ಕೆಂಪು ವಲಯದಲ್ಲಿ ರಾಜ್ಯದ 11 ಜಿಲ್ಲೆಗಳು!

By Kannadaprabha NewsFirst Published Apr 13, 2020, 8:42 AM IST
Highlights

ರಾಜ್ಯದ 11 ಜಿಲ್ಲೆಗಳು ಕೆಂಪು ವಲಯದಲ್ಲಿ| ಕೊರೋನಾ ತೀವ್ರತೆ ಆಧರಿಸಿ 3 ಬಣ್ಣಗಳಲ್ಲಿ ವರ್ಗೀಕರಣ| ಕೆಂಪು, ಕಿತ್ತಳೆ, ಹಸಿರು ವಲಯಗಳಾಗಿ ವಿಭಜನೆ| ಕಿತ್ತಳೆ ವಲಯದಲ್ಲಿ 8, ಹಸಿರು ವಲಯದಲ್ಲಿ 10 ಜಿಲ್ಲೆ

ಬೆಂಗಳೂರು(ಏ.13): ಕೊರೋನಾ ಪ್ರಕರಣಗಳ ಮೇಲೆ ಹೆಚ್ಚು ನಿಗಾ ಇರಿಸುವ ಸಂಬಂಧ ಆರೋಗ್ಯ ಇಲಾಖೆ ಹಾಗೂ ಗೃಹ ಇಲಾಖೆಗಳು ಸೋಂಕಿತ ಪ್ರಕರಣಗಳಿಗೆ ಅನುಗುಣವಾಗಿ ಅನಧಿಕೃತವಾಗಿ ರಾಜ್ಯವನ್ನು 3 ವರ್ಗೀಕರಣ ಮಾಡಿವೆ. ಕೆಂಪು ವಲಯ, ಕಿತ್ತಳೆ (ಹಳದಿ) ವಲಯ ಹಾಗೂ ಹಸಿರು ವಲಯ ಎಂಬ ವರ್ಗೀಕರಣ ಮಾಡಲಾಗಿದೆ.
"

ಈ ಪ್ರಕಾರ, ಹೆಚ್ಚು ಪ್ರಕರಣ ವರದಿಯಾದ ಜಿಲ್ಲೆಗಳು ಕೆಂಪು ವಲಯ, ಮಧ್ಯಮ ಪ್ರಮಾಣದಲ್ಲಿ ಪ್ರಕರಣಗಳು ಇರುವ ಜಿಲ್ಲೆಗಳನ್ನು ಕಿತ್ತಳೆ ವಲಯ ಹಾಗೂ ಯಾವುದೇ ಪ್ರಕರಣ ವರದಿಯಾಗದ ಜಿಲ್ಲೆಗಳನ್ನು ಹಸಿರು ವಲಯ ಎಂದು ಗುರುತಿಸಲಾಗಿದೆ.

ಈ ಪ್ರಕಾರ ಕೆಂಪು ವಲಯದಲ್ಲಿ 11 ಜಿಲ್ಲೆ, ಕಿತ್ತಳೆ ವಲಯದಲ್ಲಿ 8 ಹಾಗೂ ಹಸಿರು ವಲಯದಲ್ಲಿ 10 ಜಿಲ್ಲೆಗಳಿವೆ.

ದೇಶದಲ್ಲಿ ಮೂರು ವಲಯ ರಚಿಸಿ ಲಾಕ್‌ಡೌನ್ 2.0 ಜಾರಿ?

ಕೆಂಪು ವಲಯದಲ್ಲಿ 11 ಜಿಲ್ಲೆ:

76 ಪ್ರಕರಣ ವರದಿಯಾಗಿರುವ ಬೆಂಗಳೂರು, 48 ಪ್ರಕರಣದ ಮೈಸೂರು, 9 ಪ್ರಕರಣದ ಚಿಕ್ಕಬಳ್ಳಾಪುರ, 12 ಪ್ರಕರಣದ ದಕ್ಷಿಣ ಕನ್ನಡ, 11 ಪ್ರಕರಣದ ಬೀದರ್‌, 9 ಪ್ರಕರಣದ ಉತ್ತರ ಕನ್ನಡ, 8 ಪ್ರಕರಣದ ಬಾಗಲಕೋಟೆ, 13 ಪ್ರಕರಣದ ಕಲಬುರಗಿ, 14 ಪ್ರಕರಣದ ಬೆಳಗಾವಿ, ತಲಾ 6 ಪ್ರಕರಣದ ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಗಳು ಕೆಂಪು ವಲಯದಲ್ಲಿ ಗುರುತಿಸಿಕೊಂಡಿವೆ.

ಇನ್ನು ಕೇಂದ್ರ ಸರ್ಕಾರವು ಬಿಡುಗಡೆಯ ಮಾಡಿರುವ ಕೊರೋನಾ ಹೆಚ್ಚು ಪ್ರಕರಣ ವರದಿಯಾಗುತ್ತಿರುವ ಹಾಟ್‌ಸ್ಪಾಟ್‌ಗಳಲ್ಲೂ ಬೆಂಗಳೂರು, ಮೈಸೂರು, ಕಲಬುರಗಿ, ಚಿಕ್ಕಬಳ್ಳಾಪುರ, ಬೀದರ್‌, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಸ್ಥಾನ ಪಡೆದಿವೆ. ಹೀಗಾಗಿ ಈ ವ್ಯಾಪ್ತಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕಿತ್ತಳೆ ವಲಯದಲ್ಲಿ 8 ಜಿಲ್ಲೆ:

ಮಂಡ್ಯ ಜಿಲ್ಲೆಯಲ್ಲಿ ಏಕಾಏಕಿ 5 ಪ್ರಕರಣ ವರದಿಯಾಗುವ ಮೂಲಕ ಕಿತ್ತಳೆ ವಲಯದಲ್ಲಿದೆ. ಬೆಂಗಳೂರು ಗ್ರಾಮಾಂತರ 4, ದಾವಣಗೆರೆಯಲ್ಲಿ ವರದಿಯಾಗಿದ್ದ 3 ಪ್ರಕರಣಗಳ ಸೋಂಕಿತರು ಗುಣಮುಖರಾಗಿದ್ದಾರೆ. ಆದರೂ ದಾವಣಗೆರೆ 3, ಉಡುಪಿ 3, ಕೊಡಗು 1, ಧಾರವಾಡ 2, ತುಮಕೂರು 1, ಗದಗ 1 ಪ್ರಕರಣಗಳ ಮೂಲಕ ಕಿತ್ತಳೆ ವಲಯದಲ್ಲಿವೆ. ಈ ಭಾಗದಲ್ಲಿ ಯಾವಾಗ ಬೇಕಾದರೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ ಕಟ್ಟೆಚ್ಚರ ಮುಂದುವರೆಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

15ಕ್ಕೆ ಲಾಕ್‌ಡೌನ್‌ ಕೊಂಚ ಸಡಿ​ಲ?

ಹಸಿರು ವಲಯದಲ್ಲಿ 10:

ಉಳಿದಂತೆ ಶಿವಮೊಗ್ಗ, ಯಾದಗಿರಿ, ರಾಮನಗರ, ಕೋಲಾರ, ಚಿತ್ರದುರ್ಗ, ಕೊಪ್ಪಳ, ಹಾವೇರಿ, ಹಾಸನ, ಚಾಮರಾಜನಗರ, ರಾಯಚೂರು ಜಿಲ್ಲೆಗಳಲ್ಲಿ ಒಂದೂ ಸೋಂಕು ದೃಢಪಟ್ಟಿಲ್ಲ. ಹೀಗಾಗಿ ಹಸಿರು ವಲಯದಲ್ಲಿವೆ.

ನಿಗಾ:

ಆದರೆ, ಶಂಕೆ ಆಧಾರದ ಮೇಲೆ ಶಿವಮೊಗ್ಗ (8), ಯಾದಗಿರಿ (8), ರಾಮನಗರ (10), ಕೋಲಾರ (5), ಚಿತ್ರದುರ್ಗ (1), ಕೊಪ್ಪಳ (1), ಹಾವೇರಿ (2), ಹಾಸನ (5), ಚಾಮರಾಜನಗರ (0), ರಾಯಚೂರು (0) ಮಂದಿಯನ್ನು ನಿಗಾ ವ್ಯವಸ್ಥೆಯಲ್ಲಿಡಲಾಗಿದೆ. ಹೀಗಾಗಿ ಈ ಎಲ್ಲಾ ಪ್ರಕರಣಗಳ ಕ್ವಾರಂಟೈನ್‌ ಅವಧಿ ಮುಗಿದು ನೆಗೆಟಿವ್‌ ಬರುವವರೆಗೂ ಈ ಜಿಲ್ಲೆಗಳನ್ನೂ ಹಸಿರುವ ವಲಯ ಎಂದು ಅಧಿಕೃತವಾಗಿ ಹೇಳಲು ಸಾಧ್ಯವಿಲ್ಲ. ಹೀಗಾಗಿ ಈ ಭಾಗದ ಜನರೂ ಸಹ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

click me!