
ಕಲಬುರಗಿ (ಜೂ.26): ಕಾಂಗ್ರೆಸ್ ನವರ ಮನೆಗಳಿಗೆ ಅಷ್ಟೇ ನೀರು ಬಿಡುತ್ತಾರೆ, ಬಿಜೆಪಿಗರ ಮನೆಗಳಿಗೆ ನೀರು ಹರಿಸುವುದಿಲ್ಲ ಎಂದು ವಾಟ್ಸಾಪ್ ಸ್ಟೇಟಸ್ ಹಾಕಿದ್ದ ವಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಈರಣ್ಣ ಯಾರಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ವಾಡಿಯಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ವಾಡಿಯ ಪುರಸಭೆಯ ಸಿಬ್ಬಂದಿ ಕಾಂಗ್ರೆಸ್ ಮುಖಂಡರ ಮನೆಗಳಿಗೆ ನೀರು ಸರಬರಾಜು ಆಗುತ್ತಿಲ್ಲ, ನಮ್ಮ ಬಿಜೆಪಿ ಮನೆಗಳ ನೀರನ್ನು ಸ್ಥಗಿತಗೊಳಿಸಿ ಅನಧಿಕೃತವಾಗಿ ಮತ್ತೊಂದು ಪೈಪನ್ನು ಹಾಕಿ ನೀರು ಪೂರೈಸುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಪುರಸಭೆಗೆ ಮುತ್ತಿಗೆ ಹೋಕೋದಾಗಿ ವೀರಣ್ಣ ಯಾರಿ ಮೊಬೈಲ್ ಸ್ಟೇಟಸ್ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ.
ಹಲ್ಲೆ ನಡೆಸುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಸ್ಪತ್ರೆಗೆ ಛಲವಾದಿ ನಾರಾಯಣ ಸ್ವಾಮಿ ಭೇಟಿ
ಕಲಬುರಗಿ: ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ಈರಣ್ಣ ಯಾರಿ ಚಿಕಿತ್ಸೆ ಪಡೆಯುತ್ತಿರುವ ಕಲಬುರಗಿ ಟ್ರಾಮಾ ಕೇರ್ ಸೆಂಟರ್‌ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ ಈರಣ್ಣ ಅವರ ಆರೋಗ್ಯ ವಿಚಾರಿಸಿದರು
ನಂತರ ಸುದ್ದಿಗರೊಂದಿಗೆ ಮಾತನಾಡಿ, ನಾವು ಈ ಮುಂಚೆಯೇ ಹೇಳಿದ್ದೆವು, ಇತ್ತೀಚೆಗೆ ಕಲಬುರಗಿ ರಿಪಬ್ಲಿಕ್ ಆಫ್ ಕಲಬುರಗಿ ಆಗುತ್ತಿದೆ ಎಂದು ಹೆಸರು ಹೇಳದೆ ಉಸ್ತುವಾರಿ ಸಚಿವ ಖರ್ಗೆರನ್ನು ಟೀಕಿಸಿದರು.
ನಮ್ಮ ಮಾತು ಅದು ಈಗ ಸತ್ಯವಾಗ್ತಿದೆ:
ನೀರು ಬಿಡುವ ವಿಚಾರದಲ್ಲಿ ನಮ್ಮ ಕಾರ್ಯಕರ್ತರು ಸ್ಟೇಟಸ್ ಹಾಕಿದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಆದರೂ ತಕ್ಷಣ ಎಫ್‌ಐಆರ್ ದಾಖಲಿಸಿಕೊಳ್ಳಲಿಲ್ಲ. ಸೇಡಂನಲ್ಲಿ ಚರಂಡಿ ಸಮಸ್ಯೆ ಬಗ್ಗೆ ನಮ್ಮ ಕಾರ್ಯಕರ್ತರು ಮುಖ್ಯ ಅಧಿಕಾರಿಯನ್ನು ಕೇಳಿದರೆ ಧಮ್ಕಿ ಹಾಕುತ್ತಾರೆ, ದೂರು ಕೊಡಲು ಹೋದ್ರೆ ಕೇಸ್ ತೆಗೆದುಕೊಳ್ಳಲ್ಲ ಎಂದು ಆಕ್ರೋಶ ಹೊರ ಹಾಕಿದರು.
ನಾವೇನಾದ್ರು ಮನಸ್ಸು ಮಾಡಿದ್ರೆ ಬಿಜೆಪಿ ಅವರನ್ನು ರಸ್ತೆಯಲ್ಲಿ ಓಡಾಡಲು ಬಿಡಲ್ಲ ಅಂತ ಕಾಂಗ್ರೆಸ್‌ನವರು ಅಂದಿದ್ದರು. ನಾವೂ ಸುಮ್ಮನೆ ಕೂಡಲೂ ಆಗಲ್ಲ, ನಮ್ಮ ಕಾರ್ಯಕರ್ತರನ್ನ ರಕ್ಷಣೆ ಮಾಡುವ ಕೆಲಸ ನಾವು ಮುಖಂಡರೆಲ್ಲ ಮಾಡುತ್ತೇವೆ ಎಂದರು.
ನಮ್ನ ಕಾರ್ಯಕರ್ತರು ಏನಾದ್ರು ಮಾತಾಡಿದ್ರೆ ಗೂಂಡಾ ಕಾಯ್ದೆ ಹಾಕ್ತಿದ್ದಾರೆ. ನನ್ನನ್ನ ಕೂಡಿಹಾಕಿದ್ರು. ಇದು ಬಹಳ ದಿನ ನಡೆಯೋದಿಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ಇರೋರರಲ್ಲಿ ಬಿ.ಆರ್.ಪಾಟೀಲರು ಗಂಡಸುತನ ತೋರಿದ್ದಾರೆ
ಸರ್ಕಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಶಾಸಕರ ಹೇಳಿಕೆ ವಿಚಾರವಾಗಿ ಮಾತಾಡಿದ ಛಲವಾದಿ ನಾರಾಯಣ ಸ್ವಾಮಿ, ಕಾಂಗ್ರೆಸ್ ಪಕ್ಷದಲ್ಲಿ ಗಂಡಸ್ತನ ಇರೋರು ಯಾರೂ ಇಲ್ಲ ಅನ್ಕೊಂಡಿದ್ದೆ, ಆದ್ರೆ ಬಿ.ಆರ್.ಪಾಟೀಲ್ ಅವರು ಗಂಡಸುತನ ತೋರಿದ್ದಾರೆ ಎಂದು ತಿವಿದರು.
ರಾಜು ಕಾಗೆ, ಗೋಪಾಲಕೃಷ್ಣ ಅವರು ಮಾತಾಡ್ತಿದ್ದಾರೆ. ಕಾಂಗ್ರೆಸ್ ಶಾಸಕರೇ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೆ ಎಂದರು.
ನಾವು ಭ್ರಷ್ಟಾಚಾರ ನಡೆಯುತ್ತಿದೆ ಅಂತ ಹೇಳಿದ್ದೆವು. ಅವರು ಸಾಕ್ಷಿ ಕೊಡಿ ಅಂತಿದ್ರು, ಈಗ ಅವರ ಶಾಸಕರೆ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಿದ್ದಾರೆ, ಕಾಂಗ್ರೆಸ್ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಒಂದೂ ಅಭಿವೃದ್ಧಿ ಕಾರ್ಯ ಇಲ್ಲ, ಬರೀ ಗ್ಯಾರಂಟಿಯಲ್ಲಿ ಮುಳುಗಿದೆ ಸರ್ಕಾರ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ