ಅಮ್ಮನಿಗೆ ಏನಾದರೂ ಆದರೆ ಸರ್ಕಾರ ಹೊಣೆ| ಆರ್ಥಿಕ ಸಂಕಷ್ಟದಲ್ಲಿರುವ ತಮಗೆ ನೆರವಾಗುವಂತೆ ಮೂಡುಬಿದಿರೆಯ ಐಶ್ವರ್ಯಾ ಜೈನ್ ಮೊರೆ| ವಿದ್ಯಾಗಮದಿಂದಾಗಿ ಶಿಕ್ಷಕ ದಂಪತಿಗೆ ಸೋಂಕು| ಪತ್ನಿ ಐಸಿಯುಗೆ| ಪೋಷಕರ ಸಂಕಷ್ಟ ತೋಡಿಕೊಂಡ ಪುತ್ರಿ|
ಮೂಡುಬಿದಿರೆ(ಅ,14): ಅಪ್ಪ, ಅಮ್ಮ ಇಬ್ಬರೂ ಅನುದಾನಿತ ಶಾಲಾ ಶಿಕ್ಷಕರು. ವಿದ್ಯಾಗಮನದ ಕಾರಣಕ್ಕಾಗಿ ಮಕ್ಕಳಿಗೆ ಪಾಠ ಹೇಳಲು ಸುತ್ತಾಡಿದ ವೇಳೆಗೆ ಇಬ್ಬರಿಗೂ ಕೊರೋನಾ ತಗುಲಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಅಮ್ಮ, ಚಿಕಿತ್ಸೆ ಪಡೆದು ಸುಧಾರಿಸಿಕೊಳ್ಳುತ್ತಿರುವ ಅಪ್ಪ. ಹೆತ್ತವರ ಪಾಡು, ಆರ್ಥಿಕ ಸಂಕಟ ನೋಡಲಾಗದೆ ಮಗಳೇ ನೇರ ಶಿಕ್ಷಣ ಸಚಿವರನ್ನು ಸಂಪರ್ಕಿಸಲು ಯತ್ನಿಸಿದ್ದಾಳೆ. ಸಾಧ್ಯವಾಗದಿದ್ದಾಗ ಸಾಮಾಜಿಕ ಜಾಲತಾಣದ ಮೂಲಕ ‘ನನ್ನ ಅಮ್ಮನನ್ನು ಉಳಿಸಿಕೊಡಿ’ ಎಂದು ಅಳಲು ತೋಡಿಕೊಂಡಿದ್ದಾಳೆ.
ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿರುವಾಕೆ ಮೂಡುಬಿದಿರೆಯ ಐಶ್ವರ್ಯ ಜೈನ್. ಈಕೆ ಸ್ಥಳೀಯ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ. ಈಕೆಯ ತಂದೆ ಶಶಿಕಾಂತ್ ವೈ. ಸ್ಥಳೀಯ ಡಿಜೆ ಅನುದಾನಿತ ಶಾಲೆಯಲ್ಲಿ ಮುಖ್ಯ ಶಿಕ್ಷಕ. ತಾಯಿ ಪದ್ಮಾಕ್ಷಿ ಎನ್. ಅವರು ಮಕ್ಕಿಯ ಜವಾಹರಲಾಲ ನೆಹರು ಅನುದಾನಿತ ಪ್ರೌಢಶಾಲೆಯ ಶಿಕ್ಷಕಿ. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಬಂದ್ ಆಗಿದ್ದ ಹಿನ್ನೆಲೆಯಲ್ಲಿ ಸರ್ಕಾರದ ನಿರ್ದೇಶನದಂತೆ ‘ವಿದ್ಯಾಗಮನ’ ಕರ್ತವ್ಯಕ್ಕೆ ಹಾಜರಾಗಿದ್ದ ಇಬ್ಬರೂ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ ಶಶಿಕಾಂತ್ ಸುಧಾರಿಸಿಕೊಳ್ಳುತ್ತಿದ್ದು, ಪದ್ಮಾಕ್ಷಿ ಸೆ.29ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿನವೊಂದಕ್ಕೆ ಸರಾಸರಿ .30 ಸಾವಿರ ಆಸ್ಪತ್ರೆ ವೆಚ್ಚ, ಈಗಾಗಲೇ .6ರಿಂದ .7ಲಕ್ಷ ಖರ್ಚಾಗಿದ್ದು, ಕುಟುಂಬ ಕಂಗಾಲಾಗಿದೆ. ತನ್ನ ಕುಟುಂಬ ಎದುರಿಸುತ್ತಿರುವ ಆರ್ಥಿಕ ಮತ್ತು ಮಾನಸಿಕ ಸಂಕಷ್ಟವನ್ನು ನೋಡಲಾಗದೆ ಐಶ್ವರ್ಯ ಜೈನ್ ಶಿಕ್ಷಣ ಸಚಿವರನ್ನು ಸಂಪರ್ಕಿಸಲು ಯತ್ನಿಸಿದ್ದಾಳೆ. ಅದು ಸಾಧ್ಯವಾಗದಿದ್ದಾಗ ಫೇಸ್‌ಬುಕ್‌ನಲ್ಲಿ ‘ವಿದ್ಯಾಗಮ’ ತಂದಿಟ್ಟಸಂಕಷ್ಟದ ಕುರಿತು ಅಳಲು ತೋಡಿಕೊಂಡಿದ್ದಾಳೆ. ‘ನನ್ನ ಹೆತ್ತವರು ಕ್ಷೇಮವಾಗಿದ್ದರು. ವಿದ್ಯಾಗಮನದಿಂದಾಗಿ ಕೊರೋನಾ ತಗುಲಿ ಈಗ ಅವರ ಪರಿಸ್ಥಿತಿ ತೀವ್ರ ಚಿಂತಾಜನಕವಾಗಿದೆ. ನನ್ನ ಅಮ್ಮನಿಗೇನಾದರೂ ಆದರೆ ಅದಕ್ಕೆ ಸರ್ಕಾರವೇ ಹೊಣೆ’ ಎಂದು ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾಳೆ.
undefined
ವೈರಲ್ ಆಯ್ತು ಪೋಸ್ಟ್: ಶಶಿಕಾಂತ್ ವೈ, ಪದ್ಮಾಕ್ಷಿ ದಂಪತಿ ಇಬ್ಬರೂ ಆಸ್ಪತ್ರೆ ಸೇರಿಕೊಂಡಿದ್ದು ಒಂದೆಡೆಯಾದರೆ, ಪುತ್ರಿ ಐಶ್ವರ್ಯ, ಆಕೆಯ ಸಹೋದರ ಆರನೇ ತರಗತಿಯ ಅನಯ್‌ಗೆ ಆನ್‌ಲೈನ್ ಪಾಠ, ಹೋಂವರ್ಕ್. ಅಪ್ಪ ಅಮ್ಮ ಇಬ್ಬರೂ ಆಸ್ಪತ್ರೆಯತ್ತ ಮುಖ ಮಾಡಿದ ಕಾರಣ ಮಕ್ಕಳೀಗ ದೊಡ್ಡಮ್ಮನ ಮನೆಯಲ್ಲಿದ್ದಾರೆ. ಈ ಘಟನೆಯಿಂದಾಗಿ ಮಕ್ಕಳಿಬ್ಬರು ಮಾತ್ರವಲ್ಲ ಇಡೀ ಕುಟುಂಬವೇ ತೀವ್ರ ಒತ್ತಡದಲ್ಲಿದೆ. ಆರ್ಥಿಕವಾಗಿಯೂ ಸಂಕಷ್ಟಎದುರಾಗಿದ್ದು, ಸಹಾಯಕ್ಕಾಗಿ ಮಗಳು ರಾಜ್ಯದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಸೇರಿ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಶಾಸಕ, ಸಂಸದರ ಜತೆಗೆ ವಿವಿಧ ಇಲಾಖೆಯವರಿಗೂ ಮನವಿ ಮಾಡಿದ್ದಾರೆ. ಈ ಮನವಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಐಶ್ವರ್ಯಗೆ ಸ್ಥಳೀಯರಿಂದ ಧೈರ್ಯ ತುಂಬುವ ಭರವಸೆಯ ಕರೆಗಳೂ ಬರಲಾರಂಭಿಸಿವೆ.
ಅಮ್ಮನನ್ನು ಉಳಿಸಿ
ನನ್ನ ಕುಟುಂಬಕ್ಕೀಗ ವೈದ್ಯಕೀಯ ಸೌಲಭ್ಯಗಳಿಗಾಗಿ ತುರ್ತಾಗಿ ಆರ್ಥಿಕ ನೆರವು ಬೇಕಾಗಿದೆ. ಸರ್ಕಾರವು ಶಿಕ್ಷಕರನ್ನು ಈ ತುರ್ತು ಅಗತ್ಯದ ಸಂದರ್ಭದಲ್ಲಿ ಕೈಬಿಡುವುದಿಲ್ಲ ಎಂದು ನಂಬಿದ್ದೇನೆ. ವಿದ್ಯಾಗಮನ ಕರ್ತವ್ಯ ನಿರ್ವಹಿಸಿದ ನನ್ನ ಅಮ್ಮನ ಪ್ರಾಣ ಆಪತ್ತಿನಲ್ಲಿದೆ. ಹೇಗಾದರೂ ಮಾಡಿ ಅಮ್ಮನನ್ನು ಉಳಿಸಿಕೊಡಿ. ಒತ್ತಡದ ನಡುವೆ ಶಿಕ್ಷಣ ಸಚಿವರು, ಇತರರನ್ನು ಭೇಟಿಯಾಗಿ ನನ್ನ ನೋವನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ.
- ಐಶ್ವರ್ಯ , ವಿದ್ಯಾರ್ಥಿನಿ