
ಬೆಂಗಳೂರು(ಫೆ.23): ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು ತಮ್ಮ ಯೋಜನೆಗಳ ಮೂಲಕ ಜನಮೆಚ್ಚುಗೆ, ಜನರ ವಿಶ್ವಾಸವನ್ನು ಹೆಚ್ಚಿಸಿಕೊಂಡಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ ಹಿಜಾಬ್ ಒಳಗೆ ಸೇರಿಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್(Nalin Kumar Kateel) ಲೇವಡಿ ಮಾಡಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ(BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್(Hijab) ಗಲಭೆಯನ್ನು ಪ್ರಾರಂಭಿಸಲು ಎರಡೂ ಶಕ್ತಿಗಳು ಒಂದುಗೂಡಿವೆ. ಇದರಲ್ಲಿ ಮಾನಸಿಕ ಮತ್ತು ಬೌದ್ಧಿಕ ಚಿಂತನೆ ಕಾಂಗ್ರೆಸ್(Congress) ಪಕ್ಷದ್ದಾದರೆ, ದೈಹಿಕ ಚಿಂತನೆ ಎಸ್‌ಡಿಪಿಐನದ್ದು(SDPI). ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಜೊತೆಗೂಡಿ ಹಿಜಾಬ್ ಗಲಭೆಯನ್ನು ಸೃಷ್ಟಿಸಿವೆ. ಕಾಂಗ್ರೆಸ್ಸಿಗೆ ಹಿಜಾಬ್ ವಿಚಾರದಲ್ಲಿ ನಷ್ಟ ಆಗುವ ಅರಿವಾಗಿ ಅದು ಆತಂಕಕ್ಕೆ ಒಳಗಾಗಿದೆ ಎಂದು ವಿಶ್ಲೇಷಿಸಿದರು.
ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷ ಕಗ್ಗೊಲೆ, ಮೊದಲ ಪ್ರತಿಕ್ರಿಯೆ ಕೊಟ್ಟ SDPI ಸಂಘಟನೆ
ಸಿಎಎ(CAA) ಗಲಭೆಯಲ್ಲೂ ಕಾಂಗ್ರೆಸ್ ಪಾತ್ರವಿತ್ತು. ಡಿಜೆ ಹಳ್ಳಿ-ಕೆಜೆ ಹಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಕೈವಾಡವಿತ್ತು. ರಾಜ್ಯದಲ್ಲಿ(Karnataka) ಅವಾಂತರ ಮಾಡಲು ಗಲಭೆಗಳಿಗೆ ಕಾಂಗ್ರೆಸ್ ಬೆಂಗಾವಲಾಗಿ ನಿಂತಿದೆ. ಹಿಜಾಬ್ ವಿಷಯದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸಿದೆ. ಸದನದಲ್ಲಿ ಚರ್ಚೆ ಮಾಡಬೇಕಿದ್ದ ವಿರೋಧ ಪಕ್ಷವಾದ ಕಾಂಗ್ರೆಸ್, ಧರಣಿ ಮೂಲಕ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ವಿಧಾನಸಭೆ, ವಿಧಾನ ಪರಿಷತ್ ಮೇಲೆ ನಂಬಿಕೆ ಇಲ್ಲ. ಕೇವಲ ರಾಜಕಾರಣಕ್ಕಾಗಿ ಕಾಂಗ್ರೆಸ್ಸಿಗರು ಧರಣಿ ಕುಳಿತಿದ್ದಾರೆ. ಕಾಂಗ್ರೆಸ್‌ನ ಈ ನಿಲುವನ್ನು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಖಂಡಿಸುತ್ತದೆ. ವಿರೋಧ ಪಕ್ಷವಾಗಿ ಅದು ನಾಲಾಯಕ್ ಪಾರ್ಟಿ ಎಂದರು.
ಕೇಂದ್ರದ ಯೋಚನೆ ಮತ್ತು ಯೋಜನೆಗಳಿಗೆ ಕರ್ನಾಟಕದ ಕಾರ್ಯಕರ್ತರು ತಕ್ಷಣ ಸ್ಪಂದಿಸುತ್ತಿದ್ದಾರೆ. ಕೇಂದ್ರದ ಸೂಚನೆಯಂತೆ ಪಾರ್ಟಿ ವಿಸ್ತರಣೆಗೊಂಡಿದೆ. ಅದರ ಆಧಾರದಲ್ಲಿ ಮತಗಟ್ಟೆಅಧ್ಯಕ್ಷರ ಆಯ್ಕೆ, ಪೇಜ್ ಪ್ರಮುಖರ ನೇಮಕ, ವಿಸ್ತಾರಕರ ಯೋಜನೆ ಅನುಷ್ಠಾನವೂ ಸಮರ್ಪಕವಾಗಿ ನಡೆಯುತ್ತಿದೆ. ಶೇ 50 ರಷ್ಟು ಪೇಜ್ ಸಮಿತಿಗಳೂ ರಚನೆಯಾಗಿವೆ. ಸಂಘಟನಾತ್ಮಕವಾಗಿ ನಾವು ಯಶಸ್ಸು ಪಡೆದಿದ್ದೇವೆ. ಮುಂದಿನ ಕಾರ್ಯಚಟುವಟಿಕೆಗಳ ಅನುಷ್ಠಾನದ ಕುರಿತು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi), ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್(Arun Kumar), ಪದಾಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.
ಹೊಸಪೇಟೆಯಲ್ಲಿ ಮುಂದಿನ ಕಾರ್ಯಕಾರಿಣಿ
ಬರುವ ಮಾರ್ಚ್ 27 ಮತ್ತು 28ರಂದು ಎರಡು ದಿನಗಳ ಕಾಲ ವಿಜಯನಗರ(Vijayanagara) ಜಿಲ್ಲೆಯ ಹೊಸಪೇಟೆಯಲ್ಲಿ(Hosapete) ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಕಟಿಸಿದ್ದಾರೆ.
Right-Wing Activist Murder: ಹಂತಕರಿಗೆ ಶಿಕ್ಷೆ ಆಗೇ ಅಗುತ್ತದೆ: ಬಿಎಸ್‌ವೈ
ಯುವಕನ ಕೊಲೆಗೆ ಸಚಿವ ಈಶ್ವರಪ್ಪ ಪರೋಕ್ಷ ಕಾರಣ: ಹರಿಪ್ರಸಾದ್
ಬೆಂಗಳೂರು: ರಾಷ್ಟ್ರಧ್ವಜ ಅಪಮಾನ ಪ್ರಕರಣದಲ್ಲಿ ರಾಜೀನಾಮೆಯಿಂದ ತಪ್ಪಿಸಿಕೊಳ್ಳಲು ಸಚಿವ ಕೆ.ಎಸ್. ಈಶ್ವರಪ್ಪ(KS Eshwarappa) ಅವರು ಶಿವಮೊಗ್ಗದಲ್ಲಿ ಯುವಕನ ಕೊಲೆಗೆ ಪರೋಕ್ಷ ಕಾರಣರಾಗಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್(BK Hariprasad) ಆರೋಪಿಸಿದ್ದಾರೆ.
ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್(Congress) ಸದಸ್ಯರು ಪ್ರತಿಭಟನೆ ನಡೆಸುವ ವೇಳೆ ಮಾತನಾಡಿದ ಅವರು, ಯುವಕನ ಕೊಲೆ ಸಂಬಂಧ ಪೊಲೀಸ್ ತನಿಖೆ ನಡೆಯುವ ಮುನ್ನವೇ ಈಶ್ವರಪ್ಪ ಅವರು, ಮುಸ್ಲಿಂ(Muslim) ಗೂಂಡಾಗಳು ಕೊಲೆಗೆ ಕಾರಣ ಎಂದು ಹೇಳಿರುವುದನ್ನು ನೋಡಿದರೆ, ಅವರಿಗೆ ಎಲ್ಲ ಬಗೆಯ ಮಾಹಿತಿ ಮೊದಲೇ ಗೊತ್ತಿತ್ತು ಎಂದು ಕಾಣುತ್ತದೆ. ಘಟನೆ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಬೇಕಿತ್ತು, ಘಟನೆ ಬಗ್ಗೆ ಪೊಲೀಸ್ ತನಿಖೆ ನಡೆಯದೇ ಈಶ್ವರಪ್ಪ ಅವರು ಈ ರೀತಿ ಹೇಳಿಕೆ ನೀಡಿದ್ದಾರೆ, ಅವರಿಗೆ ಬಹುಶಃ ಸಂಪೂರ್ಣ ಮಾಹಿತಿ ಇತ್ತೆಂದು ಕಾಣುತ್ತದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ