ಚೀನಾದಲ್ಲಿ ಕಾಣಿಸಿಕೊಂಡಿರುವ ಡೆಡ್ಲಿ ಕರೋನಾ ವೈರಸ್ ಬಗ್ಗೆ ಇದೀಗ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಯಾಣಿಕರನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ.
ಬೆಂಗಳೂರು [ಜ.21]: ಭಾರತಕ್ಕೂ ಕರೋನಾ ವೈರಸ್ ಹರಡುವ ಭೀತಿ ಆವರಿಸಿದೆ. ಹೀಗಾಗಿ ‘ಕರೋನಾ ವೈರಸ್’ ಪತ್ತೆಯಾಗಿರುವ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲು ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ವಿಭಾಗದ ಜಂಟಿ ನಿರ್ದೇಶಕ ಡಾ.ಬಿ.ಜಿ. ಪ್ರಕಾಶ್ ಕುಮಾರ್ ಹೇಳಿದ್ದಾರೆ.
ಚೀನಾದಲ್ಲಿ ಭಾರತೀಯ ಶಿಕ್ಷಕಿಗೆ ಕರೋನಾ ವೈರಸ್?.
ಈಗಾಗಲೇ ನಿಯಮಿತವಾಗಿ ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (ಎಂಇಆರ್‌ಸ್) ಬಗ್ಗೆ ತಪಾಸಣೆ ನಡೆಯುತ್ತಿದೆ. ಇದೀಗ ಕರೋನಾ ವೈರಸ್‌ನಿಂದ ಚೀನಾದಲ್ಲಿ ಸಾವು ಸಂಭವಿಸಿರುವ ವರದಿ ಹಿನ್ನೆಲೆಯಲ್ಲಿ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಚಕ್ಷಣ ದಳವನ್ನು ನಿಯೋಜಿಸುವ ಮೂಲಕ ಅಂತಹ ದೇಶಗಳಿಂದ ಆಗಮಿಸುವವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಸಾಮಾನ್ಯವಾಗಿ ಶಂಕಿತ ರೋಗಿಗಳಿಗೆ ತೀವ್ರ ಜ್ವರ, ತಲೆನೋವು, ಮೈಕೈ ನೋವು, ಮೂಗು ಸೋರುವಿಕೆ, ಉಸಿರಾಟದ ತೊಂದರೆಯಂತಹ ಲಕ್ಷಣಗಳು ಕಂಡುಬರುತ್ತವೆ. ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ನ್ಯುಮೋನಿಯಾ ಮತ್ತು ಕೆಲ ಸಂದರ್ಭದಲ್ಲಿ ಸಾವು ಸಹ ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಶಂಕಿತರು ಹಾಗೂ ರೋಗಿಗಳ ಚಿಕಿತ್ಸೆಗಾಗಿ ಈಗಾಗಲೇ ರಾಜೀವ್ ಗಾಂಧಿ ಎದೆ ರೋಗ ಆಸ್ಪತ್ರೆಯಲ್ಲಿ 10 ಹಾಸಿಗೆ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲಾಗಿದೆ ಎಂದು ಪ್ರಕಾಶ್ ಕುಮಾರ್ ಮಾಹಿತಿ ನೀಡಿದರು.
ಜಗತ್ತಿನ ನಿದ್ದೆಗೆಡಿಸಿದೆ ಮಾರಕ ಕರೋನಾ ವೈರಸ್: ಏನಿದು ಕಾಯಿಲೆ? ಗುಣಲಕ್ಷಣಗಳೇನು?...
ಈ ಕರೋನಾ ವೈರಸ್ ಸಾಮಾನ್ಯವಾಗಿ ಒಂಟೆಗಳು, ಬಾವಲಿ ಮತ್ತು ಬೆಕ್ಕುಗಳಿಂದ ಹರಡುತ್ತದೆ. ಇವುಗಳ ಜತೆಗೆ ಮನುಷ್ಯರ ನಡುವೆ ಸಂಪರ್ಕ ಬೆಳೆದಾಗ ಕರೋನಾ ವೈರಸ್ ಹರಡುವ ಸಾಧ್ಯತೆಗಳಿವೆ. ಈ ವೈರಸ್ ವಾತಾವರಣದಲ್ಲಿ ಒಂದು ದಿನ ಪೂರ್ತಿ ಬದುಕುಳಿಯುವ ಸಾಮರ್ಥ್ಯ ಹೊಂದಿದ್ದು, ನೆಲಹಾಸಿನ ಮೇಲೆ ಇದು ದೀರ್ಘಕಾಲ ಜೀವಿಸುತ್ತದೆ ಎಂದು ಹೇಳಿದರು.