ರಾಜ್ಯದ ಬರೋಬ್ಬರಿ 27 ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣ ಮಟ್ಟಮೀರಿದೆ! ಕಳೆದ ಒಂದು ವಾರದಿಂದ ಬಾಗಲಕೋಟೆ, ಯಾದಗಿರಿ ಹಾಗೂ ಹಾವೇರಿ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿದೆ.
ಬೆಂಗಳೂರು (ಜ.22): ರಾಜ್ಯದ ಬರೋಬ್ಬರಿ 27 ಜಿಲ್ಲೆಗಳಲ್ಲಿ ಕೊರೋನಾ ಸೋಂಕು (Coronavirus) ನಿಯಂತ್ರಣ ಮಟ್ಟಮೀರಿದೆ! ಕಳೆದ ಒಂದು ವಾರದಿಂದ ಬಾಗಲಕೋಟೆ, ಯಾದಗಿರಿ ಹಾಗೂ ಹಾವೇರಿ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.5ಕ್ಕಿಂತ ಹೆಚ್ಚಿದೆ. ಅದರಲ್ಲೂ ಬೆಂಗಳೂರು, ಮಂಡ್ಯ, ಹಾಸನದಲ್ಲಿ ಪಾಸಿಟಿವಿಟಿ ದರ ಶೇ.20ರ ಗಡಿ ದಾಟಿದ್ದು, ಈ ಜಿಲ್ಲೆಗಳಲ್ಲಿ ಕೋವಿಡ್ (Covid19) ಪರೀಕ್ಷೆಗೊಳಗಾಗುವ ಪ್ರತಿ ಐದು ಮಂದಿಯ ಪೈಕಿ ಒಬ್ಬರಲ್ಲಿ ಸೋಂಕು ದೃಢಪಡುತ್ತಿದೆ.
ಪಾಸಿಟಿವಿಟಿ ದರ ಎಂದರೆ, ನಿರ್ದಿಷ್ಟ ಪ್ರದೇಶ ಒಂದರಲ್ಲಿ ಸೋಂಕು ಪರೀಕ್ಷೆಗೊಳಪಡುವ ಪ್ರತಿ 100 ಮಂದಿಯಲ್ಲಿ ಎಷ್ಟು ಮಂದಿಗೆ ಸೋಂಕು ದೃಢಪಡುತ್ತಿದೆ ಎಂಬುದಾಗಿದೆ. ಕೆಲವೊಮ್ಮೆ ಪರೀಕ್ಷೆ ಹೆಚ್ಚಿದ್ದರೆ, ಹೊಸ ಪ್ರಕರಣಗಳು ಹೆಚ್ಚು ವರದಿಯಾಗುತ್ತವೆ. ಪಾಸಿಟಿವಿಟಿ ದರವನ್ನು ಮಾನದಂಡವಾಗಿಟ್ಟುಕೊಂಡು ಆ ಪ್ರದೇಶದಲ್ಲಿ ಸೋಂಕಿನ ತೀವ್ರತೆಯನ್ನು ಅಳೆಯಲಾಗುತ್ತದೆ. ವೈರಾಣು ತಜ್ಞರ ಪ್ರಕಾರ, ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಇರಬೇಕು.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಳವಾಗುತ್ತಿದೆ. ಪಾಸಿಟಿವಿಟಿ ದರ ಜನವರಿ ಮೊದಲ ವಾರ ಸರಾಸರಿ ಶೇ.4ರಷ್ಟಿತ್ತು. ಎರಡನೇ ವಾರ ಸರಾಸರಿ ಶೇ.9ಕ್ಕೆ ಹೆಚ್ಚಳವಾಗಿತ್ತು. ಸದ್ಯ ಮೂರನೇ ವಾರಕ್ಕೆ ಶೇ.18ಕ್ಕೆ ಬಂದು ತಲುಪಿದೆ. ಅಂದರೆ, ಪ್ರಸ್ತುತ ಸೋಂಕು ಪರೀಕ್ಷೆಗೊಳಪಡುವ ಪ್ರತಿ 100 ಮಂದಿಯಲ್ಲಿ 18 ಮಂದಿಗೆ ಸೋಂಕು ದೃಢಪಡುತ್ತಿದೆ.
Covid-19 Crisis: ರಾಜ್ಯದಲ್ಲಿ ಕೋವಿಡ್ ಸೋಂಕು, ಪಾಸಿಟಿವಿಟಿ ಎರಡೂ ಕುಸಿತ
ಪಾಸಿಟಿವಿಟಿ ದರವು ಕಳೆದ ಬುಧವಾರ ಮಂಡ್ಯದಲ್ಲಿ ಶೇ.40, ಹಾಸನ, ಮೈಸೂರಿನಲ್ಲಿ ಶೇ.33, ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಶೇ.20ಕ್ಕಿಂತ ಹೆಚ್ಚು ದಾಖಲಾಗಿದೆ ಎಂದು ರಾಜ್ಯ ಕೊರೋನಾ ವಾರ್ ರೂಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಒಮಿಕ್ರೋನ್ (Omicron) ಹರಡುವಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಶೇ.10 ಪಾಸಿಟಿವಿಟಿ ದರವನ್ನು ಮಾನದಂಡ ಮಾಡಿಕೊಳ್ಳಲು ಸೂಚಿಸಿತ್ತು. ಸದ್ಯ ರಾಜ್ಯದ 15 ಜಿಲ್ಲೆಗಳಲ್ಲಿ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿದೆ.
ಪ್ರತಿ ನಾಲ್ವರಲ್ಲಿ ಒಬ್ಬರಲ್ಲಿ ಸೋಂಕು: ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಹೆಚ್ಚಳವಾಗುತ್ತಾ ಬಂದು ಶೇ.25 ತಲುಪಿದೆ. ಪರೀಕ್ಷೆಗೊಳಪಡುವ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಕೊರೋನಾ ಸೋಂಕು ದೃಢಪಡುತ್ತಿದೆ. ಇನ್ನು ಎರಡನೇ ಅಲೆಯ ಉಚ್ಛ್ರಾಯ ಸ್ಥಿತಿಯ ದಿನವೊಂದರಲ್ಲಿ ಪಾಸಿಟಿವಿಟಿ ದರವು ಶೇ.40ಕ್ಕೆ ಹೆಚ್ಚಳವಾಗಿತ್ತು.
ಜಿಲ್ಲೆಗಳು -ಪಾಸಿಟಿವಿಟಿ ದರ
ಬೆಂಗಳೂರು - 23%
ಮಂಡ್ಯ - 22%
ಹಾಸನ - 21%
ತುಮಕೂರು - 18%
ಮೈಸೂರು - 17%
ಕಲಬುರಗಿ - 15%
ಬೆಂಗಳೂರು ಗ್ರಾಮಾಂತರ, ಕೋಲಾರ -14%
ಬಳ್ಳಾರಿ, ಶಿವಮೊಗ್ಗ -14%
ಬೀದರ್ - 11%
ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು,ರಾಮನಗರ- ಶೇ.11
ಕರ್ನಾಟಕದಲ್ಲಿ ಒಂದೇ ದಿನ 41 ಸಾವಿರಕ್ಕೂ ಹೆಚ್ಚು ಕೊರೋನಾ ಕೇಸ್ ಪತ್ತೆ
ಕಡಿಮೆ ಪಾಸಿಟಿವಿಟಿ ದರ ಜಿಲ್ಲೆಗಳು
ಹಾವೇರಿ -2%
ಯಾದಗಿರಿ-3%
ಬಾಗಲಕೋಟೆ -3%
ಕೇಂದ್ರ ಸರ್ಕಾರವು ಈ ಹಿಂದೆ ಶೇ.10ರ ಪಾಸಿಟಿವಿಟಿ ದರವನ್ನು ಮಾನದಂಡವಾಗಿಟ್ಟುಕೊಳ್ಳಬೇಕು ಎಂದು ಸೂಚಿಸಿತ್ತು. ಒಮಿಕ್ರೋನ್ ಹರಡುವಿಕೆ ಪ್ರಮಾಣ ಸಾಕಷ್ಟುಹೆಚ್ಚಿದ್ದು, ಇದರಿಂದಲೇ ಪಾಸಿಟಿವಿಟಿ ದರವು ಸಾಕಷ್ಟುಹೆಚ್ಚಿರುತ್ತದೆ. ಸಾರ್ವಜನಿಕರು ಗಾಬರಿಯಾಗುವುದು ಬೇಡ. ಸದ್ಯ ಆಸ್ಪತ್ರೆ ದಾಖಲಾತಿ ಕಡಿಮೆ ಇದೆ.
-ಡಾ.ಎಂ.ಕೆ.ಸುದರ್ಶನ್, ಮುಖ್ಯಸ್ಥರು, ರಾಜ್ಯ ಕೊರೋನಾ ನಿರ್ವಹಣೆ ತಾಂತ್ರಿಕ ಸಲಹಾ ಸಮಿತಿ