ಬೆಂಗಳೂರು ಗಲಭೆ ಕೇಸ್‌: ಆರೋಪಿ ನವೀನ್‌ ಜಾಮೀನು ಅರ್ಜಿ ವಜಾ

By Kannadaprabha NewsFirst Published Aug 27, 2020, 8:59 AM IST
Highlights

ತನಿಖಾ ಹಂತದಲ್ಲಿ ಪ್ರಕರಣ| ಜಾಮೀನು ನೀಡಲು ಆಗಲ್ಲ: ಕೋರ್ಟ್‌| ಘಟನೆಗೆ ಸಂಬಂಧಿಸಿದಂತೆ ವೈಜ್ಞಾನಿಕ ದಾಖಲೆಗಳನ್ನು ಕಲೆ ಹಾಕುತ್ತಿರುವ ತನಿಖಾಧಿಕಾರಿಗಳು| ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ಪರಿಣಾಮ ಘಟನೆಗೆ ಕಾರಣ| 

ಬೆಂಗಳೂರು(ಆ.27):  ನಗರದ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಲಭೆಗೆ ಮೂಲ ಕಾರಣನಾಗಿರುವ ಆರೋಪಿ ನವೀನ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನಗರದ 1ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದೆ.

ಆರೋಪಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣ ತನಿಖಾ ಹಂತದಲ್ಲಿರುವ ಕಾರಣ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟು ಜಾಮೀನು ಅರ್ಜಿ ವಜಾಗೊಳಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ಹಾಜರಿದ್ದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಪಿ.ಪ್ರಸನ್ನ ಕುಮಾರ್‌, ಘಟನೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ವೈಜ್ಞಾನಿಕ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. ಆರ್ಜಿದಾರರು ತನ್ನ ಫೇಸ್‌ಬುಕ್‌ ಅಕೌಂಟ್‌ನಲ್ಲಿ ಪೋಸ್ಟ್‌ ಹಾಕಿದ್ದ ಪರಿಣಾಮ ಘಟನೆಗೆ ಕಾರಣವಾಗಿದೆ. ಸ್ಥಳೀಯ ಶಾಸಕರ ಮನೆ ಸೇರಿದಂತೆ ಪೊಲೀಸ್‌ ಠಾಣೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಆರೋಪಕ್ಕೆ ನಿಖರವಾದ ಸಾಕ್ಷ್ಯಾಧಾರಗಳನ್ನು ಕಲೆ ಹಾಕುತ್ತಿದ್ದು, ಈ ಸಂದರ್ಭದಲ್ಲಿ ಜಾಮೀನು ನೀಡಬಾರದು.

ಶಾಸಕ ಅಖಂಡ ಮನೆ ಮೇಲೆ ದಾಳಿ ಕೇಸ್‌: ಸಿಸಿಬಿ ತನಿಖೆಗೆ ಆದೇಶ

ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಿದರೆ ಪೊಲೀಸರ ತನಿಖೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಆರೋಪಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ಮನವಿ ಪರಿಗಣಿಸಿದ ನ್ಯಾಯಾಲಯ ಜಾಮೀನು ಅರ್ಜಿ ವಜಾಗೊಳಿಸಿದೆ. ಆರೋಪಿ ನವೀನ್‌ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ.
 

click me!