ಕರ್ನಾಟಕಕ್ಕೆ 9750 ವಯಲ್ಸ್ ಬ್ಲ್ಯಾಕ್ ಫಂಗಸ್ ಔಷಧ ಹಂಚಿಕೆ

By Suvarna NewsFirst Published Jun 4, 2021, 10:23 PM IST
Highlights

* ರಾಜ್ಯಕ್ಕೆ ಬಂತು ಬ್ಲ್ಯಾಕ್‌ ಫಂಗಸ್‌  ಔಷಧ
*  ಒಟ್ಟು 1.21 ಲಕ್ಷ ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಿದ ಕೇಂದ್ರ
* ಈ ಪೈಕಿ ಕರ್ನಾಟಕಕ್ಕೆ 9,750 ವಯಲ್ಸ್

ಬೆಂಗಳೂರು, (ಜೂನ್.04):  ಬ್ಲ್ಯಾಕ್‌ ಫಂಗಸ್‌  ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ಬೇರೆ ಬೇರೆ ರಾಜ್ಯಗಳಿಗೆ ಇಂದು (ಶುಕ್ರವಾರ) ಒಟ್ಟು 1.21 ಲಕ್ಷ ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಿದ್ದು, ಈ ಪೈಕಿ ಕರ್ನಾಟಕಕ್ಕೆ 9,750 ವಯಲ್ಸ್ ಒದಗಿಸಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ಮಾಹಿತಿ ನೀಡಿದ್ದಾರೆ.

ಸ್ವದೇಶಿಯಾಗಿಯೂ ಈ ಚುಚ್ಚುಮದ್ದಿನ ಉತ್ಪಾದನೆ ಹೆಚ್ಚಾಗುತ್ತಿದೆ. ಅದೇ ರೀತಿ ಆಮದಿನ ಪ್ರಮಾಣವನ್ನು ಕೂಡಾ ಹೆಚ್ಚಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದರ ಬೇಡಿಕೆ ಮತ್ತು ಪೂರೈಕೆ ಮಧ್ಯೆ ಸಮತೋಲನ ಉಂಟಾಗಲಿದೆ. ಸದ್ಯಕ್ಕಂತೂ ಇದರ ಹಂಚಿಕೆ ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.

ಬ್ಲ್ಯಾಕ್‌ ಫಂಗಸ್‌ ಔಷಧಿ ಆಮದಿಗೆ ತೆರಿಗೆ ವಿನಾಯ್ತಿ!

ಸದ್ಯ ತೀವ್ರ ಬೇಡಿಕೆಯಲ್ಲಿರುವ ಆಮ್ಲಜನಕ ಸಾಂದ್ರಕವನ್ನು (ಆಕ್ಸಿಜನ್ ಕಾನ್ಸಂಟ್ರೇಟರ್ಸ್) ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ವರದಿಗಳು ಬರುತ್ತಿರುವ ಹಿನ್ನಲೆಯಲ್ಲಿ ನಾವು ಮಧ್ಯಪ್ರವೇಶ ಮಾಡಿದ್ದೇವೆ. 

ವಿತರಕರಿಗೆ ನೀಡುವ ಬೆಲೆಯ ಟ್ರೇಡ್ ಮಾರ್ಜಿನ್​ನಲ್ಲಿ (Not profit margin) ಪ್ರತಿಶತ 198 ರವೆರೆಗೂ ಏರಿಕೆಯಾದ ಬಗ್ಗೆ ವರದಿಯಾಗಿತ್ತು. ಅದನ್ನು ಈಗ ಶೇಕಡಾ 70ಕ್ಕೆ ಮಿತಿಗೊಳಿಸಲಾಗಿದೆ. ಮೂರು ದಿನದೊಳಗೆ ಗರಿಷ್ಠ ಮಾರಾಟ ಬೆಲೆ ಸೂಚಿಯನ್ನು ನೀಡುವಂತೆ ಆಮ್ಲಜನಕ ಸಾಂದ್ರಕ ಉತ್ಪಾದಕರು ಹಾಗೂ ಆಮದುದಾರರಿಗೆ ಸೂಚಿಸಲಾಗಿದೆ ಎಂದು ವಿವರಿಸಿದರು.

ನಮ್ಮ ಇಲಾಖಾ ಅಧೀನದ ಎನ್.ಪಿ.ಪಿ.ಎ. (National Pharmaceuticals Pricing Authority) ವಾರದೊಳಗೆ ವಿವಿಧ ಬ್ರಾಂಡಿನ ಆಮ್ಲಜನಕ ಸಾಂದ್ರಕಗಳ ಪರಿಷ್ಕೃತ ಗರಿಷ್ಠ ಮಾರಾಟ ಬೆಲೆಗಳ ಅಧಿಸೂಚನೆ ಹೊರಡಿಸಲಿದೆ. ಇದುವರೆಗೆ ಆಮ್ಲಜನಕ ಸಾಂದ್ರಕ ಅತ್ಯವಶ್ಯಕ ವಸ್ತುಗಳ ಪಟ್ಟಿಯಲ್ಲಿ ಇರಲಿಲ್ಲವಾಗಿತ್ತು. ಹಾಗಾಗಿ ಅದರ ಬೆಲೆ ನಿಯಂತ್ರಣ ಸಾಧ್ಯವಿರಲಿಲ್ಲ. ಆದರೆ ಜನರ ಅನುಕೂಲಕ್ಕಾಗಿ ಡಿಪಿಸಿಒ-2013 ಕಾಯ್ದೆ ಅನುಚ್ಛೇಧ 19ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿ ಇದರ ಬೆಲೆ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಸದ್ಯದ ಬೆಲೆ ನಿಯಂತ್ರಣ ಆದೇಶ 2021 ನವೆಂಬರ್ 30ರವರೆಗೆ ಜಾರಿಯಲ್ಲಿರಲಿದೆ. ಭವಿಷ್ಯದಲ್ಲಿ ಪರಿಸ್ಥಿಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಒಂದೊಮ್ಮೆ ನಿಗದಿತ ಬೆಲೆಗಿಂತ ಯಾರಾದರು ಇದನ್ನು ಮಾರಾಟ ಮಾಡಲು ಯತ್ನಿಸಿದರೆ ಅಂತವರಿಗೆ ಶೇಕಡಾ 100ರಷ್ಟು ದಂಡ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಸಿದರು.

click me!