ವಾರದಲ್ಲಿ ಕೋವಿಡ್‌ ಸಾವಿನ ಸಂಖ್ಯೆ ಇಳಿಕೆ: ಸಚಿವ ಸುಧಾಕರ್‌ ವಿಶ್ವಾಸ

By Kannadaprabha NewsFirst Published Jun 5, 2021, 7:08 AM IST
Highlights

*ಪಾಸಿಟಿವಿಟಿ ದರ ಶೇ.5ಕ್ಕೆ ಇಳಿಸುವ ಗುರಿ
* ಗ್ರಾಮೀಣ ಭಾಗದಲ್ಲೂ ಸೋಂಕು ಇಳಿಕೆ
* ಕೋವಿಡ್‌ನಿಂದ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಇಲ್ಲ, ಆದರೆ ಮುನ್ನೆಚ್ಚರಿಕೆ ಅಗತ್ಯ
 

ಬೆಂಗಳೂರು(ಜೂ.05): ರಾಜ್ಯದಲ್ಲಿ ಕೋವಿಡ್‌ ಸೋಂಕಿನ ದೈನಂದಿನ ಪ್ರಕರಣಗಳಲ್ಲಿ ಏರುಪೇರು ಕಂಡುಬರುತ್ತಿದೆ. ಆದರೆ ಸಾವಿನ ಸಂಖ್ಯೆ ಕಡಿಮೆಯಾಗಿಲ್ಲ. ಐಸಿಯು, ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವು ಸೋಂಕಿತರ ಸಾವು ಹೆಚ್ಚಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿದಿನ ಸಾವಿನ ಸಂಖ್ಯೆ 450 ದಾಟುತ್ತಿದೆ. ಇನ್ನೊಂದು ವಾರದಲ್ಲಿ ಸಾವಿನ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಮಾಡುವ ಗುರಿ ಇದೆ. ಹೊಸ ಪ್ರಕರಣಗಳಿಗಿಂತ ಪಾಸಿಟಿವಿಟಿ ದರದ ಕಡೆ ನಾವು ಗಮನ ನೀಡಬೇಕು. ಕಳೆದ ಎರಡು ದಿನಗಳಲ್ಲಿ ಪಾಸಿಟಿವಿಟಿ ದರದಲ್ಲಿ ಗಣನೀಯ ಏರಿಕೆ ಆಗಿಲ್ಲ. ಗ್ರಾಮೀಣ ಭಾಗದಲ್ಲಿಯೂ ಸೋಂಕು ಪ್ರಕರಣಗಳಲ್ಲಿ ಇಳಿಕೆ ಕಂಡು ಬರುತ್ತಿದೆ ಎಂದು ಸುಧಾಕರ್‌ ವಿವರಿಸಿದರು.

ಕೋವಿಡ್‌-19ರಿಂದ ಮಕ್ಕಳಲ್ಲಿ ಹೇಳಿಕೊಳ್ಳುವಂತಹ ಪ್ರಭಾವ ಆಗುವುದಿಲ್ಲ. ಜ್ವರದಂತಹ ಲಕ್ಷಣಗಳು ಗೋಚರಿಸಿ ಬಹುಬೇಗ ಗುಣಮುಖರಾಗುತ್ತಾರೆ. ಪೋಷಕರು ಹೆದರಿಕೊಳ್ಳುವ ಅಗತ್ಯ ಇಲ್ಲ. ಅದರೆ ಮುನ್ನೆಚ್ಚರಿಕೆ ಇರಲಿ ಎಂದು ಸಚಿವರು ಹೇಳಿದ್ದಾರೆ.

ಸಖತ್ ಸಂಶೋಧನೆ; ಕೊರೋನಾ ಬಂದೋದವ ಮುಂದಿನ 10 ತಿಂಗಳು ಬಚಾವ್!

ವಿದ್ಯಾರ್ಥಿಗಳ ರಕ್ಷಣೆ ಸರ್ಕಾರದ ಆದ್ಯ ಕರ್ತವ್ಯ. ಆ ಬಳಿಕ ಪರೀಕ್ಷೆಯ ವಿಚಾರ. ಪಿಯುಸಿ ಪರೀಕ್ಷೆ ವಿಚಾರದಲ್ಲಿ ಶಿಕ್ಷಣ ಸಚಿವರು ನನ್ನನ್ನು ಕರೆದು ಮಾತುಕತೆ ನಡೆಸಬಹುದು. ತಾಂತ್ರಿಕ ಸಲಹಾ ಸಮಿತಿಯ ಜೊತೆಯೂ ಈ ಬಗ್ಗೆ ಚರ್ಚೆ ನಡೆಸುತ್ತೇನೆ. ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪರೀಕ್ಷೆಗಳನ್ನು ಖುದ್ದು ಪ್ರಧಾನಿಯವರೇ ರದ್ದು ಪಡಿಸಿದ್ದಾರೆ. ಈ ಎರಡು ಸಿಲೆಬಸ್‌ನಲ್ಲಿ ಮೌಲ್ಯಮಾಪನ ಸುಲಭ. ಸೆಮಿಸ್ಟರ್‌ ಲೆಕ್ಕದಲ್ಲಿ ಮೌಲ್ಯಮಾಪನ ನಡೆಯುತ್ತದೆ. ಆದರೆ ನಮಗೆ ಈ ಅವಕಾಶ ಇಲ್ಲ. ಪರೀಕ್ಷೆ ಇಲ್ಲದೆ ಎಲ್ಲರನ್ನೂ ಪಾಸ್‌ ಮಾಡಿದರೆ ತೊಂದರೆ ಆಗುತ್ತದೆ. ಮೌಲ್ಯಮಾಪನ ಹೇಗೆ ನಡೆಸಬೇಕು ಎಂಬುದರ ಚರ್ಚೆ ಆಗಬೇಕು ಎಂದು ಆರೋಗ್ಯ ಸಚಿವರು ಅಭಿಪ್ರಾಯ ಪಟ್ಟರು.

ದೇಶದಲ್ಲೇ ಅತಿ ಹೆಚ್ಚು ಜನರಿಗೆ ಬೆಂಗಳೂರಿನಲ್ಲಿ ಕೋವಿಡ್‌ ಲಸಿಕೆ ನೀಡಲಾಗಿದೆ. ಬೆಂಗಳೂರಿನಲ್ಲಿ ಒಂದು ಕೋಟಿ ಮೀರಿ ಜನರಿದ್ದರೂ ಅದರಲ್ಲಿ ಶೇ. 28 ಮಂದಿಗೆ ಲಸಿಕೆ ವಿತರಿಸಲಾಗಿದೆ. ಇದಕ್ಕಾಗಿ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ಅಭಿನಂದಿಸುವುದಾಗಿ ಡಾ. ಸುಧಾಕರ್‌ ಹೇಳಿದರು.
 

click me!