
ಬೆಂಗಳೂರು (ಏ.25): ರಾಜ್ಯದಲ್ಲಿ ಮುಂದಿನ 15 ದಿನಗಳಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿ ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಳ, ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ ಖಾಸಗಿ ಆಸ್ಪತ್ರೆಗಳ ಶೇ. 50 ರಷ್ಟುಹಾಸಿಗೆ ಪಡೆಯುವುದು ಸೇರಿದಂತೆ ವಿವಿಧ ಕ್ರಮ ಕೈಗೊಳ್ಳಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಶೋಭಾ ಕರಂದ್ಲಾಜೆ ಪತ್ರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ತಮ್ಮ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ.
ಸಹಾಯವಾಣಿ ಮಾರ್ಗಗಳನ್ನು 100ಕ್ಕೆ ಹೆಚ್ಚಿಸಿ 24 ಗಂಟೆಯೂ ಮೂರು ಪಾಳಿಯಲ್ಲಿ ಕೆಲಸವನ್ನು ವೃತ್ತಿಪರರಿಗೆ ಹಂಚಿಕೆ ಮಾಡಬೇಕು. ಮುಂದಿನ ದಿನದಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಾಗಿ ಅಗತ್ಯ ಬೀಳುವ ಕಾರಣ ಬೆಂಗಳೂರಲ್ಲಿ ಹೆಚ್ಚುವರಿಯಾಗಿ ಒಂದು ಸಾವಿರ ಮತ್ತು ರಾಜ್ಯದ ಇತರೆ ಭಾಗದಲ್ಲಿ ಒಂದು ಸಾವಿರದಷ್ಟುವೆಂಟಿಲೇಟರ್‌ಗಳನ್ನು ಹೆಚ್ಚಿಸಬೇಕು. ಸಣ್ಣಪುಟ್ಟಆಸ್ಪತ್ರೆಗಳನ್ನು ಗುರುತಿಸಿ ಹಣದ ಸಹಾಯ ನೀಡಿ ವೆಂಟಿಲೇಟರ್ ಸಂಖ್ಯೆಯನ್ನು ಹೆಚ್ಚಿಸಲು ಪ್ರೋತ್ಸಾಯಿಸಬೇಕು ಎಂದು ಪತ್ರದಲ್ಲಿ ಸಲಹೆ ನೀಡಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಕೇಸ್ : 14 ದಿನ ಬೆಂಗಳೂರಲ್ಲಿ ಲಾಕ್‌ಡೌನ್ ?
ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿ ರಾಜ್ಯಾದ್ಯಂತ ಎಲ್ಲ ಖಾಸಗಿ ಆಸ್ಪತ್ರೆಗಳ ಶೇ.50ರಷ್ಟುಹಾಸಿಗೆಗಳನ್ನು ಪಡೆಯಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಕಾರ್ಯಪಡೆಯೊಂದನ್ನು ನೇಮಿಸಬೇಕು. ವೆಂಟಿಲೇಟರ್ ಉತ್ಪಾದಿಸುವ ಉದ್ಯಮಿಗಳಿಗೆ ಮುಂಗಡ ಹಣ ನೀಡಿ ರಾಜ್ಯಕ್ಕೆ ಅಗತ್ಯ ಇರುವ ವೆಂಟಿಲೇಟರ್‌ಗಳನ್ನು ತುರ್ತಾಗಿ ನಿರ್ಮಿಸಿಕೊಡುವಂತೆ ಸೂಚಿಸುವುದು. ಪ್ರತಿದಿನ ಎಷ್ಟುರೆಮ್‌ಡಿಸಿವಿರ್ ಮತ್ತು ಆಮ್ಲಜನಕ ಲಭ್ಯತೆ ಕುರಿತು ಆರೋಗ್ಯ ಇಲಾಖೆ ಪ್ರಕಟಿಸಬೇಕು. ಕೋವಿಡ್‌ನಿಂದ ಮೃತರಾದವರನ್ನು ಶವಗಾರದಲ್ಲಿ ಇಟ್ಟು ಟೋಕನ್ ವ್ಯವಸ್ಥೆಯ ಮೂಲಕ ಸಂಬಂಧಿಸಿದ ಚಿತಾಗಾರದಲ್ಲಿ ನಿಗದಿತ ಸಮಯದಲ್ಲಿ ಹೋಗುವ ರೀತಿ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.
ಮುಂದಿನ ದಿನದಲ್ಲಿ ಹೆಚ್ಚಿನ ಹಾಸಿಗೆ, ವೆಂಟಿಲೇಟರ್‌ಗಳ ಅವಶ್ಯಕತೆ ಉಂಟಾಗುವ ಸಂಭವ ಇರುವುದರಿಂದ ಈಗಿನಿಂದಲೇ ನಗರಗಳ ವಾರ್ಡ್, ತಾಲೂಕು ಮಟ್ಟದಲ್ಲಿ ಲಭ್ಯ ಇರುವ ಶಾಲಾ-ಕಾಲೇಜು, ವಸತಿ ನಿಲಯ, ಹೊಟೇಲ್‌ಗಳಲ್ಲಿ ವ್ಯವಸ್ಥೆಗಳನ್ನು ಮಾಡಲು ಕ್ರಮ ಕೈಗೊಳ್ಳಬೇಕು. ಜನರಿಂದ ಕೋವಿಡ್ ಪ್ಲಾಸ್ಮಾ ಬೇಡಿಕೆ ಬರುತ್ತಿದ್ದು, ಎಲ್ಲ ರಕ್ತನಿಧಿ ಕೇಂದ್ರದಲ್ಲಿ ಈಗಾಗಲೇ ಕೋವಿಡ್‌ನಿಂದ ಗುಣಮುಖರಾಗಿರುವ ಜನರ ಪ್ಲಾಸ್ಮಾ ಸಂಗ್ರಹಿಸಲು ಅಗತ್ಯವಿರುವ ಸೌಲಭ್ಯಗಳನ್ನು ನಿರ್ಮಾಣ ಮಾಡುವಂತೆ ಸೂಚಿಸಬೇಕು, ಕೋವಿಡ್‌ನಿಂದ ಗುಣಮುಖರಾದ ಜನರಲ್ಲಿ ಪ್ಲಾಸ್ಮಾ ದಾನ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ