ಈ ಎರಡು ದೇಶಗಳಿಂದ ಬಂದರೆ ಕೋವಿಡ್‌ ಟೆಸ್ಟ್‌ ಕಡ್ಡಾಯ

By Kannadaprabha NewsFirst Published Feb 17, 2021, 8:02 AM IST
Highlights

ಬ್ರಿಟನ್ ಬಳಿಕ ಇದೀಗ ಮತ್ತೆರಡು ಕಡೆ ವೈರಸ್ ಆತಂಕ ಮನೆ ಮಾಡಿದೆ. ಈ ಎರಡು ದೇಶಗಳಿಂದ ಬಂದರೆ ಟೆಸ್ಟ್  ಕಡ್ಡಾಯ ಮಾಡಲಾಗಿದೆ. 

ಬೆಂಗಳೂರು (ಫೆ.17):  ಬ್ರಿಟನ್‌ನ ರೂಪಾಂತರಿ ಕೊರೋನಾ ವೈರಸ್‌ ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವುದು ಹಸಿರಾಗಿರುವಾಗಲೇ ಹೊಸದಾಗಿ ಬ್ರೆಜಿಲ್‌ ಮತ್ತು ದಕ್ಷಿಣ ಆಫ್ರಿಕಾದ ರೂಪಾಂತರಿ ಕೊರೋನಾ ವೈರಸ್‌ ಸೋಂಕಿನ ಪ್ರಕರಣಗಳು ದೇಶದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಈ ಎರಡು ದೇಶಗಳಿಂದ ರಾಜ್ಯಕ್ಕೆ ಆಗಮಿಸುವವರಿಗೆ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸುವುದನ್ನು ಕಡ್ಡಾಯ ಮಾಡಲಾಗಿದೆ.

ಬ್ರೆಜಿಲ್‌, ದಕ್ಷಿಣ ಆಫ್ರಿಕಾಗಳಲ್ಲಿ ವಿಮಾನ ಏರುವ ಮೊದಲು ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ನೆಗೆಟಿವ್‌ ವರದಿ ಬಂದಿದ್ದರೂ ಕೂಡ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇವರು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಬೇಕು. ಒಂದು ವೇಳೆ ಕೋವಿಡ್‌ ಪಾಸಿಟಿವ್‌ ಬಂದರೆ ಹದಿನಾಲ್ಕು ದಿನ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಬೇಕು ಮತ್ತು ಮಾದರಿಯನ್ನು ಜಿನೋಮ್‌ ಸಿಕ್ವೆನ್ಸಿಂಗ್‌ಗೆ ನಿಮ್ಹಾನ್ಸ್‌ ಸಂಸ್ಥೆಗೆ ಕಳುಹಿಸಿಕೊಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ: ಜನರಲ್ಲಿ ಹೆಚ್ಚಿದ ಆತಂಕ..! ..

ಪಾಸಿಟಿವ್‌ ವರದಿ ಬಂದವರನ್ನು 24 ಗಂಟೆಗಳ ಅಂತರದಲ್ಲಿ ಎರಡು ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿ ಎರಡರಲ್ಲೂ ನೆಗೆಟಿವ್‌ ವರದಿ ಬಂದ ಬಳಿಕವೇ ಡಿಸ್‌ಚಾರ್ಜ್ ಮಾಡಬೇಕು. ನೆಗೆಟಿವ್‌ ಬಂದವರು ಹದಿನಾಲ್ಕು ದಿನ ಹೋಮ್‌ ಕ್ವಾರಂಟೈನ್‌ನಲ್ಲಿರಬೇಕು. ಈ ಮಧ್ಯೆ ಏಳನೇ ದಿನ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಆದೇಶದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಈವರೆಗೆ 25 ಮಂದಿಯಲ್ಲಿ ಬ್ರಿಟನ್‌ ವೈರಸ್‌ ಕಾಣಿಸಿಕೊಂಡಿದ್ದು, ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 26 ಮಂದಿಗೆ ಸೋಂಕು ಹಬ್ಬಿತ್ತು. ಆದರೆ ಯಾವುದೇ ಜೀವಹಾನಿಯಾಗಲಿ, ಗಂಭೀರ ಆರೋಗ್ಯ ಸಮಸ್ಯೆಯಾಗಲಿ ಕಂಡುಬಂದಿಲ್ಲ.

click me!