
ಬೆಂಗಳೂರು : ರಾಜ್ಯದಲ್ಲಿ ಭಾರೀ ಮೊತ್ತದ ಮತ್ತೊಂದು ಡಿಜಿಟಲ್ ಅರೆಸ್ಟ್ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಾರಿ ಮಹಿಳಾ ಟೆಕ್ಕಿಯೊಬ್ಬರು ಸೈಬರ್ ಖದೀಮರ ಜಾಲಕ್ಕೆ ಸಿಲುಕಿ ಸುಮಾರು 2 ಕೋಟಿ ರು. ಕಳೆದುಕೊಂಡಿದ್ದಾರೆ. ಮುಂಬೈ ಪೊಲೀಸರ ಸೋಗಿನಲ್ಲಿ ಖದೀಮರು ಹಾಕಿದ ಡಿಜಿಟಲ್ ಅರೆಸ್ಟ್ ಬೆದರಿಕೆಯಿಂದ ಭೀತಿಗೊಳಗಾದ ಮಹಿಳೆ ತಮ್ಮ 1 ಫ್ಲ್ಯಾಟ್, 2 ಸೈಟ್‌ಗಳನ್ನು ಮಾರಾಟ ಮಾಡಿ ವಂಚಕರ ಖಾತೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿ ಕಣ್ಣೀರು ಹಾಕುತ್ತಿದ್ದಾರೆ.
ಎಚ್‌ಎಎಲ್ ಸಮೀಪದ ವಿಜ್ಞಾನ ನಗರದ ನಿವಾಸಿ, ಸಾಫ್ಟ್‌ವೇರ್ ಉದ್ಯೋಗಿ ವಂಚನೆಗೆ ಒಳಗಾದ ಮಹಿಳೆ. ಈ ಸಂಬಂಧ ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.
10 ವರ್ಷದ ಪುತ್ರನೊಂದಿಗೆ ವಾಸವಾಗಿರುವ 57 ವರ್ಷದ ಮಹಿಳೆಗೆ ಕೆಲ ತಿಂಗಳ ಹಿಂದೆ ಬ್ಲೂ ಡಾರ್ಟ್ ಕೊರಿಯರ್ ಹೆಸರಿನಲ್ಲಿ ಕರೆ ಬಂದಿತ್ತು. ಕರೆ ಮಾಡಿದವರು ತಾವು ಮುಂಬೈ ಪೊಲೀಸರು ಎಂದು ಪರಿಚಯಿಸಿಕೊಂಡಿದ್ದು, ನಿಮ್ಮ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಬ್ಯಾಗೇಜ್ ಪತ್ತೆಯಾಗಿದೆ. ಅದರಲ್ಲಿ ಡ್ರಗ್ಸ್ ಇದೆ ಎಂದು ತಿಳಿಸಿದ್ದರು. ಬಳಿಕ ವಿಡಿಯೋ ಕಾಲ್ ಮೂಲಕ ‘ನಾವು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ’ ಎಂದು ಹೆದರಿಸಿ, ವೆರಿಫಿಕೇಶನ್ ನಡೆಯುವವರೆಗೂ ಎಲ್ಲೂ ಹೋಗಬಾರದು. ನಾವು ಹೇಳುವ ಆ್ಯಪ್ ಇನ್‌ಸ್ಟಾಲ್ ಮಾಡಬೇಕು ಹಾಗೂ ಹೇಳಿದಷ್ಟು ಹಣವನ್ನು ನಮ್ಮ ಖಾತೆಗೆ ಜಮೆ ಮಾಡಬೇಕು ಎಂದು ಬೆದರಿಸಿದ್ದಾರೆ.
ವಿಚಾರಣೆಗೆ ಸರಿಯಾಗಿ ಸಹಕರಿಸಿ, ನಾವು ಹೇಳಿದಂತೆ ಕೇಳದಿದ್ದರೆ ನಿಮ್ಮ ಮಗನ ಭವಿಷ್ಯಕ್ಕೆ ತೊಂದರೆ ಆಗುತ್ತದೆ ಎಂದು ನಕಲಿ ಮುಂಬೈ ಪೊಲೀಸರು ಬೆದರಿಕೆ ಹಾಕಿದ್ದರು. ಈ ಮಾತುಗಳಿಗೆ ಹೆದರಿದ ಮಹಿಳೆ, ಸೈಬರ್ ಖದೀಮರ ಸೂಚನೆಗಳನ್ನು ಅನುಸರಿಸಿದ್ದಾರೆ. ಹಣ ವರ್ಗಾವಣೆಗಾಗಿ ಮಾಲೂರಿನಲ್ಲಿದ್ದ ತಮ್ಮ ಎರಡು ಸೈಟ್‌ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು, ವಿಜ್ಞಾನ ನಗರದಲ್ಲಿದ್ದ ಫ್ಲ್ಯಾಟ್ ಅನ್ನೂ ಮಾರಾಟ ಮಾಡಿದ್ದಾರೆ. ಜತೆಗೆ ಐಸಿಐಸಿಐ ಬ್ಯಾಂಕ್‌ನಲ್ಲಿ ಲೋನ್ ಪಡೆದು, ಹಂತ ಹಂತವಾಗಿ ವಂಚಕರ ಖಾತೆಗೆ ಜಮೆ ಮಾಡಿದ್ದಾರೆ.
ಒಟ್ಟು ಸುಮಾರು 2.05 ಕೋಟಿ ರು. ಹಣವನ್ನು ಹಂತ ಹಂತವಾಗಿ ವಂಚಕರು ನೀಡಿದ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಬಳಿಕ ತಾನು ಮೋಸ ಹೋಗಿರುವುದು ಅರಿವಾಗುತ್ತಿದ್ದಂತೆ ಸೈಬರ್ ಕ್ರೈಂ ಸಹಾಯವಾಣಿಯಾದ 1930ಗೆ ದೂರು ನೀಡಿದ್ದಾರೆ. ನಂತರ ವೈಟ್‌ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ನ.27 ರಂದು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಿಳೆಗೆ ಬೆದರಿಸಿ ಸೈಬರ್ ವಂಚಕರು ಹಣ ಪಡೆದಿರುವ ಪ್ರಕರಣ ಸಂಬಂಧ ಕೇಸ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಡಿಜಿಟಲ್ ಅರೆಸ್ಟ್ ಎಂಬುದು ಇಲ್ಲವೇ ಇಲ್ಲ. ಯಾರೂ ಈ ರೀತಿಯ ಅರೆಸ್ಟ್ ಬೆದರಿಕೆಗಳಿಗೆ ಹೆದರುವ ಅಗತ್ಯವಿಲ್ಲ. ಬೆಂಗಳೂರಿನಲ್ಲಿ ಇತ್ತೀಚೆಗೆ ಇಂಥ ಘಟನೆಗಳು ಹೆಚ್ಚಾಗುತ್ತಿವೆ. ಯಾವುದೇ ಪೊಲೀಸರು ವಿಡಿಯೋ ಕಾಲ್ ಮೂಲಕ ಅರೆಸ್ಟ್ ಅಂತ ಹೇಳುವುದೇ ಇಲ್ಲ. ಇಂತಹ ಬೆದರಿಕೆ ಕರೆಗಳಿಗೆ ಯಾರೊಬ್ಬರೂ ತಲೆ ಕೆಡಿಸಿಕೊಳ್ಳಬಾರದು. ಇಂಥ ಬೆದರಿಕೆ ಕರೆ ಬಂದರೆ ತಕ್ಷಣ 1930ಗೆ ಕರೆ ಮಾಡಿ ತಿಳಿಸಿ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಪರಶುರಾಮ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ