‘ಅಂಪಾನ್’ ಚಂಡಮಾರುತ: ರಾಜ್ಯದಲ್ಲಿ 2 ದಿನ ಭಾರೀ ಮಳೆ| ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ‘ಯೆಲ್ಲೋ ಅಲರ್ಟ್’| ಆದರೆ ಕಲಬುರಗಿಯಲ್ಲಿ 40.1 ಡಿಗ್ರಿ ಸೆ.ಉಷ್ಣಾಂಶ
ಬೆಂಗಳೂರು(ಮೇ.17): ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ‘ಅಂಪಾನ್’ ಚಂಡಮಾರುತ ಪ್ರಭಾವದಿಂದ ರಾಜ್ಯದ ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಭಾರತೀಯ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಿದೆ.
‘ಅಂಪಾನ್’ ಚಂಡಮಾರುತದ ಪ್ರಭಾವದಿಂದ ಅರಬ್ಬಿ ಸಮುದ್ರದಲ್ಲಿ ಮಳೆಯ ಮಾರುತ ಚುರುಕುಗೊಂಡಿದ್ದು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ 65 ರಿಂದ 115 ಮಿ.ಮೀ ನಷ್ಟುಮಳೆಯಾಗುವ ನಿರೀಕ್ಷೆ ಇರುವುದರಿಂದ ಈ ಎಂಟು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಮುಂದಿನ ಮೂರು ದಿನಗಳ ಕಾಲ ಈ ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
undefined
ವಾಯುಭಾರ ಕುಸಿತ: ದಕ್ಷಿಣ, ಮಲೆನಾಡಲ್ಲಿ ಭಾರೀ ಮಳೆ ಸಾಧ್ಯತೆ, ಹೈಅಲರ್ಟ್
ಉಳಿದಂತೆ ದಕ್ಷಿಣ ಮತ್ತು ಉತ್ತರ ಒಳನಾಡು ಭಾಗದ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಮೇ 21ರ ವರೆಗೆ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕಲಬುರಗಿಯಲ್ಲಿ 40.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ಉತ್ತರ ಕನ್ನಡದಲ್ಲಿ ಅತಿ ಹೆಚ್ಚು 8 ಸೆಂ.ಮೀ ಮಳೆಯಾದ ವರದಿಯಾಗಿದೆ. ಉಳಿದಂತೆ ಗೋಕಾಕ್, ಕಲಬುರಗಿ, ಪಿರಿಯಾಪಟ್ಟಣದಲ್ಲಿ ತಲಾ 4 ಸೆಂ.ಮೀ, ಚಿಕ್ಕಮಗಳೂರಿನಲ್ಲಿ 3, ಸುಳ್ಯ, ತಾಳಗುಪ್ಪ, ಬಾದಾಮಿ ಸೇರಿದಂತೆ ವಿವಿಧ ಕಡೆ ತಲಾ 2 ಸೆಂ.ಮೀ ಮಳೆಯಾದ ವರದಿಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.