ಜಮೀನು ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ದೇವನಹಳ್ಳಿ ತಾಲೂಕು ವಲಯ ಅರಣ್ಯ ಅಧಿಕಾರಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
ಬೆಂಗಳೂರು(ಜ.23): ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತಿರುವ ಭುವನಹಳ್ಳಿ ರಾಜ್ಯ ಅರಣ್ಯ ಪ್ರದೇಶಕ್ಕೆ ಸೇರಿದ ಎನ್ನಲಾದ 8 ಎಕರೆ 35 ಗುಂಟೆ ಜಮೀನ ಮೇಲಿನ ಅಧಿಕಾರವನ್ನು ಯಾವುದೇ ಮೂರನೇ ವ್ಯಕ್ತಿಗೆ ಘೋಷಿಸದಂತೆ ನಿರ್ಬಂಧ ಹೇರಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಜಮೀನು ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ದೇವನಹಳ್ಳಿ ತಾಲೂಕು ವಲಯ ಅರಣ್ಯ ಅಧಿಕಾರಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.
ಸುಳ್ಳು ಜಾತಿ ಪ್ರಮಾಣ ಪತ್ರ: ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ಎಂ.ರೋಣ ಅವರು ವಾದಿಸಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ಕಸಬಾ ಹೋಬಳಿಯಲ್ಲಿ ಚಿಕ್ಕಸಣ್ಣೆ ಮತ್ತು ಭುವನಹಳ್ಳಿಯನ್ನು ಒಳಗೊಂಡ 59 ಎಕರೆ 8 ಗುಂಟೆ ಪ್ರದೇಶವನ್ನು ರಾಜ್ಯದ ಅರಣ್ಯ ಪ್ರದೇಶವೆಂದು ಮೈಸೂರು ಅರಣ್ಯ ನಿಯಂತ್ರಣ ಕಾಯ್ದೆಯ ಸೆಕ್ಷನ್ 17ರ ಅನುಸಾರ 1921ರ ಜ.8ರಂದು ಅಧಿಸೂಚನೆ ಹೊರಡಿಸಿದೆ. ಅದರಲ್ಲಿ ಭುವನಹಳ್ಳಿ ರಾಜ್ಯ ಅರಣ್ಯ ಬ್ಲಾಕ್‌ನಲ್ಲಿರುವ ಚಿಕ್ಕಸಣ್ಣೆಯ ಸರ್ವೇ ನಂಬರ್ 69ರಲ್ಲಿ (ಹಳೆಯ ಸರ್ವೇ ನಂಬರ್ 67) ವ್ಯಾಜ್ಯಕ್ಕೆ ಒಳಪಟ್ಟಿರುವ 8 ಎಕರೆ 35 ಗುಂಟೆ ಜಮೀನು ಕೂಡಾ ಸೇರಿದೆ. ಇದರಲ್ಲಿ ಮೇಲ್ಮನವಿಯ ಪ್ರತಿವಾದಿ ಮೊಹಮ್ಮದ್ ಸನಾವುಲ್ಲಾ ಮತ್ತು ಅವರ ಕಡೆಯವರು ವ್ಯಾಜ್ಯ ಪ್ರದೇಶದಲ್ಲಿ ಲೇಔಟ್ ನಿರ್ಮಾಣ ಮಾಡಿದ್ದಾರೆ. ಅರಣ್ಯ ಪ್ರದೇಶದ ಮೇಲೆ ಮೂರನೇ ವ್ಯಕ್ತಿ ಸ್ವತ್ತಿನ ಅಧಿಕಾರ ಹೊಂದಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಅದನ್ನು ಪರಿಗಣಿಸಿದ ನ್ಯಾಯಾಲಯ ಈ ಮೇಲಿನಂತೆ ಆದೇಶಿಸಿದೆ. ಜತೆಗೆ, ಪ್ರತಿವಾದಿಯಾಗಿರುವ ಚಿಕ್ಕಸಣ್ಣೆ ಗ್ರಾಮದ ಸಗಟು ಹಣ್ಣಿನ ವ್ಯಾಪಾರಿ ಎಂ.ಎ.ಮೊಹಮದ್ ಸನಾವುಲ್ಲಾಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಪ್ರಕರಣದ ವಿವರ
ಚಿಕ್ಕಸಣ್ಣೆ ಗ್ರಾಮ ವ್ಯಾಪ್ತಿಯಲ್ಲಿನ ಭುವನಹಳ್ಳಿಯ ಅಧಿಸೂಚಿತ ಅರಣ್ಯ ಪ್ರದೇಶದ ಕೆಲ ಭಾಗವನ್ನು 1936ರ ಸೆ.30ರಂದು ಮೈಸೂರು ಭೂ ಕಂದಾಯ ಸಂಹಿತೆ ಅನುಸಾರ ಹರಾಜು ಹಾಕಿದಾಗ ಸುಬ್ಬರಾಯ ಮೊದಲಿಯಾರ್ ಎಂಬುವರು 43 ಎಕರೆ 24 ಗುಂಟೆ ಜಮೀನನ್ನು ಖರೀದಿಸಿದ್ದರು. ಸುಬ್ಬರಾಯ ಅವರಿಗೆ 1936 ನ.19ರಂದು ಮಾರಾಟ ಪ್ರಮಾಣ ಪತ್ರ ನೀಡಲಾಗಿದೆ. ಈ ಸ್ವತ್ತನ್ನು 1977ರಲ್ಲಿ ಸದ್ಯ ಮೊಹಮ್ಮದ್ ಸನಾವುಲ್ಲಾ ಅವರು ಖರೀದಿಸಿದ್ದಾರೆ ಎನ್ನಲಾಗಿದ್ದು, ಈ ಕುರಿತಂತೆ ಸಿವಿಲ್ ವ್ಯಾಜ್ಯಗಳು ಉದ್ಭವಿಸಿ ಈಗ ಎರಡನೇ ಸುತ್ತಿನ ವ್ಯಾಜ್ಯ ನಡೆಯುತ್ತಿದೆ.