Covid 19 Cases ರಾಜ್ಯದಲ್ಲಿ ಕೊರೋನಾ 4ನೇ ಅಲೆ ಲಕ್ಷಣ ಗೋಚರ, ತಜ್ಞರ ಸಮಿತಿ ಎಚ್ಚರಿಕೆ!

By Kannadaprabha NewsFirst Published Apr 25, 2022, 4:24 AM IST
Highlights
  • 4-5 ವಾರಗಳಲ್ಲಿ ಅಲೆ ಪೂರ್ಣ ಪ್ರಮಾಣದಲ್ಲಿ ವ್ಯಾಪಕ
  • ಒಮಿಕ್ರೋನ್‌ ಉಪತಳಿಯಿಂದಲೇ ಸೋಂಕು ಹೆಚ್ಚಳ
  • ವೇಗವಾಗಿ ಹರಡಿದರೂ ತೀವ್ರತೆ ಕಡಿಮೆ: ಡಾ.ಮಂಜುನಾಥ್‌

ಬೆಂಗಳೂರು(ಏ.25): ರಾಜ್ಯದಲ್ಲಿ ಈಗಾಗಲೇ ಕೊರೋನಾ 4ನೇ ಅಲೆಯ ಆರಂಭದ ಲಕ್ಷಣಗಳು ಗೋಚರಿಸಿವೆ. ಮುಂದಿನ ನಾಲ್ಕೈದು ವಾರಗಳಲ್ಲೇ ನಾಲ್ಕನೇ ಅಲೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ.

ಆದರೆ, ಒಮಿಕ್ರೋನ್‌ ಉಪತಳಿಯಿಂದಲೇ ಹರಡುವುದರಿಂದ ವೇಗವಾಗಿ ಹರಡಿದರೂ ತೀವ್ರತೆ ಕಡಿಮೆ ಇರುತ್ತದೆ. ಆದರೂ ದೀರ್ಘಕಾಲೀನ ಅನಾರೋಗ್ಯ ಉಳ್ಳವರು ಎಚ್ಚರ ವಹಿಸಬೇಕು ಎಂದೂ ಅವರು ತಿಳಿಸಿದ್ದಾರೆ.

ಭಾನುವಾರ ಈ ಬಗ್ಗೆ ‘ಕನ್ನಡಪ್ರಭ’ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ನಿತ್ಯ 40ರ ಆಸು ಪಾಸಿದ್ದ ಪ್ರಕರಣಗಳ ಸಂಖ್ಯೆ 100 ದಾಟುತ್ತಿದೆ. ಪರೀಕ್ಷೆ ಸಂಖ್ಯೆ ಕಡಿಮೆ ಇದ್ದರೂ ನಿತ್ಯದ ಸರಾಸರಿ ಪಾಸಿಟಿವಿಟಿ ದರ ಶೇ.1ಕ್ಕಿಂತಲೂ ಹೆಚ್ಚಿದೆ. ಕಳೆದ ಒಂದು ವಾರದ ಪಾಸಿಟಿವಿಟಿ ದರ 0.90 ರಷ್ಟಿದೆ. ಹೀಗಾಗಿ ಪರೀಕ್ಷೆ ಹೆಚ್ಚಳ ಮಾಡಿದರೆ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದರು.

Covid 19 cases ದೇಶದಲ್ಲಿ ಕೋವಿಡ್ ಹೆಚ್ಚಳ, ಏ.27ಕ್ಕೆ ಎಲ್ಲಾ ರಾಜ್ಯ ಸಿಎಂ ಜೊತೆ ಮೋದಿ ಸಭೆ!

ದಿಲ್ಲಿ ಎಚ್ಚರಿಕೆ ಗಂಟೆ:
ಎರಡು ವಾರದ ಹಿಂದೆಯೇ ಒಮಿಕ್ರೋನ್‌ ಹೊಸ ಉಪತಳಿಗಳು ದೇಶದಲ್ಲಿ ಎರಡು ಕಡೆ ಪತ್ತೆಯಾಗಿವೆ. ಈಗಾಗಲೇ ಹಲವು ರಾಜ್ಯಗಳಿಗೆ ಹರಡಿರುತ್ತವೆ. ಹೀಗಾಗಿಯೇ ದೆಹಲಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೊರೋನಾ ಸೋಂಕಿನ ಈ ಹಿಂದಿನ ಮೂರು ಅಲೆಗಳು ಕೂಡಾ ದೆಹಲಿಯಿಂದ ಆರಂಭವಾಗಿ ಮಹಾರಾಷ್ಟ್ರ, ಕೇರಳ ಅನಂತರ ಕರ್ನಾಟಕಕ್ಕೆ ಹರಡಿದ್ದವು. ಸದ್ಯ ದೆಹಲಿಯಲ್ಲಿ ನಾಲ್ಕನೇ ಅಲೆ ಆರಂಭಿಕ ಲಕ್ಷಣಗಳಿದ್ದು, ಅನಂತರ ಮಹಾರಾಷ್ಟ್ರ, ಕೇರಳದಲ್ಲಿ ಆರಂಭವಾಗಲಿದೆ. ಮುಂದಿನ ನಾಲ್ಕು ವಾರಗಳಲ್ಲಿ ಕರ್ನಾಟಕದಲ್ಲಿಯೂ ನಾಲ್ಕನೇ ಅಲೆ ಅಲೆ ಕಾಣಿಸಿಕೊಳ್ಳಲಿದೆ. ಹೀಗಾಗಿ ದೆಹಲಿಯಲ್ಲಿನ ಪ್ರಕರಣಗಳ ಹೆಚ್ಚಳವನ್ನು ಎಚ್ಚರಿಕೆಯ ಗಂಟೆಯಾಗಿಯೇ ಪರಿಗಣಿಸಬೇಕು ಎಂದರು.

ಆತಂಕ ಬೇಡ:
ಮೂರನೇ ಅಲೆ ಉಂಟುಮಾಡಿದ್ದ ಒಮಿಕ್ರೋನ್‌ ರೂಪಾಂತರಿಯೂ ರಾಜ್ಯವನ್ನು ಕೇವಲ ಒಂದೂವರೆ ತಿಂಗಳು ಕಾಡಿತ್ತು. ಸದ್ಯ ಕಾಣಿಸಿಕೊಂಡಿರುವುದು ಒಮಿಕ್ರೋನ್‌ನ ಉಪತಳಿಗಳೇ ಆಗಿರುವುದರಿಂದ ನಾಲ್ಕನೇ ಅಲೆಯೂ ಇದೇ ಮಾದರಿಯಲ್ಲಿ ವರ್ತಿಸಲಿದೆ. ಪರಿಣಾಮ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುವುದು, ಸಾವು, ಐಸಿಯು, ವೆಂಟಿಲೇಟರ್‌ ಬೇಡಿಕೆ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ.

Covid 19 cases ಒಮಿಕ್ರೋನ್‌ ಉಪತಳಿ ಬೆಂಗಳೂರಿನಲ್ಲೂ ಪತ್ತೆ, ರಾಜ್ಯದಲ್ಲಿ 4ನೇ ಅಲೆ ಭೀತಿ!

ಆದರೆ ಹೃದಯ ಸಂಬಂಧಿ ಸದಸ್ಯೆ, ಶ್ವಾಸಕೋಶ ಸಮಸ್ಯೆ, ಕ್ಯಾನ್ಸರ್‌, ಅಸ್ತಮಾದಂತಹ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆ ಉಳ್ಳವರು ಎಚ್ಚರ ವಹಿಸಬೇಕು. ಎಲ್ಲರೂ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ (ಮುನ್ನೆಚ್ಚರಿಕಾ ಡೋಸ್‌) ಹಾಗೂ ಮಾಸ್‌್ಕ, ಸಾಮಾಜಿಕ ಅಂತರದ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಪರೀಕ್ಷೆ ಹೆಚ್ಚಾದರೆ ಪ್ರಕರಣ ಹೆಚ್ಚಳ
ಪ್ರಸ್ತುತ ರಾಜ್ಯದಲ್ಲಿ 8 ರಿಂದ 10 ಸಾವಿರ ಪರೀಕ್ಷೆಗಳು ಮಾತ್ರ ನಡೆಯುತ್ತಿವೆ. ರಾಜ್ಯದಲ್ಲಿ ಒಮಿಕ್ರೋನ್‌ ಉಪತಳಿಗಳು ಹರಡುವ ಭೀತಿ ಇರುವುದರಿಂದ ಪರೀಕ್ಷೆ ಹೆಚ್ಚಳ ಮಾಡಬೇಕು. ಇದರಿಂದ ಪ್ರಕರಣ ಹೆಚ್ಚಳವಾಗುವ ಜತೆಗೆ ಸೋಂಕಿನ ವಾಸ್ತವ ಸ್ಥಿತಿ ತಿಳಿಯಲಿದೆ. ಜತೆಗೆ ವಂಶವಾಹಿ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಇದರಿಂದ ವೈರಾಣು ವರ್ತನೆ ಹಾಗೂ ಸರ್ಕಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಅಂದಾಜು ಸಿಗಲಿದೆ ಎಂದು ಡಾ.ಮಂಜುನಾಥ್‌ ತಿಳಿಸಿದರು.

click me!