ಕರ್ನಾಟಕದಲ್ಲಿ ಹತ್ತೇ ದಿನದಲ್ಲಿ ಕೊರೋನಾ 3 ಪಟ್ಟು ಹೆಚ್ಚಳ..!

By Kannadaprabha NewsFirst Published Jun 12, 2022, 9:04 AM IST
Highlights

*   562 ಹೊಸ ಕೇಸ್‌
*  ಮೂರೂವರೆ ತಿಂಗಳಲ್ಲೇ ಗರಿಷ್ಠ
*  ಪರೀಕ್ಷೆ ಐದು ಸಾವಿರ ಹೆಚ್ಚಳ:
 

ಬೆಂಗಳೂರು(ಜೂ.12):  ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಕೇವಲ 10 ದಿನಕ್ಕೆ ಮೂರು ಪಟ್ಟು ಹೆಚ್ಚಳವಾಗಿವೆ. ಅಲ್ಲದೆ, ರಾಜಧಾನಿ ಬೆಂಗಳೂರಲ್ಲಿ ಮೂರೂವರೆ ತಿಂಗಳ ಬಳಿಕ ಹೊಸ ಪ್ರಕರಣಗಳು 500 ಗಡಿದಾಟಿವೆ.

ಶನಿವಾರ 562 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 352 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 3,387 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 27 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ ಶೇ.2.07ರಷ್ಟುದಾಖಲಾಗಿದೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 5 ಸಾವಿರ ಹೆಚ್ಚಾಗಿವೆ. ಹೀಗಾಗಿ, ಹೊಸ ಪ್ರಕರಣಗಳು 37 ಏರಿಕೆಯಾಗಿವೆ. (ಶುಕ್ರವಾರ 525, ಪ್ರಕರಣಗಳು, ಸಾವು ಶೂನ್ಯ).

ರಾಜ್ಯದಲ್ಲಿ 11 ಕೋಟಿ ಡೋಸ್‌ ಲಸಿಕೆ: ಮಹತ್ವದ ಮೈಲಿಗಲ್ಲು ದಾಟಿದ ಕೋವಿಡ್‌ ವ್ಯಾಕ್ಸಿನ್‌ ಅಭಿಯಾನ

ಜೂ.1 ರಂದು 178 ಇದ್ದ ಹೊಸ ಪ್ರಕರಣಗಳು ಸತತ ಐದು ದಿನಗಳ ಏರಿಕೆಯಾಗುತ್ತಾ ಸಾಗಿ 562ಕ್ಕೆ ಬಂದು ತಲುಪಿವೆ. ಈ ಮೂಲಕ ಕೇವಲ 10 ದಿನಗಳಲ್ಲಿ ಹೊಸ ಪ್ರಕರಣಗಳು ಮೂರು ಪಟ್ಟಾಗಿವೆ. ಇನ್ನೊಂದೆಡೆ ರಾಜ್ಯದ ಒಟ್ಟಾರೆ ಪ್ರಕರಣಗಳ ಪೈಕಿ 545(ಶೇ.97 ರಷ್ಟು) ಬೆಂಗಳೂರು ಒಂದರಲ್ಲಿಯೇ ಪತ್ತೆಯಾಗಿವೆ. ಅಲ್ಲದೆ, ಮೂರೂವರೆ ತಿಂಗಳ ಬಳಿಕ ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು ಐದು ನೂರು ಗಡಿದಾಟಿವೆ. ಉಳಿದಂತೆ ಮೈಸೂರು 4, ದಕ್ಷಿಣ ಕನ್ನಡ 3, ಚಿತ್ರದುರ್ಗ 2, ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಹಾಸನ, ತುಮಕೂರು, ಉತ್ತರ ಕನ್ನಡ, ಉಡುಪಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 29 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

106 ದಿನದ ಅಧಿಕ:

ಈ ಹಿಂದೆ ಫೆಬ್ರವರಿ 25 ರಂದು 628 ಕೊರೋನಾ ಪ್ರಕರಣಗಳು ವರದಿಯಾಗಿದ್ದವು. 106 ದಿನಗಳ ಬಳಿಕ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕಳೆದ ಆರು ದಿನಗಳಿಂದ ಸೋಂಕಿತರ ಸಾವು ವರದಿಯಾಗಿಲ್ಲ. ಇನ್ನು ರಾಜ್ಯದಲ್ಲಿ ಈವರೆಗೆ 39.5 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.1 ಲಕ್ಷ ಮಂದಿ ಗುಣಮುಖರಾಗಿದ್ದು, 40,066 ಮಂದಿ ಸಾವಿಗೀಡಾಗಿದ್ದಾರೆ.

ಪರೀಕ್ಷೆ ಐದು ಸಾವಿರ ಹೆಚ್ಚಳ:

ಪ್ರಸಕ್ತ ವಾರ ಆರಂಭದಲ್ಲಿ 17 ಸಾವಿರ ಆಸುಪಾಸಿನಲ್ಲಿದ್ದ ಕೊರೋನಾ ಸೋಂಕು ಪರೀಕ್ಷೆಗಳು ಗುರುವಾರ ಮತ್ತು ಶುಕ್ರವಾರ 22 ಸಾವಿರಕ್ಕೆ ಏರಿಕೆಯಾಗಿದ್ದವು. ಸದ್ಯ ಒಂದೇ ದಿನದಲ್ಲಿ ಐದು ಸಾವಿರ ಹೆಚ್ಚಳವಾಗಿ 27 ಸಾವಿರ ತಲುಪಿವೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಪರೀಕ್ಷೆಗಳು ಹೆಚ್ಚಳವಾಗಿವೆ.

click me!