ರೋಹಿಣಿ V/S ರೂಪಾ: ಒನ್ ಮಿನಿಟ್ ಅಪಾಲಜಿ ಪುಸ್ತಕ ಓದಲು ಕೋರ್ಟ್‌ ಸಲಹೆ

Published : Feb 06, 2025, 07:48 AM IST
ರೋಹಿಣಿ V/S ರೂಪಾ: ಒನ್ ಮಿನಿಟ್ ಅಪಾಲಜಿ ಪುಸ್ತಕ ಓದಲು ಕೋರ್ಟ್‌ ಸಲಹೆ

ಸಾರಾಂಶ

ಇಂಗ್ಲಿಷ್‌ನಲ್ಲಿ 'ಒನ್ ಮಿನಿಟ್ ಅಪಾಲಜಿ' ಪುಸ್ತಕ ಇದೆ. ಅದನ್ನು ನೀವಿಬ್ಬರು ಓದಿ. ಅದರಿಂದ ನಿಮಗೆ ಏನಾ ದರೂ ಪ್ರಯೋಜನವಾಗಬಹುದು' ಎಂದು ನ್ಯಾಯಾಧೀಶರು ರೂಪಾ ಮತ್ತು ರೋಹಿಣಿ ಅವರಿಗೆ ಸಲಹೆ ನೀಡಿ, ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿದರು.

ಬೆಂಗಳೂರು(ಫೆ.06): ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಕಾನೂನು ಹೋರಾಟದಲ್ಲಿ ಮುಳುಗಿರುವ ಹಿರಿಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ (ಐಜಿಪಿ) ಡಿ.ರೂಪಾ ಮೌದ್ಗೀಲ್ ಅವರಿಗೆ ರಾಜಿ ಸಂಧಾನ ಮಾಡಿಕೊಳ್ಳುವಂತೆ ಸೂಚಿಸಿರುವ ನಗರದ 5ನೇ ಎಸಿಎಂಎಂ ನ್ಯಾಯಾಲಯ, 'ಒನ್ ಮಿನಿಟ್ ಅಪಾಲಜಿ' ಎಂಬ ಇಂಗ್ಲಿಷ್ ಕೃತಿ ಓದುವಂತೆ ಇಬ್ಬರಿಗೂ ಸಲಹೆ ನೀಡಿದೆ.

ರೂಪಾ ಅವರು 2023ರ ಫೆ.18 ಮತ್ತು 19ರಂದು ಫೇಸ್‌ಬುಕ್ ಖಾತೆಯಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯ ಪೋಸ್ಟ್ ಪ್ರಕಟಿಸಿ ತೇಜೋವಧೆ ಮಾಡಿದ್ದಾರೆ. ಅವರಿಂದ 1 ಕೋಟಿ ರು. ಪರಿಹಾರವಾಗಿ ಕೊಡಿಸಿಕೊಡಬೇಕು ಹಾಗೂ ಅವರ ವಿರುದ್ಧ ಡನೀಯ ಕ್ರಮ ಕೈಗೊಳ್ಳಬೇಕು ಎಂದು ಸೂಕ್ತ ದಂಡನೀಯ ಕೋರಿ ರೋಹಿಣಿ 2023ರ ಮಾ.3ರಂದು ಮ್ಯಾಜಿ ಸ್ಟೇಟ್ ಕೋರ್ಟ್‌ಗೆ ಖಾಸಗಿ ದೂರು ದಾಖಲಿಸಿದರು.

ಐಎಎಸ್ Vs ಐಪಿಎಸ್: ರೋಹಿಣಿ ಸಿಂಧೂರಿ ವಿರುದ್ಧ ಮಾನನಷ್ಟ ದೂರು ದಾಖಲಿಸಿದ ಡಿ.ರೂಪಾ!

ಈ ಪ್ರಕರಣ ಬುಧವಾರ 5ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ವಿಜಯ ಕಮಾರ್ ಜಾಟ್ಲಾ ಅವರ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ರೋಹಿಣಿ ಮತ್ತು ರೂಪಾ ಉಪಸ್ಥಿತರಿದ್ದರು. ರೋಹಿಣಿ ಮನವಿ ಮೇರೆಗೆ ಪಾಟಿ ಸವಾಲು ಪ್ರಕ್ರಿಯೆಯನ್ನು ನ್ಯಾಯಾಲಯ ಗೌಪ್ಯವಾಗಿ (ಇನ್-ಕ್ಯಾಮರಾ ಪ್ರೊಸಿಡಿಂಗ್ಸ್) ನಡೆಸಿತು. ರೂಪಾ ಪರ ವಕೀಲ ಪಿ.ಪ್ರಸನ್ನ ಕುಮಾ‌ರ್ ಅವರು ಸುಮಾರು 45 ನಿಮಿಷಗಳ ಕಾಲ ರೋಹಿಣಿ ಅವರನ್ನು ಪಾಟಿ ಸವಾಲಿಗೆ ಗುರಿಪಡಿಸಿದರು. 

ನಂತರ ರೋಹಿಣಿ ಮತ್ತು ರೂಪಾರನ್ನು ಉದ್ದೇಶಿಸಿ ಪ್ರತಿಕ್ರಿಯಿಸಿದ ನ್ಯಾಯಾಧೀಶರು, 'ನೀವಿಬ್ಬರೂ ಸರ್ಕಾರದಲ್ಲಿ ಹಿರಿಯ ಅಧಿಕಾರಿಗಳಾಗಿದ್ದೀರಿ. ಉತ್ತಮ ಹೆಸರು ಗಳಿಸಿದ್ದೀರಿ. ನೀವು ಸಮಾಜಕ್ಕೆ ಸೇವೆ ಮಾಡಬೇಕಿದೆ. ನಿಮ್ಮ ಸಮಯವನ್ನು ಸಮಾಜ ಮತ್ತು ಸಾರ್ವಜನಿಕರ ಸೇವೆಗೆ ಬಳಸಬೇಕಿದೆ. ಅದು ಬಿಟ್ಟು ಕೋರ್ಟ್ ಕಲಾಪಕ್ಕೆ ಬಂದು ನಿಮ್ಮ ಅಮೂಲ್ಯವಾದ ಸಮಯ ವ್ಯರ್ಥ ಮಾಡುವಂತಾಗಬಾರದು. ಹಾಗಾಗಿ, ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಲೋಚಿಸಿ. ಇದನ್ನು ನಾನು ನಿಮಗೆ ಹೇಳುವ ಅಗತ್ಯವಿಲ್ಲ. ಆದರೆ, ಸಮಾಜದ ಹಿತ ದೃಷ್ಟಿಯಿಂದ ಹೇಳಿದ್ದೇನೆ ಅಷ್ಟೇ. ನೀವು ಯೋಚಿಸಿ ನಿರ್ಧಾರದ ತಿಳಿಸಿದರೆ, ಅದರಂತೆ ಪ್ರಕರಣವನ್ನು ನ್ಯಾಯಾಲಯ ಮುಂದುರಿಸಲಿದೆ' ಎಂದು ತಿಳಿಸಿದರು. 

ರೋಹಿಣಿ ಸಿಂಧೂರಿ ವಿರುದ್ಧದ ಭೂ ವಿವಾದ ಪ್ರಕರಣದಲ್ಲಿ ಗಾಯಕ ಅಲಿಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್

ಅಲ್ಲದೆ, 'ಇಂಗ್ಲಿಷ್‌ನಲ್ಲಿ 'ಒನ್ ಮಿನಿಟ್ ಅಪಾಲಜಿ' ಪುಸ್ತಕ ಇದೆ. ಅದನ್ನು ನೀವಿಬ್ಬರು ಓದಿ. ಅದರಿಂದ ನಿಮಗೆ ಏನಾ ದರೂ ಪ್ರಯೋಜನವಾಗಬಹುದು' ಎಂದು ನ್ಯಾಯಾಧೀಶರು ರೂಪಾ ಮತ್ತು ರೋಹಿಣಿ ಅವರಿಗೆ ಸಲಹೆ ನೀಡಿ, ವಿಚಾರಣೆಯನ್ನು ಫೆ.12ಕ್ಕೆ ಮುಂದೂಡಿದರು.

ಪತಿಯರನ್ನೂ ಹೊರ ಕಳುಹಿಸಿದ ಕೋರ್ಟ್: 

ಇದಕ್ಕೂ ಮುನ್ನ ರೋಹಿಣಿ ಪರ ವಕೀಲರ ಮನವಿ ಮೇರೆಗೆ ಕೋರ್ಟ್ ಹಾಲ್ ಒಳಗಿದ್ದ ವಕೀಲರು, ಕೋರ್ಟ್ ಸಿಬ್ಬಂದಿ, ಪೊಲೀಸರು, ಇತರೆ ಅಧಿಕಾರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು, ಸಿಂಧೂರಿ ಪತಿ ಸುಧೀರ್ ರೆಡ್ಡಿ ಮತ್ತು ರೂಪಾ ಪತಿ ಮನೀಷ್ ಮೌದ್ಗಿಲ್‌ರನ್ನು ಹೊರ ಕಳುಹಿಸಿ ಪಾಟಿ ಸವಾಲು ನಡೆಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ