
ಬೆಂಗಳೂರು(ಏ.13): ಕೊರೋನಾ ಸೋಂಕು ನಿಯಂತ್ರಣಕ್ಕೆ ಜಾರಿಯಲ್ಲಿರುವ ಲಾಕ್‌ಡೌನ್ ಏಪ್ರಿಲ್ 15ರ ನಂತರ ಕೊಂಚ ಸಡಿಲಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆಯೇ?
ಇಂತಹದ್ದೊಂದು ಮುನ್ಸೂಚನೆಯನ್ನು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ನೀಡಿದ್ದಾರೆ. ಭಾನುವಾರ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸಂಚರಿಸಿ ಲಾಕ್‌ಡೌನ್‌ನಿಂದ ಉಂಟಾಗಿರುವ ಪರಿಸ್ಥಿತಿ ಅವಲೋಕನ ನಡೆಸಿದ ವೇಳೆ ಮುಖ್ಯಮಂತ್ರಿಗಳ ಮುಂದೆ ಜನರು, ಲಾಕ್‌ಡೌನ್‌ನಿಂದ ತೀವ್ರ ಸಮಸ್ಯೆ ಅನುಭವಿಸುತ್ತಿರುವುದಾಗಿ ಹೇಳಿದರು. ಆಗ ವ್ಯಾಪಾರಿಗಳಿಗೆ ಏ. 15ರ ನಂತರ ಜನರ ಓಡಾಟಕ್ಕೆ ಕೊಂಚ ಅವಕಾಶ ನೀಡಲಾಗುವುದು ಎಂದು ಸಿಎಂ ಅಭಯ ನೀಡಿದರು.
ಲಾಕ್‌ಡೌನ್ ಉಲ್ಲಂಘನೆ ಪ್ರಶ್ನಿಸಿದ ಪೊಲೀಸ್ ಕೈಕಟ್!
ವಿಜಯನಗರದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಯಡಿಯೂರಪ್ಪ ಅವರು, ‘ಇಷ್ಟುದಿನ ಎಲ್ಲರೂ ಸಹಕಾರ ನೀಡಿದ್ದೀರಿ. ಇನ್ನು ಒಂದೆರಡು ದಿನ ಸಹಕಾರ ನೀಡಿ, ಎಲ್ಲವೂ ಹಂತ ಹಂತವಾಗಿ ಸರಿಹೋಗಲಿದೆ. ಏ.15ರಿಂದ ಜನರ ಓಡಾಟಕ್ಕೆ ಕೊಂಚ ಅವಕಾಶ ನೀಡಲಾಗುವುದು, ಅದೇ ರೀತಿ ಅಂಗಡಿಗಳನ್ನು ತೆರೆಯಲೂ ಅವಕಾಶ ಮಾಡಿಕೊಡಲಾಗುವುದು’ ಎಂದರು.
‘ಅಲ್ಲದೆ ವಿಜಯನಗರ ಮಾರುಕಟ್ಟೆಯಲ್ಲಿ ಬಾಳೆಹಣ್ಣು ಮಾರುವ ಮಹಿಳೆಯೊಬ್ಬರು ವ್ಯಾಪಾರವಿಲ್ಲದೆ ಬದುಕು ದುಸ್ತರವಾಗಿದೆ. ಮಾರಾಟವಿಲ್ಲದೆ ಬಾಳೆಹಣ್ಣುಗಳು ಕೊಳೆಯುತ್ತಿವೆ. ಹಾಕಿದ ಬಂಡವಾಳವೂ ಇಲ್ಲದೆ ನಷ್ಟ ಅನುಭವಿಸುತ್ತಿವೆ’ ಎಂದು ಅಳಲು ತೋಡಿಕೊಂಡಾಗ, ‘1-2 ದಿನ ಸಹಕರಿಸಿ ತಾಯಿ. ಆ ಮೇಲೆ ಜನರನ್ನು ಓಡಾಡಲು ಬಿಡುತ್ತೇವಮ್ಮಾ. ಜನರು ಓಡಾಡಲು ಆರಂಭವಾದ ಮೇಲೆ ಎಲ್ಲವೂ ಸರಿಹೋಗುತ್ತದೆ’ ಎಂದು ಸಮಾಧಾನ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ