖಲೆಗಳಿಲ್ಲದೆ ಏತಕ್ಕೆ ಬಂದಿದ್ದೀರಿ, ಏನು ನಾಟಕ ಮಾಡುತ್ತಿದ್ದೀರಿ ಎಂದು ಸ್ಥಳೀಯ ಹೋರಾಟಗಾರ ಭೋಜೇಗೌಡ ತರಾಟೆಗೆ ತೆಗೆದುಕೊಂಡರು. ಬ್ಲಾಸ್ಟಿಂಗ್ ಮಾಡುವುದಕ್ಕೆ ಅವಕಾಶವಿಲ್ಲದಿದ್ದರೂ ಬ್ಲಾಸ್ಟ್ ಮಾಡಲಾಗುತ್ತಿದೆ. ಧೂಳು ಬರದಂತೆ ಕಲ್ಲುಕೋರೆಗಳ ಸುತ್ತ ಕಾಂಪೌಂಡ್ ಗೋಡೆ ಇರಬೇಕು. ಗರಿಷ್ಠ 6 ಮೀಟರ್ ಆಳದವರೆಗೆ ಮಾತ್ರವೇ ಕಲ್ಲುಹೊಡೆಯಲು ಅವಕಾಶವಿದೆ.
ಹೀಗೆ ಹತ್ತಾರು ನಿಯಮಗಳಿದ್ದು ಎಲ್ಲವನ್ನೂ ಗಾಳಿಗೆ ತೂರಲಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶವಿದ್ದು, ಅರಣ್ಯ ಪ್ರದೇಶದ ಒಳಗೆ ಕಲ್ಲುಕೋರೆ ಮಾಡಲಾಗುತ್ತಿದೆ. ಆದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಜನರು ಎಲ್ಲಾ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಸಂದೀಪ್ ಅವರು ಎಲ್ಲಾ ಗಣಿಗಳನ್ನು ಸದ್ಯಕ್ಕೆ ಬಂದ್ ಮಾಡಿದ್ದೇವೆ. ಕೆಲವು ಕಲ್ಲುಕೋರೆಗಳು ಅಕ್ರಮವಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ.
ನಿಯಮಗಳನ್ನು ಉಲ್ಲಂಘನೆ ಮಾಡಿರುವ ಕೋರೆಗಳ ಪರವಾನಗಿಯನ್ನು ರದ್ದು ಮಾಡುವುದಕ್ಕೆ ವರದಿ ಸಲ್ಲಿಸಲಾಗುವುದು. ಜೊತೆಗೆ ಯಾರೆಲ್ಲಾ ರಾಜಧನ ಮೋಸ ಮಾಡಿದ್ದಾರೋ ಅದಕ್ಕೆ ದಂಡ ಹಾಕಲಾಗುವುದು. ಒಂದು ವಾರದಲ್ಲಿ ಎಲ್ಲಾ ತನಿಖೆ ಮಾಡಿ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದು ಈ ಕುರಿತು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಸದ್ಯ ಎಲ್ಲಾ ಕಲ್ಲುಕೋರೆಗಳಿಗೆ ಬೀಗ ಹಾಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ