ಕೊರೋನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಬಂತು ಹೊಸ ಮುಲಾಮು!

By Kannadaprabha NewsFirst Published Jun 16, 2021, 7:53 AM IST
Highlights

* ಕೋವಿಡ್‌ನಿಂದ 3 ಗಂಟೆ ರಕ್ಷಣೆ ನೀಡುವ ಕೋವಿರಕ್ಷಾ

* ಬೆಂಗಳೂರು ಸಂಸ್ಥೆಯಿಂದ ಮುಲಾಮು ಸಂಶೋಧನೆ

* ಮೂಗು, ಗಂಟಲು, ಮಾಸ್ಕ್‌ಗೆ ಹಚ್ಚಿದ್ರೆ ವೈರಸ್‌ ಬರಲ್ಲ

ಬೆಂಗಳೂರು(ಜೂ.16): ಕೊರೋನಾ ವೈರಾಣು ಬಾರದಂತೆ ಹಚ್ಚಿಕೊಳ್ಳುವ ಔಷಧಿ ‘ಕೋವಿರಕ್ಷಾ’ ಮುಲಾಮನ್ನು ಬೆಂಗಳೂರಿನ ನೂತನ್‌ ಲ್ಯಾಬ್ಸ್‌ ಅಭಿವೃದ್ಧಿಪಡಿಸಿದೆ. ಮೂಗು, ಗಂಟಲು, ಮಾಸ್ಕ್‌ ಮತ್ತು ಕೈಗೆ ‘ಕೋವಿರಕ್ಷಾ’ ಹಚ್ಚಿಕೊಂಡರೆ ಮೂರು ಗಂಟೆಗಳ ಕಾಲ ಕೊರೋನಾ ವೈರಾಣುವಿನಿಂದ ರಕ್ಷಣೆ ಪಡೆಯಬಹುದಾಗಿದೆ.

ಬೆಂಗಳೂರು ಮೂಲದ ನ್ಯಾನೋ ತಂತ್ರಜ್ಞಾನದ ಸ್ಟಾರ್ಟ್‌ಅಪ್‌ ನೂತನ್‌ ಲ್ಯಾಬ್ಸ್‌, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದೊಂದಿಗೆ ಈ ಔಷಧವನ್ನು ಸಂಶೋಧಿಸಿದ್ದು, ರಾಜ್ಯದ ಆಯುಷ್‌ ಇಲಾಖೆ ಬಳಕೆಗೆ ಅನುಮತಿ ನೀಡಿದೆ.

ಮಂಗಳವಾರ ನಗರದಲ್ಲಿ ಕೋವಿರಕ್ಷಾವನ್ನು ಪರಿಚಯಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಮತ್ತು ಕೋವಿರಕ್ಷಾದ ಸಂಶೋಧಕ ಚಿಕ್ಕಮಗಳೂರಿನ ನೂತನ್‌ ಎಚ್‌.ಎಸ್‌.ಅವರು, ಕೋವಿರಕ್ಷಾವನ್ನು ಬೆಳ್ಳಿಯನ್ನು ಪ್ರಧಾನವಾಗಿರಿಸಿಕೊಂಡು ನೈಸರ್ಗಿಕ ಮತ್ತು ನ್ಯಾನೋ ತಂತ್ರಜ್ಞಾನದಿಂದ ಉತ್ಪಾದಿಸಲಾಗಿದೆ. ಇದನ್ನು ಮೂಗು, ಗಂಟಲು, ಕೈ ಮತ್ತು ಮಾಸ್ಕ್‌ಗಳಿಗೆ ಹಚ್ಚಿದರೆ ಕೊರೋನಾ ವೈರಾಣುವಿನಿಂದ 3 ಗಂಟೆಗಳ ಕಾಲ ರಕ್ಷಣೆ ಸಿಗುತ್ತದೆ. ಪ್ರತಿಯೊಬ್ಬರೂ ಮನೆಯಿಂದ ಹೊರಗೆ ಹೋಗುವಾಗ ಈ ಉತ್ಪನ್ನವನ್ನು ಬಳಸಬಹುದು ಎಂದರು.

ಕಳೆದ ಮೂರು ತಿಂಗಳಿನಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಯ ಮೇಲೆ ನಾವು ಪ್ರಯೋಗ ನಡೆಸಿ ಉತ್ತಮ ಫಲಿತಾಂಶ ಪಡೆದುಕೊಂಡಿದ್ದೇವೆ. ಮಕ್ಕಳು ಕೂಡ ಇದನ್ನು ಉಪಯೋಗಿಸಬಹುದು. ಒಂದು ವಯಲ್‌ ಅನ್ನು 200ಕ್ಕೂ ಹೆಚ್ಚು ಬಾರಿ ಬಳಸಬಹುದಾಗಿದೆ. ಕೇಂದ್ರದ ಆಯುಷ್‌ ಸಚಿವಾಲಯದ ಕಾರ್ಯದರ್ಶಿಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಆರ್‌ಎಸ್‌ಎಸ್‌ನ ದಕ್ಷಿಣ ಮಧ್ಯಕ್ಷೇತ್ರದ ಕ್ಷೇತ್ರ ಕಾರ್ಯವಾಹ ನಾ.ತಿಪ್ಪೆಸ್ವಾಮಿ ಮಾತನಾಡಿ, ಕೋವಿಡ್‌ ಸಂಕಷ್ಟಭಾರತದ ಅಂತಃಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದೆ. ವಿಜ್ಞಾನಿಗಳು, ಜನ ಸಾಮಾನ್ಯರು ಕಾಲಕ್ಕೆ ತಕ್ಕಂತೆ, ಪರಿಸ್ಥಿತಿಗೆ ತಕ್ಕಂತೆ ಸಂಶೋಧನೆಗಳನ್ನು ಮಾಡುತ್ತ ಬಂದಿದ್ದಾರೆ. ಕೋವಿರಕ್ಷಾ ಎಂಬ ವಿನೂತನ ಔಷಧವನ್ನು ಕಂಡುಹಿಡಿದಿರುವ ನೂತನ್‌ ಲ್ಯಾಬ್ಸ್‌ ಈ ಪರಂಪರೆಯನ್ನು ಮುಂದುವರಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈಗಾಗಲೇ ಔಷಧದ ಉತ್ಪಾದನೆಗೆ ಕ್ರಮ ಕೈಗೊಂಡಿದ್ದೇವೆ. ಆದರೆ ದೊಡ್ಡ ಪ್ರಮಾಣದ ಉತ್ಪಾದನೆಗೆ ಹೆಚ್ಚಿನ ಬಂಡವಾಳ ಅಗತ್ಯವಿದೆ. ನಾವು ಹೂಡಿಕೆದಾರರ ನಿರೀಕ್ಷೆಯಲ್ಲಿದ್ದೇವೆ. ಎಂದು ಮ್ಯಾನೇಜ್ಮೆಂಟ್‌ ಕನ್ಸಲ್ಟೆಂಟ್‌ ವೇಣು ಶರ್ಮಾ ಹೇಳಿದರು.

ಚಿಕ್ಕಮಗಳೂರಿನ ಅಜ್ಜಂಪುರದವರಾದ ನೂತನ್‌ ಎಚ್‌.ಎಸ್‌ ಅವರು ಬೆಂಗಳೂರು ವಿವಿಯಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಐಐಎಸ್‌ಸಿಯ ನೆರವಿನಿಂದ ನ್ಯಾನೋ ಟೆಕ್ನಾಲಜಿ ಆಧಾರಿತ ನೂತನ್‌ ಲ್ಯಾಬ್ಸ್‌ ಎಂಬ ಸ್ಟಾರ್ಟ್‌ ಅಫ್‌ ಪ್ರಾರಂಭಿಸಿ ಅವರು ಈಗಾಗಲೇ ಸ್ಮಾಗ್‌ ಟವರ್‌ (ಹೊರಾಂಗಣ ವಾಯು ಶುದ್ಧೀಕರಣ), ಒಳಾಂಗಣ ವಾಯು ಶುದ್ಧೀಕರಣ, ವೈರಸ್‌ ಶುದ್ಧೀಕರಣ ಘಟಕಗಳನ್ನು ಸಂಶೋಧಿಸಿದ್ದಾರೆ.

ಅವಿಷ್ಕರಿಸಿದ್ದು ಯಾರು?

ಕೋವಿರಕ್ಷಾ ಮುಲಾಮು ತಯಾರಿಸಿದ್ದು ಚಿಕ್ಕಮಗಳೂರಿನ ಅಜ್ಜಂಪುರದವರಾದ ನೂತನ್‌ ಎಚ್‌.ಎಸ್‌. ಇವರು ಈಗಾಗಲೇ ಐಐಎಸ್‌ಸಿಯ ನೆರವಿನಿಂದ ನ್ಯಾನೋ ಟೆಕ್ನಾಲಜಿ ಆಧಾರಿತ ನೂತನ್‌ ಲ್ಯಾಬ್ಸ್‌ ಎಂಬ ಸ್ಟಾರ್ಟ್‌ ಅಫ್‌ ಪ್ರಾರಂಭಿಸಿ ಈಗಾಗಲೇ, ಸ್ಮಾಗ್‌ ಟವರ್‌ (ಹೊರಾಂಗಣ ವಾಯು ಶುದ್ಧೀಕರಣ), ಒಳಾಂಗಣ ವಾಯು ಶುದ್ಧೀಕರಣ, ವೈರಸ್‌ ಶುದ್ಧೀಕರಣ ಘಟಕ ಸಂಶೋಧಿಸಿದ್ದಾರೆ.

click me!