* ಒಂದೇ ತಿಂಗಳು 1.48 ಕೋಟಿ ವ್ಯಾಕ್ಸಿನ್
* ಈವರೆಗೆ ವಿತರಣೆಯಾದ ಪ್ರತಿ 5 ಡೋಸ್‌ನಲ್ಲಿ ಒಂದು ಸೆಪ್ಟೆಂಬರ್‌ನಲ್ಲಿ ವಿತರಣೆ
* ಲಸಿಕಾ ಅಭಿಯಾನಕ್ಕೆ ಉತ್ತಮ ಸ್ಪಂದನೆ
ಬೆಂಗಳೂರು(ಅ.02): ಕೊರೋನಾ(Coronavirus) ಸೋಂಕು ನಿಯಂತ್ರಣಕ್ಕೆ ಕಳೆದ ಜನವರಿಯಿಂದ ಆರಂಭಿಸಲಾಗಿರುವ ಲಸಿಕಾ(vaccine) ಅಭಿಯಾನದ ಪೈಕಿ ಸೆಪ್ಟೆಂಬರ್‌ನಲ್ಲಿ ಅತಿ ಹೆಚ್ಚಿನ 1.48 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
ರಾಜ್ಯದಲ್ಲಿ(Karnataka) ಸೆಪ್ಟೆಂಬರ್ 30ರ ಹೊತ್ತಿಗೆ ಒಟ್ಟು 5.63 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ನೀಡಲಾದ ಪ್ರತಿ ಐದು ಡೋಸ್ ಲಸಿಕೆಯಲ್ಲಿ ಒಂದು ಡೋಸ್ ಅನ್ನು ಸೆಪ್ಟೆಂಬರ್ ತಿಂಗಳಿನಲ್ಲಿಯೇ ಕೊಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಮೊದಲ ಡೋಸ್ ಅನ್ನು 78.64 ಲಕ್ಷ ಮಂದಿ ಪಡೆದಿದ್ದು, ಎರಡನೇ ಡೋಸ್ ಅನ್ನು 70.12 ಲಕ್ಷ ಮಂದಿ ಸ್ವೀಕರಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ಎರಡನೇ ಡೋಸ್ ಪಡೆಯುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ದಾಖಲಾಗಿದೆ.
undefined
ಪ್ರತಿ ಬುಧವಾರ ಲಸಿಕೆ ಮೇಳ ಆಯೋಜಿಸಿ ಹೆಚ್ಚು ಪ್ರಮಾಣದಲ್ಲಿ ಲಸಿಕೆ ನೀಡುತ್ತಿರುವುದು ಮತ್ತು ಸೆಪ್ಟೆಂಬರ್ 17 ರಂದು ಬೃಹತ್ ಲಸಿಕಾ ಮೇಳ ಆಯೋಜಿಸಿ 32 ಲಕ್ಷ ಡೋಸ್ ಲಸಿಕೆ ವಿತರಿಸಿದ್ದು ರಾಜ್ಯದಲ್ಲಿ ಲಸಿಕಾಕರಣ ಪ್ರಕ್ರಿಯೆ ವೇಗ ಪಡೆದುಕೊಳ್ಳಲು ಕಾರಣವಾಗಿದೆ.
ಕರ್ನಾಟಕದಲ್ಲಿ ಕೊರೋನಾ: ಇಲ್ಲಿದೆ ಅ.1ರ ಅಂಕಿ ಸಂಖ್ಯೆ
ಡಿಸೆಂಬರ್ ಅಂತ್ಯಕ್ಕೆ 4.97 ಕೋಟಿ ಅರ್ಹ ಫಲಾನುಭವಿಗಳಿಗೆ ಕನಿಷ್ಠ ಪಕ್ಷ ಮೊದಲ ಡೋಸ್ ಮತ್ತು ಈ ಪೈಕಿ ಶೇ. 75 ಮಂದಿಗೆ ಎರಡನೇ ಡೋಸ್ ನೀಡಬಹುದು ಎಂಬ ವಿಶ್ವಾಸದಲ್ಲಿ ಆರೋಗ್ಯ ಇಲಾಖೆ ಇದೆ. ಜನವರಿ 16 ರಿಂದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಅಭಿಯಾನ ಆರಂಭಗೊಂಡಿತ್ತು. ಆ ಬಳಿಕ ಹಿರಿಯ ನಾಗರಿಕರು ಮತ್ತು 45 ವರ್ಷ ಮೇಲ್ಪಟ್ಟಸಹ ಅಸ್ವಸ್ಥತೆ ಹೊಂದಿರುವವರಿಗೆ, ಆ ಮೇಲೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಅಭಿಯಾನ ಹಂತಹಂತವಾಗಿ ಆರಂಭವಾಗಿತ್ತು. ಆದರೆ ಲಸಿಕೆ ಅಭಿಯಾನದ ಆರಂಭದಲ್ಲಿ ನೀರಸ ಪ್ರತಿಕ್ರಿಯೆ ಬಂದಿತ್ತು.
ಆದರೆ ಕೋವಿಡ್ ಎರಡನೇ ಅಲೆ ಸೃಷ್ಟಿಸಿದ ಅನಾಹುತ ಮತ್ತು ಸಂಸ್ಥೆಗಳು, ಶಾಲಾ- ಕಾಲೇಜುಗಳ ಸಿಬ್ಬಂದಿ ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಲಸಿಕೆಗೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು. ಆದರೆ ಬೇಡಿಕೆಯಷ್ಟುಲಸಿಕೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಎಲ್ಲೆಡೆ ಲಸಿಕೆಗಾಗಿ ಹಾಹಾಕಾರ ಸೃಷ್ಟಿಯಾಗಿತ್ತು. ಆಗಸ್ಟ್‌ನಲ್ಲಿ ಸರಾಗವಾಗಿ ಲಸಿಕೆ ಪೂರೈಕೆ ಪ್ರಾರಂಭಗೊಂಡಿತ್ತು. ಸೆಪ್ಟೆಂಬರ್‌ನಲ್ಲಿ ಹೊಸ ಮೈಲಿಗಲ್ಲು ನಿರ್ಮಾಣವಾಗಿದೆ.
ತಿಂಗಳು ಲಸಿಕೆ
ಜನವರಿ 3,13,639
ಫೆಬ್ರವರಿ 8,24,202
ಮಾರ್ಚ್ 28,96,648
ಏಪ್ರಿಲ್ 58,60,832
ಮೇ 40,35,893
ಜೂನ್ 90,44,743
ಜುಲೈ 76,21,664
ಆಗಸ್ಟ್ 1,12,27,558
ಸೆಪ್ಟೆಂಬರ್ 1,48,76,378