
ಶ್ರೀಕಾಂತ್ ಎನ್.ಗೌಡಸಂದ್ರ
ಬೆಂಗಳೂರು(ಆ.02): ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು ಬೆಂಗಳೂರಿನ ಒಟ್ಟು ಜನಸಂಖ್ಯೆಯ ಪ್ರತಿ 10 ಲಕ್ಷ ಮಂದಿಗೆ ಬರೋಬ್ಬರಿ ಸರಾಸರಿ 105.6 ಮಂದಿ ಸಾವನ್ನಪ್ಪಿದ್ದಾರೆ.
ಈ ಅಂಶ ರಾಜ್ಯ ಸರ್ಕಾರದ ಕೊರೋನಾ ವಾರ್ ರೂಂ ಅಧ್ಯಯನದಿಂದ ಬಯಲಾಗಿದ್ದು, ರಾಜ್ಯದಲ್ಲಿ ಪ್ರತಿ 10 ಲಕ್ಷ ಮಂದಿಗೆ ಸಾರಸರಿ 31 ಮಂದಿ ಮಾತ್ರ ಮೃತಪಟ್ಟಿದ್ದಾರೆ. ರಾಜ್ಯದ ಸರಾಸರಿಗಿಂತ ಬೆಂಗಳೂರಿನಲ್ಲಿ ಮೂರು ಪಟ್ಟು ಹೆಚ್ಚು ಮಂದಿ ಮೃತಪಟ್ಟಿರುವುದು ಆತಂಕ ಮೂಡಿಸಿದೆ.
ಜು.29ರಂದು ಕೊರೋನಾ ವಾರ್ ರೂಂ ನಡೆಸಿದ ಅಧ್ಯಯನದಲ್ಲಿ ಕರ್ನಾಟಕದಲ್ಲಿ ಪ್ರತಿ 10 ಲಕ್ಷ ಮಂದಿಗೆ 29 ಮಂದಿ ಕೊರೋನಾದಿಂದ ಮೃತಪಟ್ಟಿದ್ದರೆ ಈ ವೇಳೆಗೆ ಬೆಂಗಳೂರಿನಲ್ಲಿ 102.6 ಸಾವು ವರದಿಯಾಗಿತ್ತು. ಜುಲೈ 29ಕ್ಕೆ ರಾಜ್ಯದಲ್ಲಿ ಒಟ್ಟು 2,147 ಮಂದಿ ಮೃತಪಟ್ಟಿದ್ದು ಈ ಪೈಕಿ ಬೆಂಗಳೂರಿನಲ್ಲೇ 987 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದರು.
ಆಗಸ್ಟ್ 1ರ ವೇಳೆಗೆ ರಾಜ್ಯದಲ್ಲಿ 1.29 ಲಕ್ಷ ಮಂದಿಗೆ ಸೋಂಕು ತಗುಲಿ ಸಾವಿನ ಸಂಖ್ಯೆ 2412ಕ್ಕೆ ಏರಿಕೆಯಾಗಿದ್ದು, ಬೆಂಗಳೂರಿನಲ್ಲಿ 1056 ಮಂದಿ ಸಾವನನ್ನಪ್ಪಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 105.6 ಹಾಗೂ ರಾಜ್ಯದಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 31 ಮಂದಿ ಮೃತಪಟ್ಟಂತಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಶನಿವಾರ ಕರ್ನಾಟಕದ 30 ಜಿಲ್ಲೆಗಳಲ್ಲೂ ಕೊರೋನಾ ಅಟ್ಟಹಾಸ: ಇಲ್ಲಿದೆ ಜಿಲ್ಲಾವಾರು ಅಂಕಿ-ಅಂಶ
ಜು.29ರ ಅಂಕಿ-ಅಂಶದ ಪ್ರಕಾರ ಬೆಂಗಳೂರು ಬಳಿಕ ಧಾರವಾಡದಲ್ಲಿ ಜನಸಂಖ್ಯಾವಾರು ಅತಿ ಹೆಚ್ಚು ಸಾವು ವರದಿಯಾಗಿದ್ದು ಪ್ರತಿ 10 ಲಕ್ಷ ಮಂದಿಗೆ 62.8 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ 58.9, ಮೈಸೂರು 42.7, ಬೀದರ್ 41.7, ಕಲಬುರಗಿ 32, ಹಾಸನ 29.3 ಮಂದಿ ಮೃತಪಟ್ಟಿದ್ದು ರಾಜ್ಯದ ಸರಾಸರಿಗಿಂತ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ ಚಿಕ್ಕಬಳ್ಳಾಪುರ 27.1, ಬಳ್ಳಾರಿ 26.9 ಮಂದಿ ಮೃತಪಟ್ಟಿದ್ದಾರೆ.
ಯಾದಗಿರಿಯಲ್ಲಿ ಕಡಿಮೆ ಸಾವು
ಯಾದಗಿರಿಯಲ್ಲಿ ಸೋಂಕಿತರ ಸಾವಿನ ಪ್ರಮಾಣ ಕಡಿಮೆ ಇದ್ದು ಪ್ರತಿ 100 ಸೋಂಕಿತರಲ್ಲಿ 1.7 ಮಂದಿ ಮಾತ್ರ ಸಾವನ್ನಪ್ಪಿದ್ದಾರೆ. ಇನ್ನು ಪ್ರತಿ 10 ಲಕ್ಷ ಜನಸಂಖ್ಯೆಗೆ ಶೇ.0.1 ರಷ್ಟುಮಂದಿ ಮಾತ್ರ ಮೃತಪಟ್ಟಿದ್ದಾರೆ. ಇದರ ಬಳಿಕ ಚಿತ್ರದುರ್ಗ 3.6, ಮಂಡ್ಯ 5.5, ಚಾಮರಾಜನಗರ 5.9, ರಾಮನಗರ 9.2 ಸೇರಿ ಬೆರಳೆಣಿಕೆ ಜಿಲ್ಲೆಗಳು ಮಾತ್ರ ಪ್ರತಿ 10 ಲಕ್ಷ ಮಂದಿಗೆ 10 ಕ್ಕೂ ಕಡಿಮೆ ಮಂದಿ ಮೃತಪಟ್ಟಜಿಲ್ಲೆಗಳ ಪಟ್ಟಿಯಲ್ಲಿವೆ.
ಸಾವಿನ ಪ್ರಮಾಣ ಮೈಸೂರು ನಂ.1
ಉಳಿದಂತೆ ಪ್ರತಿ 100 ಮಂದಿ ಸೋಂಕಿತರಲ್ಲಿ ಹೆಚ್ಚು ಮಂದಿ (ಶೇ.3.6) ಮಂದಿ ಸಾವನ್ನಪ್ಪುವ ಮೂಲಕ ಸಾವಿನ ದರದಲ್ಲಿ ಮೈಸೂರು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸರಾಸರಿ 1.9 ಮಂದಿ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಶೇ.2 ಸಾವು ಉಂಟಾಗಿದೆ. ಉಳಿದಂತೆ ಮೈಸೂರು ಬಳಿಕ ಬೀದರ್ 3.5, ತುಮಕೂರು 3.2, ಧಾರವಾಡ 3.1, ಬಾಗಲಕೋಟೆ ಶೇ.3 ಸಾವಿನ ದರ ಹೊಂದಿದ್ದು ಪ್ರತಿ 100 ಮಂದಿ ಸೋಂಕಿತರಲ್ಲಿ 3ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಕಡಿಮೆ ಸಾವಿನ ದರದಲ್ಲಿ ಬೆಂಗಳೂರು ಗ್ರಾಮಾಂತರ 0.05, ಉಡುಪಿ 0.6, ಮಂಡ್ಯ 0.7, ಚಾಮರಾಜನಗರ ಶೇ.1 ರಷ್ಟು ಸಾವು ಮಾತ್ರ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ