ಬೆಚ್ಚಿ ಬೀಳಿಸಿದ ಕೊರೋನಾ| ಕರ್ನಾಟಕದಲ್ಲೂ ಕೊರೋನಾ ಹಾವಳಿ| ಮಾಸ್ಕ್, ಸ್ಯಾನಿಟೈಸರ್ ಸಿಗೋದೇ ಕಷ್ಟ| ಬೆಲೆ ಕೇಳಿದ್ರೆ ಶಾಕ್ ಆಗುತ್ತೆ
ಬೆಂಗಳೂರು[ಮಾ.14]:
ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಡೆಡ್ಲಿ ಕೊರೋನಾ ವೈರಸ್ ಸದ್ಯ ಭಾರತದಲ್ಲಿ ತನ್ನ ರುದ್ರ ನರ್ತನ ಆರಂಭಿಸಿದೆ. ಕರ್ನಾಟಕದ ಓರ್ವ ಸೇರಿದಂತೆ ಭಾರತದಲ್ಲಿ ಒಟ್ಟು ಇಬ್ಬರು ಈ ಮಾರಕ ವೈರಸ್‌ಗೆ ಬಲಿಯಾಗಿದ್ದರೆ, ಜಾಗತಿಕ ಮಟ್ಟದಲ್ಲಿ ಮೃತರ ಸಂಖ್ಯೆ 5 ಸಾವಿರ ದಾಟಿದೆ. ಹೀಗಿರುವಾಗ ರಾಜ್ಯದಲ್ಲಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ಖರೀದಿಸಲು ಜನ ಮೆಡಿಕಲ್ ಶಾಪ್ ಕಡೆ ಹೆಜ್ಜೆ ಇಟ್ಟಿದ್ದಾರೆ. ಆದರೆ ಮೆಡಿಕಲ್ ಶಾಪ್ ಸಿಬ್ಬಂದಿ ಮಾತ್ರ ಮಾರುಕಟ್ಟೆಯಲ್ಲಿ ಇವೆರಡರ ಪೂರೈಕೆ ಕಡಿಮೆ ಇದೆ ಎಂಬ ರಾಗ ಹಾಡುತ್ತಿದ್ದಾರೆ. ಸಾಲದೆಂಬಂತೆ ಮಾಸ್ಕ್‌ಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾರಂಭಿಸಿದ್ದಾರೆ.
ಹೌದು ಒಂದೆಡೆ ಜನರು ಮಾರಕ ಕೊರೋನಾ ಹಾವಳಿಗೆ ತತ್ತರಿಸಿದ್ದರೆ, ಇತ್ತ ಕೆಲ ಮೆಡಿಕಲ್ ಶಾಪ್ ಸಿಬ್ಬಂದಿ ಮಾತ್ರ ಇಂತಹ ಸಮಯದಲ್ಲೂ ಸ್ವಾರ್ಥ ಮೆರೆಯುತ್ತಿದ್ದಾರೆ. ಗರಿಷ್ಟವೆಂದರೆ 50 ರೂ. ಬೆಲೆ ಬಾಳುವ ಸಾಮಾನ್ಯ ಮಾಸ್ಕ್‌ನ್ನು ಬರೋಬ್ಬರಿ 250 ರೂ. ಗೆ ಮಾರಾಟ ಮಾಡಲಾರಂಭಿಸಿದ್ದಾರೆ. ಸುವರ್ಣ ನ್ಯೂಸ್ ಡಾಟ್ ಕಾಂ ಸೋದರ ಸಂಸ್ಥೆ ನ್ಯೂಸೇಬಲ್ ಈ ಕುರಿತು ರಿಯಾಲಿಟಿ ಚೆಕ್ ನಡೆಸಿದ್ದು, ಔಷಧಿ ಮಳಿಗೆ ಸಿಬ್ಬಂದಿಗಳ ಬಂಡವಾಳ ಬಯಲಾಗಿದೆ.
ಇನ್ನು ಸಿಬ್ಬಂದಿ ಬಳಿ ಈ ಕುರಿತಾಗಿ ಪ್ರಶ್ನಿಸಿದಾಗ ಮಾಸ್ಕ್ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆಯಾಗಿದೆ. ಈ ಕಾರಣದಿಂದ ಬೆಲೆ ಜಾಸ್ತಿ ಮಾಡಲಾಗಿದೆ ಎಂದು ಉತ್ತರಿಸಿದ್ದಾರೆ. ಅದೇನಿದ್ದರೂ ಇಂತಹ ಕಷ್ಟಕರ ಸಮಯದಲ್ಲಿ ಈ ರೀತಿಯ ಅಮಾನವೀಯ ದೋರಣೆ ಸಲ್ಲದು. ಮೆಡಿಕಲ್ ಶಾಪ್ ಸಿಬ್ಬಂದಿ ಇಂತಹ ಧೋರಣೆ ತೋರಿದಲ್ಲಿ ಗ್ರಾಹಕರು ದೂರು ನಿಡುವ ಅವಕಾಶವೂ ಇದೆ. 080-22660000ಗೆ ಕರೆ ಮಾಡಿ ಈ ಸಂಬಂಧ ದೂರು ಸಲ್ಲಿಸಿ