ಇಂಟರ್ನೆಟ್‌ ವೇಗ ವೃದ್ಧಿಗೆ ಕಾರ‍್ಯಪಡೆ - ಯುವಜನತೆಗೆ ಉದ್ಯೋಗ ಸೃಷ್ಟಿ : RC

By Kannadaprabha NewsFirst Published Aug 19, 2021, 8:20 AM IST
Highlights
  •  ಬೆಂಗಳೂರಿಗೆ ಕೇಂದ್ರೀಕೃತವಾಗಿರುವ ಉದ್ಯೋಗಾವಕಾಶವನ್ನು ರಾಜ್ಯಾದ್ಯಂತ ವಿಸ್ತರಣೆ
  •  ಬೆಂಗಳೂರಿಗೆ ಕೇಂದ್ರೀಕೃತವಾಗಿರುವ ಉದ್ಯೋಗಾವಕಾಶವನ್ನು ರಾಜ್ಯಾದ್ಯಂತ ವಿಸ್ತರಣೆ
  • ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ರಾಜೀವ್‌ ಚಂದ್ರಶೇಖರ್‌ 

 ಮಂಗಳೂರು/ಮಡಿಕೇರಿ (ಆ.19):  ಬೆಂಗಳೂರಿಗೆ ಕೇಂದ್ರೀಕೃತವಾಗಿರುವ ಉದ್ಯೋಗಾವಕಾಶವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಈಗಾಗಲೇ ತಿಳಿಸಿರುವ ಕೇಂದ್ರ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ಇದೀಗ ನನ್ನ ಖಾತೆ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶ ಇದೆ ಎಂದು ಒತ್ತಿ ಹೇಳಿದ್ದಾರೆ.

ಮಂಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಬುಧವಾರ ಜನಾಶೀರ್ವಾದ ಯಾತ್ರೆ ನಡೆಸಿದ ಅವರು, ಮುಂದಿನ 25 ವರ್ಷದ ಆಡಳಿತ ಗುರಿಯನ್ನು ಇರಿಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಚಿಂತನೆ ನಡೆಸಲಾಗುವುದು ಎಂದರು.

ನೆಟ್‌ವರ್ಕ್ ಸಂಬಂಧಿ ಟಾಸ್ಕ್‌ಫೋರ್ಸ್‌:  ರಾಜ್ಯದಲ್ಲಿ ನೆಟ್‌ವರ್ಕ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ಸಂಬಂಧ ಒಂದು ಟಾಸ್ಕ್‌ಫೋರ್ಸ್‌ ರಚಿಸಲಾಗುತ್ತಿದೆ. ಈ ಸಮಿತಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಕ್ವಾಲಿಟಿ, ಬ್ಯಾಂಡ್‌ ವಿಡ್ತ್ ಮೊದಲಾದ ವಿಚಾರಗಳ ಬಗ್ಗೆ ಮೌಲ್ಯಮಾಪನ ಮಾಡಲಿದೆ. ಬೆಂಗಳೂರು ನಗರ ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಅಷ್ಟಾಗಿ ತಲುಪಿಲ್ಲ. ಈ ವಿಚಾರದಲ್ಲಿಯೂ ಟಾಸ್ಕ್‌ ಫೋರ್ಸ್‌ ಗಮನ ಹರಿಸಲಿದೆ ಎಂದು ಸಚಿವ ರಾಜೀವ್‌ ಚಂದ್ರಶೇಖರ್‌ ಮಾಹಿತಿ ನೀಡಿದರು.

ದಕ್ಷಿಣ ಕನ್ನಡದಲ್ಲಿ ಜನಾಶೀರ್ವಾದ ಯಾತ್ರೆ: ಮಣಿಪಾಲ್ ಒಡನಾಟ ನೆನೆಸಿಕೊಂಡ ರಾಜೀವ್ ಚಂದ್ರಶೇಖರ್

ಸಾಧನೆ ತುಲನೆ ಮಾಡಲಿ:  ಇದೇ ವೇಳೆ ಹಿಂದಿನ ಕಾಂಗ್ರೆಸ್‌ ಪಕ್ಷದ ಆಡಳಿತ ವೈಖರಿಯನ್ನು ತರಾಟೆಗೆ ತೆಗೆದುಕೊಂಡ ಅವರು, ಕಾಂಗ್ರೆಸ್‌ 60 ವರ್ಷದಲ್ಲಿ ಮಾಡಲಾಗದ ಆಡಳಿತ ಸುಧಾರಣೆಗಳನ್ನು ಮೋದಿ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಮಾಡಿ ತೋರಿಸಿದೆ. ಬೇಕಾದರೆ ತುಲನೆ ಮಾಡಿ ನೋಡಲಿ ಯಾವ ಅವಧಿಯಲ್ಲಿ ಈ ದೇಶ ಸುಧಾರಣೆ, ಅಭಿವೃದ್ಧಿ ಕಂಡಿದೆ ಎಂಬುದನ್ನು ಅರಿತುಕೊಳ್ಳಬಹುದು ಎಂದು ಸವಾಲು ಹಾಕಿದರು.

ಕೇಂದ್ರ ಸರ್ಕಾರ ಡಿಜಿಟಲ್‌ ಮತ್ತು ಐಟಿ ರಂಗಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಯುವಜನತೆಯನ್ನು ಕೇಂದ್ರೀಕರಿಸಿ ಶೈಕ್ಷಣಿಕ ಮತ್ತು ಕೌಶಲ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಮುದ್ರಾ ಯೋಜನೆ ಹಾಗೂ ಜನೌಷಧ ಕುರಿತು ಸಮಗ್ರ ವಿಶ್ಲೇಷಣೆ ನಡೆಸುವಂತೆ ಕೇಂದ್ರ ಹಣಕಾಸು ಸಚಿವರ ಗಮನಕ್ಕೆ ತರಲಾಗುವುದು ಎಂದರು

click me!