'ವಿನಯ್‌ ಕುಲಕರ್ಣಿ, ಜಮೀರ್‌ ಪರ ನಿಂತ ಕಾಂಗ್ರೆಸ್‌'

By Kannadaprabha NewsFirst Published Aug 23, 2021, 10:23 AM IST
Highlights

*  ಪಕ್ಷ ಸಂಘಟನೆಯಲ್ಲಿ ವಿನಯ್‌ ಕುಲಕರ್ಣಿ ಪೂರ್ಣ ಬಳಕೆ
*  ರಾಜಕೀಯ ದ್ವೇಷದ ದಾಳಿಗೆ ಒಳಗಾದವರಿಗೆ ನಾವು ಸ್ಪಂದಿಸಬೇಕು
*  ಕೊರೋನಾ ನಿಯಮ ಉಲ್ಲಂಘನೆ ಮಾಡಿರುವ ಕೇಂದ್ರ ಸಚಿವರ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ?
 

ಬೆಂಗಳೂರು(ಆ.23):  ಜೈಲಿನಿಂದ ಬಿಡುಗಡೆಯಾಗಿರುವ ಮಾಜಿ ಸಚಿವ ಹಾಗೂ ಇ.ಡಿ. ದಾಳಿ ಎದುರಿಸುತ್ತಿರುವ ಜಮೀರ್‌ ಅಹಮದ್‌ ಖಾನ್‌ ಪರ ಕಾಂಗ್ರೆಸ್‌ ಪಕ್ಷ ಬಲವಾಗಿ ನಿಲ್ಲಲಿದೆ. ವಿನಯ್‌ ಕುಲಕರ್ಣಿ ಅವರನ್ನು ಪಕ್ಷ ಸಂಘಟನೆಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿನಯ್‌ ಕುಲಕರ್ಣಿ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವರಾಗಿದ್ದು, ಅವರು ಕಾಂಗ್ರೆಸ್‌ನ ಭಾಗ. ಅವರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳಲಾಗುವುದು. ಇದರಲ್ಲಿ ಅನುಮಾನವೇ ಬೇಡ ಎಂದು ಸ್ಪಷ್ಟಪಡಿಸಿದರು.

ಸಚಿವ ಗಡ್ಕರಿ ಹೇಳಿಕೆ ಉಲ್ಲೇಖಿಸಿ ಸಿ.ಟಿ.ರವಿಗೆ ಕಾಂಗ್ರೆಸ್‌ ತರಾಟೆ

ನಿಮ್ಹಾನ್ಸ್‌ಗೆ ಹೋಗುತ್ತೇನೆ: 

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಬಿಜೆಪಿ ನಾಯಕರ ಕೊಡುಗೆ ಹೆಚ್ಚಿದೆ ಎಂಬ ಸಿ.ಟಿ.ರವಿ ಹೇಳಿಕೆ ಕುರಿತು ವ್ಯಂಗ್ಯವಾಡಿದ ಶಿವಕುಮಾರ್‌, ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೆ ಸಿ.ಟಿ.ರವಿ. ಅವರಿಂದಲೇ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿದರು. ಇನ್ನು ಕಾಂಗ್ರೆಸ್‌ ನಾಯಕರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ, ‘ನಾವು ಈಗಲೇ ನಿಮ್ಹಾನ್ಸ್‌ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತೇವೆ. ತಕ್ಷಣ ಚಿಕಿತ್ಸೆ ಪಡೆಯುತ್ತೇವೆ’ ಎಂದು ತಿರುಗೇಟು ನೀಡಿದರು.

ವಿನಯ್‌ ಕುಲಕರ್ಣಿ ಅವರ ಮೇಲೆ ಕೊರೋನಾ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸಿರುವುದು ಸಂತೋಷ. ಆದರೆ, ಇದೇ ರೀತಿ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ಮೂಲಕ ಕೊರೋನಾ ನಿಯಮ ಉಲ್ಲಂಘನೆ ಮಾಡಿರುವ ಕೇಂದ್ರ ಸಚಿವರ ವಿರುದ್ಧ ಯಾಕೆ ಪ್ರಕರಣ ದಾಖಲಿಸಿಲ್ಲ? ಬಿಜೆಪಿ ಕಾರ್ಯಕರ್ತರ ಸಭೆ ಮಾಡಿದಾಗ ಯಾಕೆ ಪ್ರಕರಣ ದಾಖಲಿಸಿಲ್ಲ? ಸರ್ಕಾರ ತಮಗೆ ಬೇಕಾದ ರೀತಿಯಲ್ಲಿ ಕಾನೂನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

ಶಾಸಕ ಅವರ ಬಗ್ಗೆ ಕೇಳಿದ ಪ್ರಶ್ನೆಗೆ, ‘ಇ.ಡಿ. ದಾಳಿ ವಿಚಾರವಾಗಿ ಶಾಸಕ ಜಮೀರ್‌ ಅವರು ಸ್ಪಷ್ಟನೆ ನೀಡಿದ್ದಾರೆ. ನಿರಪರಾಧಿಗಳಿಗೆ, ರಾಜಕೀಯ ದ್ವೇಷದ ದಾಳಿಗೆ ಒಳಗಾದವರಿಗೆ ನಾವು ಸ್ಪಂದಿಸಬೇಕು. ಅದನ್ನು ಮಾಡುತ್ತಿದ್ದೇವೆ’ ಎಂದರು.
 

click me!